ಲಂಡನ್‌(ಜೂ.02): ನ್ಯೂಜಿಲೆಂಡ್ ಹಾಗೂ ಭಾರತ ಕ್ರಿಕೆಟ್ ತಂಡದ ವಿರುದ್ದ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್‌ ಮಾಡುವ ಮೂಲಕ ಆ್ಯಷಸ್ ಸರಣಿಗೆ ಭರ್ಜರಿ ಸಿದ್ದತೆ ನಡೆಸುವುದಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.

ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಷಸ್ ಟೆಸ್ಟ್‌ ಸರಣಿಗೂ ಮುನ್ನ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು ತವರಿನಲ್ಲಿ, ನ್ಯೂಜಿಲೆಂಡ್ ವಿರುದ್ದ 2 ಹಾಗೂ ಟೀಂ ಇಂಡಿಯಾ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇಂದಿನಿಂದ(ಜೂ.2) ಕಿವೀಸ್ ಎದುರು ಇಂಗ್ಲೆಂಡ್ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇನ್ನುಳಿದಂತೆ ಆಗಸ್ಟ್ ಹಾಗೂ ಸೆಪ್ಟೆಂಬರ್ ಅವಧಿಯಲ್ಲಿ ಭಾರತ ವಿರುದ್ದ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ನಾವು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಷಸ್ ಸರಣಿಗೆ ಈಗಿನಿಂದಲೇ ಸಿದ್ದತೆ ಆರಂಭಿಸಿದ್ದೇವೆ. ಇಂಗ್ಲೆಂಡ್ ಅಭಿಮಾನಿಯಾಗಿ, ಇಂಗ್ಲೆಂಡ್ ಆಟಗಾರನಾಗಿ ಆ್ಯಷಸ್ ಸರಣಿ ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಇಂಗ್ಲೆಂಡ್ ನಾಯಕ ಜೋ ರೂಟ್ ಹೇಳಿದ್ದಾರೆ. 

ಇಂಗ್ಲೆಂಡ್‌ ವಿಮಾನವೇರಲು ರೆಡಿಯಾದ ಟೀಂ ಇಂಡಿಯಾ

ಆ್ಯಷಸ್ ಸರಣಿಗೆ ನಾವು ಅತಿ ಹೆಚ್ಚು ಮಹತ್ವವನ್ನು ನೀಡುತ್ತೇವೆ. ಈ ಸರಣಿಗೆ ಸಜ್ಜಾಗುವ ಮುನ್ನ ವಿಶ್ವದ ಎರಡು ಬಲಿಷ್ಠ ತಂಡಗಳಾದ ನ್ಯೂಜಿಲೆಂಡ್ ಹಾಗೂ ಭಾರತ ವಿರುದ್ದ ಟೆಸ್ಟ್ ಸರಣಿಯನ್ನು ಆಡಲಿದ್ದೇವೆ. ತವರಿನಲ್ಲಿ ನಡೆಯಲಿರುವ 7 ಪಂದ್ಯಗಳ ಪೈಕಿ ಏಳರಲ್ಲೂ ಗೆಲುವು ಸಾಧಿಸಲು ಎದುರು ನೋಡುತ್ತಿರುವುದಾಗಿ ರೂಟ್ ತಿಳಿಸಿದ್ದಾರೆ.

ಅಸ್ಟ್ರೇಲಿಯಾ ವಿರುದ್ದದ ಆ್ಯಷಸ್‌ ಸರಣಿಗೆ ಹಿನ್ನೆಲೆಯಿಂದಲೇ ಸಿದ್ದತೆಗಳು ಆರಂಭವಾಗಿವೆ. ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಎಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ ಎಂದು ಇಂಗ್ಲೆಂಡ್ ನಾಯಕ ಜೋ ರೂಟ್ ಹೇಳಿದ್ದಾರೆ.