ಲಂಡನ್(ಜೂ.04)‌: ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್‌ಗೆ ಟೆಸ್ಟ್‌ ಸರಣಿಯನ್ನಾಡಲು ಬಂದಿಳಿದ್ದು, ಸೌಥಾಂಪ್ಟನ್‌ನ ಕ್ರಿಕೆಟ್ ಮೈದಾನದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಪೋಸ್‌ ಕೊಟ್ಟಿದ್ದಾರೆ.

ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸ್ಟೇಡಿಯಂನ ಬಾಲ್ಕನಿಯಲ್ಲಿ ನಿಂತು, ನಾವು ಸೌಥಾಂಪ್ಟನ್‌ನಲ್ಲಿದ್ದೇವೆ ಎಂದು ಪಂತ್ ಜತೆ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾ ಮಾತ್ರವಲ್ಲದೇ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಟೀಂ ಇಂಡಿತಾ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಕೂಡಾ ಸೌಥಾಂಪ್ಟನ್‌ನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

ಕಿವೀಸ್, ಭಾರತದೆದುರು ಕ್ಲೀನ್ ಸ್ವೀಪ್‌ ಮಾಡಲು ಎದುರು ನೋಡುತ್ತಿದ್ದೇವೆ: ಜೋ ರೂಟ್‌

ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್‌ ತಂಡಗಳು ಗುರುವಾರ(ಜೂ.03) ಇಂಗ್ಲೆಂಡ್‌ ತಲುಪಿದವು. ಬುಧವಾರ ರಾತ್ರಿ ಮುಂಬೈನಿಂದ ವಿಶೇಷ ವಿಮಾನದಲ್ಲಿ ಲಂಡನ್‌ಗೆ ಪ್ರಯಾಣಿಸಿದ ತಂಡ, ಅಲ್ಲಿಂದ ನೇರವಾಗಿ ಸೌಥಾಂಪ್ಟನ್‌ ತಲುಪಿತು. ಸೌಥಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲೇ ಇರುವ ಹೋಟೆಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಕ್ವಾರಂಟೈನ್‌ನಲ್ಲಿ ಇರಲಿವೆ. 3 ದಿನಗಳ ಕಠಿಣ ಕ್ವಾರಂಟೈನ್‌ ಬಳಿಕ, ಅಭ್ಯಾಸ ಆರಂಭಿಸಲು ಅನುಮತಿ ದೊರೆತಿದೆ. 

ಮಹಿಳಾ ತಂಡ ಕ್ವಾರಂಟೈನ್‌ ಬಳಿಕ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಆಡಲು ಬ್ರಿಸ್ಟಲ್‌ಗೆ ತೆರಳಲಿದ್ದು, ಪುರುಷರ ತಂಡ ಸೌಥಾಂಪ್ಟನ್‌ನಲ್ಲೇ ನ್ಯೂಜಿಲೆಂಡ್‌ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವನ್ನು ಆಡಲಿದೆ. ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಫ್‌ ಫೈನಲ್‌ ಪಂದ್ಯವು ಜೂನ್ 18ರಿಂದ ಆರಂಭವಾಗಲಿದೆ. ಇದಾದ ಬಳಿಗೆ ಆಗಸ್ಟ್ ಹಾಗೂ ಸೆಪ್ಟೆಂಬರ್ ಅವಧಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವು ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ.