* ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಲಂಕಾ ತಂಡ ಪ್ರಕಟ* 21 ವರ್ಷದ ಮಿಸ್ಟ್ರಿ ಸ್ಪಿನ್ನರ್ ಮಹೇಶ್ ತೀಕ್ಷಣಗೆ ಸ್ಥಾನ* ವನಿಂದು ಹಸರಂಗ ಹಾಗೂ ಧನಂಜಯ ಡಿ ಸಿಲ್ವಾ ಲಂಕಾ ಸ್ಪಿನ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ.
ಕೊಲಂಬೊ(ಸೆ.13): ಮುಂಬರುವ ಅಕ್ಟೋಬರ್ 17ರಿಂದ ಯುಎಇ ಹಾಗೂ ಓಮನ್‌ನಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ದಸುನ್ ಶನಕ ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.
ಲಂಕಾ ತಂಡದಲ್ಲಿ 21 ವರ್ಷದ ಮಿಸ್ಟ್ರಿ ಸ್ಪಿನ್ನರ್ ಮಹೇಶ್ ತೀಕ್ಷಣ ಸ್ಥಾನ ಪಡೆಯುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. ಕಳೆದ ವಾರ ದಕ್ಷಿಣ ಆಫ್ರಿಕಾ ವಿರುದ್ದ ಪಾದಾರ್ಪಣೆ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದ ಮಹೇಶ್ ಕೊನೆಗೂ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಾಂಗ್ಲಾದೇಶ ಎದುರು ಈ ವರ್ಷಾರಂಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 11 ವಿಕೆಟ್ ಕಬಳಿಸಿ ಮಿಂಚಿದ್ದ ಎಡಗೈ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಕೂಡಾ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ವನಿಂದು ಹಸರಂಗ ಹಾಗೂ ಧನಂಜಯ ಡಿ ಸಿಲ್ವಾ ಲಂಕಾ ಸ್ಪಿನ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ಇನ್ನು ಅಕಿಲಾ ಧನಂಜಯ ಹಾಗೂ ಪುಲಿನಾ ತರಂಗಾ ಮೀಸಲು ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದುಸ್ಮಂತ ಚಮೀರಾ ಆಲ್ರೌಂಡರ್ ಚಮಿಕಾ ಕರುಣರತ್ನೆ ಜತೆಗೆ ಅನುಭವಿ ವೇಗಿ ನುವಾನ್ ಪ್ರದೀಪ್ ಕೂಡಾ ವೇಗದ ಬೌಲರ್‌ಗಳ ರೂಪದಲ್ಲಿ ಸ್ಥಾನ ಪಡೆದಿದ್ದಾರೆ.
T20 World Cup ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!
ಕಳೆದ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಕೋವಿಡ್ 19 ನಿಯಮಾವಳಿ ಉಲ್ಲಂಘಿಸಿ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿರುವ ನಿರ್ಶೋನ್ ಡಿಕ್‌ವೆಲ್ಲಾ, ಕುಸಾಲ್ ಮೆಂಡಿಸ್ ಹಾಗೂ ದನುಷ್ಕಾ ಗುಣತಿಲಕ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿದ್ದರಿಂದ ಈ ಮೂವರು ಟಿ20 ವಿಶ್ವಕಪ್ ಟೂರ್ನಿಗೆ ಲಂಕಾ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇನ್ನುಳಿದಂತೆ ಕುಸಾಲ್ ಪೆರೆರಾ ಗಾಯದಿಂದ ಚೇತರಿಸಿಕೊಂಡು ತಂಡ ಕೂಡಿಕೊಂಡಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡವು ಅರ್ಹತಾ ಸುತ್ತಿನ ಪಂದ್ಯವನ್ನಾಡಬೇಕಿದ್ದು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ ತಂಡ ಅಕ್ಟೋಬರ್ 18ರಂದು ಅಬುಧಾಬಿಯಲ್ಲಿ ನಮಿಬಿಯಾ ಎದುರು ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಐರ್ಲೆಂಡ್ ಹಾಗೂ ನೆದರ್‌ಲ್ಯಾಂಡ್ ತಂಡವನ್ನು ಎದುರಿಸಲಿದೆ. ಅರ್ಹತಾ ಸುತ್ತಿನಲ್ಲಿ ಅಗ್ರ 2 ಸ್ಥಾನ ಗಳಿಸುವ ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯಲಿವೆ.
ಶ್ರೀಲಂಕಾ ಕ್ರಿಕೆಟ್ ತಂಡ
ದಸುನ್ ಶನಕಾ(ನಾಯಕ), ಧನಂಜಯ್ ಡಿ ಸಿಲ್ವಾ(ಉಪನಾಯಕ), ಕುಸಾಲ್ ಪೆರೆರಾ, ದಿನೇಶ್ ಚಾಂಡಿಮಲ್, ಆವಿಷ್ಕಾ ಫರ್ನಾಂಡಿಸ್, ಭಾನುಕಾ ರಾಜಪಕ್ಸಾ, ಚರಿತ್ ಅಸಲಂಕಾ, ವನಿಂದ್ ಹಸರಂಗ, ಕಮಿಂದು ಮೆಂಡಿಸ್, ಚಮಿಕ ಕರುಣರತ್ನೆ, ನುವಾನ್ ಪ್ರದೀಪ್, ದುಸ್ಮಂತ ಚಮೀರಾ, ಪ್ರವೀಣ್ ಜಯವಿಕ್ರಮ, ಲಹಿರು ಮದುಶನಕ, ಮಹೇಶ್ ತೀಕ್ಷಣ.
ಮೀಸಲು ಆಟಗಾರರು: ಲಹಿರು ಕುಮಾರ, ಬಿನುರಾ ಫೆರ್ನಾಂಡೋ, ಅಕಿಲಾ ಧನಂಜಯ, ಪುಲಿನ ತರಂಗ
