16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಕೆ ಎಲ್ ರಾಹುಲ್ಆರ್‌ಸಿಬಿ ಎದುರಿನ ಪಂದ್ಯದ ವೇಳೆ ಗಾಯಗೊಂಡಿದ್ದ ಕೆ ಎಲ್ ರಾಹುಲ್‌ಇದೀಗ ರಾಹುಲ್ ಟೆಸ್ಟ್ ವಿಶ್ವಕಪ್ ಫೈನಲ್‌ಗೂ ಅನುಮಾನ

ಮುಂಬೈ(ಮೇ.05): ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಕೆ ಎಲ್ ರಾಹುಲ್, ಈಗಾಗಲೇ ಗಾಯದ ಸಮಸ್ಯೆಯಿಂದಾಗಿ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಧ್ಯದಲ್ಲೇ ಹೊರಬಿದ್ದಿದ್ದಾರೆ. ಇದು ಈಗಾಗಲೇ ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಬಲವಾದ ಪೆಟ್ಟು ಬೀಳುವಂತೆ ಮಾಡಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಬಲ್ಲಮೂಲಗಳ ಪ್ರಕಾರ, ಕೆ ಎಲ್ ರಾಹುಲ್‌, ಮುಂಬೈನಲ್ಲಿ ಸ್ಕ್ಯಾನ್‌ಗೆ ಒಳಗಾಗಿದ್ದು, ಅವರು ಟೆಸ್ಟ್‌ ವಿಶ್ವಕಪ್ ಫೈನಲ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ.

ಸ್ಕ್ಯಾನ್‌ ಮಾಡಿದ ಬಳಿಕ ಬರುವ ಫಲಿತಾಂಶವನ್ನು ಆಧರಿಸಿ ಮುಂದಿನ ತಿಂಗಳು ಅಂದರೆ ಜೂನ್ 07ರಿಂದ 11ರ ವರೆಗೆ ಲಂಡನ್‌ನ ದಿ ಓವೆಲ್ ಮೈದಾನದಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕೆ ಎಲ್ ರಾಹುಲ್‌ ಕಣಕ್ಕಿಳಿಯುತ್ತಾರೇ ಅಥವಾ ಇಲ್ಲವೇ ಎನ್ನುವುದರ ಕುರಿತಂತೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ನ್ಯಾಷನಲ್‌ ಕ್ರಿಕೆಟ್ ಅಕಾಡೆಮಿಯ ತಂಡವು ಕೆ ಎಲ್ ರಾಹುಲ್ ಅವರ ಚಿಕಿತ್ಸೆಯ ಮೇಲೆ ನಿಗಾಯಿಟ್ಟಿದೆ. ಕೆಲ ಮೂಲಗಳ ಪ್ರಕಾರ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕೆ ಎಲ್ ರಾಹುಲ್ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಲಖನೌದ ಏಕಾನ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ಕೆ ಎಲ್ ರಾಹುಲ್ ಜಾರಿಬಿದ್ದು ಗಾಯಗೊಂಡು ಮೈದಾನ ತೊರೆದಿದ್ದರು. ಇನ್ನು ಬ್ಯಾಟಿಂಗ್‌ ವೇಳೆ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಿರಲಿಲ್ಲ.

ಕೆ ಎಲ್ ರಾಹುಲ್ ಅವರಿಗೆ ಆಗಿರುವ ಗಾಯದ ಪ್ರಮಾಣ ಯಾವ ರೀತಿಯದ್ದು ಎನ್ನುವ ಕುರಿತಂತೆ ಲಖನೌ ಸೂಪರ್ ಜೈಂಟ್ಸ್‌ ಫ್ರಾಂಚೈಸಿಯಾಗಲಿ ಅಥವಾ ಬಿಸಿಸಿಐ ಆಗಲಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಅವರು ಸ್ನಾಯು ಸೆಳೆತ ಅಥವಾ ಸೊಂಟ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಕೇವಲ 10 ತಿಂಗಳ ಹಿಂದಷ್ಟೇ ಕೆ ಎಲ್ ರಾಹುಲ್, ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಚಿಕಿತ್ಸೆ ಬಗ್ಗೆ ವೈದ್ಯಕೀಯ ಸಿಬ್ಬಂದಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಲಖನೌ ಸೂಪರ್ ಜೈಂಟ್ಸ್‌ ತಂಡದ ಮ್ಯಾನೇಜ್‌ಮೆಂಟ್ ಇದುವರೆಗೂ ಕೆ ಎಲ್ ರಾಹುಲ್ ಅವರಿಗೆ ಬದಲಿ ಆಟಗಾರನನ್ನು ಹೆಸರಿಸಿಲ್ಲ. ಸದ್ಯ ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ, ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಲಖನೌ ತಂಡಕ್ಕೆ ಡಬಲ್‌ ಶಾಕ್‌: ಐಪಿಎಲ್‌ನಿಂದ ಔಟಾದ ಕೆ.ಎಲ್‌. ರಾಹುಲ್‌, ಜಯದೇವ್‌ ಉನದ್ಕತ್

16ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮೇ 28ರಂದು ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಆಟಗಾರರು ಲಂಡನ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ. ಐಪಿಎಲ್‌ ಲೀಗ್ ಹಂತದ ಪಂದ್ಯಗಳು ಮೇ 21ಕ್ಕೆ ಮುಕ್ತಾಯವಾಗಲಿದ್ದು, ನಾಕೌಟ್ ಹಂತಕ್ಕೇರದ ತಂಡಗಳ ಭಾರತೀಯ ಆಟಗಾರರು ಮೇ 23ರಂದು ನೇರವಾಗಿ ಲಂಡನ್‌ಗೆ ವಿಮಾನವೇರಲಿದ್ದಾರೆ. ಇನ್ನು ನಾಕೌಟ್ ಹಂತಕ್ಕೇರಿದ ತಂಡಗಳ ಆಟಗಾರರು ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ಹಂತ ಹಂತವಾಗಿ ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.