ಸಿಡ್ನಿಯಲ್ಲಿಳಿದ ಟೀಂ ಇಂಡಿಯಾ ಆಟಗಾರರಿಗೆ 14 ದಿನ ಕ್ವಾರಂಟೈನ್..!
ಆಸ್ಟ್ರೇಲಿಯಾ ವಿರುದ್ಧ ದೀರ್ಘಕಾಲಿಕ ಸರಣಿಯನ್ನಾಡಲು ಟೀಂ ಇಂಡಿಯಾ ಸಿಡ್ನಿಗೆ ಬಂದಿಳಿದಿದ್ದು, ಅಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ನ.13): ಅರಬ್ಬರ ನಾಡಿನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಗಿಸಿ ಇದೀಗ ನವೆಂಬರ್ 27 ರಿಂದ ಆರಂಭವಾಗಲಿರುವ ಆಸ್ಪ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಯನ್ನಾಡಲು ಇಲ್ಲಿಗೆ ಆಗಮಿಸಿರುವ ಟೀಂ ಇಂಡಿಯಾ ಗುರುವಾರ ಸಿಡ್ನಿಗೆ ಬಂದಿಳಿದಿದೆ.
2 ತಿಂಗಳುಗಳ ಕಾಲ ಆಸೀಸ್ ತಂಡದೊಟ್ಟಿಗೆ ಕ್ರಿಕೆಟ್ ಆಡಲಿರುವ ಭಾರತ ತಂಡ, 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಲಿದೆ. ನ್ಯೂ ಸೌತ್ ವೇಲ್ಸ್ ಸರ್ಕಾರ, ಭಾರತ ತಂಡದ 2 ವಾರಗಳ ಕ್ವಾರಂಟೈನ್‌ಗೆ ಬ್ಲಾಕ್‌ಟೌನ್ ಅಂತರರಾಷ್ಟ್ರೀಯ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ವ್ಯವಸ್ಥೆ ಮಾಡಿದೆ.
ಆಸೀಸ್‌ಗೆ ಹೊರಟ ತಂಡಕ್ಕೆ ಸ್ಪೆಶಲ್ ಪಿಪಿಇ ಕಿಟ್. ಯಾರೆಲ್ಲ ಮಿಸ್ಸಿಂಗ್!
ಟೀಂ ಇಂಡಿಯಾ ಆಟಗಾರರು ಬಯೋ-ಬಬಲ್ ವ್ಯಾಪ್ತಿಯೊಳಗಿದ್ದುಕೊಂಡೇ ಸಿಡ್ನಿಯಲ್ಲಿ ನವೆಂಬರ್ 14ರಿಂದ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಆಸೀಸ್ ಸರಣಿಗೆ ಆಯ್ಕೆಯಾದ ಎಲ್ಲಾ ಆಟಗಾರರು ಈಗಾಗಲೇ ಸಿಡ್ನಿಗೆ ಬಂದಿಳಿದ್ದಾರೆ. ಆದರೆ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಇಶಾಂತ ಶರ್ಮಾ ಡಿಸೆಂಬರ್ 17ರಿಂದ ಆರಂಭವಾಗಲಿರು ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನವೆಂಬರ್ 27ರಿಂದ ಡಿಸೆಂಬರ್ 08ರವರೆಗೆ 3 ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಆ ಬಳಿಕ ಡಿಸೆಂಬರ್ 17ರಿಂದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಾಡಲಿದೆ.