ಹಗಲು-ರಾತ್ರಿ ಟೆಸ್ಟ್‌ಗೆ ಕೊಹ್ಲಿಗೂ ಸಹಮತವಿದೆ ಎಂದ ದಾದಾ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಹಗಲು-ರಾತ್ರಿಯ ಟೆಸ್ಟ್ ಪಂದ್ಯ ಆಡಲು ಉತ್ಸುಕರಾಗಿದ್ದಾರೆ ಎಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕೋಲ್ಕತಾ[ಅ.26]: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಗಲು-ರಾತ್ರಿ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಸಿಸಿಐನ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಬಹಿರಂಗಪಡಿಸಿದರು. ಗುರುವಾರ ಮುಂಬೈನಲ್ಲಿ ನಡೆದ ಸಭೆ ವೇಳೆ ಈ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಅವರು ತಿಳಿಸಿದರು.
ಗಂಗೂಲಿ ಜೊತೆ ಉತ್ತಮ ಸಂಬಂಧ ಮುಂದುವರಿಸುವೆ; ಕೊಹ್ಲಿ!
‘ಕೊಹ್ಲಿ ಹಗಲು-ರಾತ್ರಿ ಪಂದ್ಯವನ್ನಾಡಲು ಒಪ್ಪಿಗೆಯಿಲ್ಲ. ಅವರು ವಿರೋಧ ಮಾಡುತ್ತಿದ್ದಾರೆ ಎಂದು ಹಲವು ದಿನಗಳಿಂದ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಅದ್ಯಾವುದೂ ನಿಜವಲ್ಲ. ನಾಯಕನೇ ಒಪ್ಪಿಕೊಂಡ ಮೇಲೆ ಪಂದ್ಯ ಆಯೋಜಿಸುವುದು ಸುಲಭವಾಗಲಿದೆ. ಟೆಸ್ಟ್ ಕ್ರಿಕೆಟ್ ಜನಪ್ರಿಯಗೊಳಿಸಲು ಹಗಲು-ರಾತ್ರಿ ಪಂದ್ಯಗಳು ಅನಿವಾರ್ಯ. ಶೀಘ್ರದಲ್ಲೇ ಪಂದ್ಯ ನಡೆಯಲಿದೆ’ ಎಂದು ಗಂಗೂಲಿ ಹೇಳಿದರು.
ICC ಖಜಾನೆಗೆ ಕೈ ಹಾಕಿದ ಗಂಗೂಲಿ; ಬೆಚ್ಚಿ ಬಿತ್ತು ಮಂಡಳಿ!
ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾಜಿ ನಾಯಕನಿಗೆ, ಶುಕ್ರವಾರ ಬಂಗಾಳ ಕ್ರಿಕೆಟ್ ಸಂಸ್ಥೆ ವತಿಯಿಂದ ಸನ್ಮಾನ ಮಾಡಲಾಯಿತು. ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿ ಬಳಿಕ, ಭಾರತ ತವರಿನಲ್ಲಿ ಮತ್ತೆ ಟೆಸ್ಟ್ ಆಡುವುದು 2020ರ ಡಿಸೆಂಬರ್‌ನಲ್ಲಿ. ಹೀಗಾಗಿ, ಗಂಗೂಲಿ ಅವಧಿಯಲ್ಲಿ ಹಗಲು-ರಾತ್ರಿ ಟೆಸ್ಟ್ ನಡೆಯುವುದು ಅನುಮಾನವೆನಿಸಿದೆ. 2020ರ ಜುಲೈನಲ್ಲಿ ಸೌರವ್ ಅಧಿಕಾರ ತ್ಯಜಿಸಬೇಕಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೆಸ್ಟ್ ಟೀಂ ಇಂಡಿಯಾ ಸತತ 5 ಟೆಸ್ಟ್ ಗೆಲುವಿನೊಂದಿಗೆ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲೇ ಮುಂದುವರೆದಿದೆ. ಇದರ ಜತೆಜತೆಗೆ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ 240 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೀಗ ಟೀಂ ಇಂಡಿಯಾ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಚಾಂಪಿಯನ್’ಶಿಪ್ ಪಂದ್ಯಗಳನ್ನಾಡಲಿದೆ.