ರೋಹಿತ್‌ಗೆ ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆಗೆ ಆಹ್ವಾನ. ಪಾಕ್‌ಗೆ ತೆರಳುವುದು ಅನುಮಾನ. ಬುಮ್ರಾ, ಕುಲ್ದೀಪ್ ಗಾಯದಿಂದ ಭಾರತ ತಂಡ ಪ್ರಕಟಣೆ ವಿಳಂಬ. ಐಸಿಸಿಗೆ ಗಡುವು ವಿಸ್ತರಣೆಗೆ ಬಿಸಿಸಿಐ ಮನವಿ. ಈ ವಾರಾಂತ್ಯದಲ್ಲಿ ತಂಡ ಘೋಷಣೆ ಸಾಧ್ಯತೆ.

ಲಾಹೋರ್: ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ಲಭಿಸಿದೆ. ಆದರೆ ರೋಹಿತ್ ಪಾಕಿಸ್ತಾನಕ್ಕೆ ತೆರಳಲಿದ್ದಾರೆಯೋ ಇಲ್ಲವೋ ಎಂಬುದು ಸ್ಪಷ್ಟಗೊಂಡಿಲ್ಲ. 

ಟೂರ್ನಿ ಫೆಬ್ರವರಿ 19ಕ್ಕೆ ಆರಂಭಗೊಳ್ಳಲಿದ್ದು, ಅದಕ್ಕೂ ಫೆಬ್ರವರಿ 16 ಅಥವಾ 17ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಾಮಾನ್ಯವಾಗಿ ಯಾವುದೇ ಐಸಿಸಿ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಎಲ್ಲ ತಂಡಗಳ ನಾಯಕರು ಪಾಲ್ಗೊಂಡು, ಫೋಟೋಶೂಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಈ ಬಾರಿ ರೋಹಿತ್‌ ಶರ್ಮಾಗೂ ಆಹ್ವಾನ ಲಭಿಸಿದೆ. ಆದರೆ ಅವರನ್ನು ಪಾಕ್‌ ಗೆ ತೆರಳಲು ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ಅನುಮತಿ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಬಾರಿ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸುತ್ತಿದ್ದರೂ, ಭಾರತ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಬುಮ್ರಾ, ಕುಲ್ದೀಪ್‌ ಗಾಯದಿಂದಾಗಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡ ಪ್ರಕಟ ವಿಳಂಬ?

ನವದೆಹಲಿ: ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತನ್ನ ತಂಡವನ್ನು ಪ್ರಕಟಿಸಲು ವಿಳಂಬ ಮಾಡುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಇದಕ್ಕೆ 5 ವಾರ ಮೊದಲು ಅಂದರೆ ಜ.12ಕ್ಕೆ ಎಲ್ಲಾ ತಂಡಗಳು ಆಟಗಾರರ ಹೆಸರು ಪ್ರಕಟಿಸಬೇಕಿತ್ತು. ಆದರೆ ಭಾರತ ತಂಡ ಇನ್ನೂ ಘೋಷಣೆಯಾಗಿಲ್ಲ. ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್‌ ಯಾದವ್ ಗಾಯಗೊಂಡಿರುವ ಕಾರಣ ತಂಡ ಘೋಷಣೆ ಗಡುವು ವಿಸ್ತರಿಸುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ ಎನ್ನಲಾಗುತ್ತಿದೆ.

ಜಸ್ಪ್ರೀತ್ ಬುಮ್ರಾ ಬೆನ್ನು ನೋವಿಗೆ ತುತ್ತಾಗಿದ್ದು, ಮಾರ್ಚ್‌ ಮೊದಲ ವಾರ ಗುಣಮುಖರಾಗಲಿದ್ದಾರೆ ಎನ್ನಲಾಗುತ್ತಿದೆ. ಕುಲ್ದೀಪ್‌ ತೊಡೆಸಂದು ಗಾಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ತಿಂಗಳ ಅಂತ್ಯಕ್ಕೆ ಫಿಟ್‌ ಆಗುವ ನಿರೀಕ್ಷೆಯಿದೆ. ಆದರೆ ಇಬ್ಬರ ಗಾಯದ ಬಗ್ಗೆಯೂ ಯಾವುದೇ ಸ್ಪಷ್ಟತೆ ಸಿಗದ ಕಾರಣ ತಂಡಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬ ಗೊಂದಲ ಬಿಸಿಸಿಐಗೆ ಇದೆ. ಇದರ ಹೊರತಾಗಿಯೂ ಈ ವಾರದ ಅಂತ್ಯಕ್ಕೆ ತಂಡ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚಿದೆ.