ನವದೆಹಲಿ(ಜೂ.10): ಐಪಿಎಲ್‌ 14ನೇ ಆವೃತ್ತಿಯ ಭಾಗ-2 ಅನ್ನು ಅಕ್ಟೋಬರ್ 10ರೊಳಗೆ ಮುಕ್ತಾಯಗೊಳಿಸುವಂತೆ ಬಿಸಿಸಿಐ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಒತ್ತಡ ಹೇರುವ ಸಾಧ್ಯತೆ ಇದೆ. 

ಐಸಿಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್‌ ಆರಂಭಗೊಳ್ಳಬೇಕಿದ್ದು, ಐಸಿಸಿ ಟೂರ್ನಿಗಳು ಆರಂಭವಾಗುವ ಮುನ್ನ ಕನಿಷ್ಠ 7-10 ದಿನಗಳ ಮೊದಲು ಬೇರಾರ‍ಯವುದೇ ಟೂರ್ನಿಗಳನ್ನು ನಡೆಸುವಂತಿಲ್ಲ ಎನ್ನುವ ನಿಯಮವಿದೆ. ಮತ್ತೊಂದು ಮೂಲಗಳ ಪ್ರಕಾರ ಬಿಸಿಸಿಐ, ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೂ ಐಪಿಎಲ್‌ ನಡೆಸಲು ಯೋಜನೆ ರೂಪಿಸುತ್ತಿದೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.

ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಯುಎಇ ಚರಣದ ವೇಳಾಪಟ್ಟಿ ಫೈನಲ್‌..!

ಬಿಸಿಸಿಐ ಕಳೆದ ತಿಂಗಳು ಕೊನೆಯಲ್ಲಿ ನಡೆಸಿದ ವಿಶೇಷ ಸಾಮಾನ್ಯ ಸಭೆಯಲ್ಲಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಭಾಗ-2ನ್ನು ಯುಎಇನಲ್ಲಿ ಆಯೋಜಿಸುವುದಾಗಿ ಪ್ರಕಟಿಸಿದೆ. ಭಾರತದಲ್ಲಿ ಆಯೋಜನೆಗೊಂಡಿದ್ದ ಐಪಿಎಲ್‌ ಟೂರ್ನಿಗೆ ಕೊರೋನಾ ವೈರಸ್ ತನ್ನ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗಿದ್ದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ ಮೇ 04ರಂದು ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿತ್ತು.