* ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡ ಪ್ರಕಟ* ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿರುವ ಮೊಹಮ್ಮದುಲ್ಲಾ* ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭರ್ಜರಿ ಫಾರ್ಮ್‌ನಲ್ಲಿರುವ ಬಾಂಗ್ಲಾದೇಶ ತಂಡ
ಢಾಕಾ(ಸೆ.09): ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಆಲ್ರೌಂಡರ್ ಮೊಹಮ್ಮದುಲ್ಲಾ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ. ಬಾಂಗ್ಲಾ ಅನುಭವಿ ವೇಗಿ ರುಬೆಲ್ ಹುಸೈನ್ ಅಂತಿಮ 15ರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದು, ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.
ಇನ್ನುಳಿದಂತೆ ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಯಾವುದೇ ಅಚ್ಚರಿಯ ಆಯ್ಕೆಗಳು ಆಗಿಲ್ಲ. ತಮೀಮ್ ಇಕ್ಬಾಲ್ ಟಿ20 ವಿಶ್ವಕಪ್ ಟೂರ್ನಿಯಿಂದ ಸ್ವತಃ ಹಿಂದೆ ಸರಿಯುವುದಾಗಿ ಈ ಮೊದಲೇ ಘೋಷಿಸಿದ್ದರಿಂದ ಇಕ್ಬಾಲ್ ಅವರನ್ನು ತಂಡದ ಆಯ್ಕೆಯಿಂದ ಕೈಬಿಡಲಾಗಿದೆ. ಇನ್ನು ಆಸ್ಟ್ರೇಲಿಯಾದ ವಿರುದ್ದದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್‌ಗೆ ಆಯ್ಕೆ ಸಮಿತಿ ಮಣೆ ಹಾಕಿದೆ.
T20 World Cup ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!
ನುರುಲ್ ಹಸನ್ ಬಾಂಗ್ಲಾದೇಶ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಮುಷ್ಫಿಕುರ್ ರಹೀಮ್ ತಜ್ಞ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲಿದ್ದಾರೆ. ಆಲ್ರೌಂಡರ್ ಶಕೀಬ್ ಅಲ್ ಹಸನ್ ಮೇಲೆ ಹೆಚ್ಚಿನ ನಿರೀಕ್ಷೆಯಿಡಲಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡವು ಇತ್ತೀಚೆಗೆ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿ ಜಯಿಸುವ ಮೂಲಕ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸಿದೆ.
ಬಾಂಗ್ಲಾದೇಶ ಕ್ರಿಕೆಟ್ ತಂಡವು ಅರ್ಹತಾ ಸುತ್ತಿನ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 17ರಂದು ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ಇದೇ ಗುಂಪಿನಲ್ಲಿ ಆತಿಥೇಯ ಓಮನ್ ಹಾಗೂ ಪಪುವಾ ನ್ಯೂಗಿನಿ ತಂಡಗಳು ಸ್ಥಾನ ಪಡೆದಿವೆ. ಈ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.
ಬಾಂಗ್ಲಾದೇಶ ಕ್ರಿಕೆಟ್ ತಂಡ ಹೀಗಿದೆ ನೋಡಿ
ಮೊಹಮ್ಮದುಲ್ಲಾ(ನಾಯಕ), ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಮ್, ಸೌಮ್ಯ ಸರ್ಕಾರ್, ಲಿಟನ್ ದಾಸ್, ಅಫಿಫ್ ಹೊಸೈನ್, ಮೊಹಮ್ಮದ್ ನಯೀಮ್, ನುರುಲ್ ಹಸನ್ ಸೋಹನ್, ಶಮೀಮ್ ಹೊಸೈನ್, ಮುಷ್ತಾಫಿಜುರ್ ರೆಹಮಾನ್, ಟಸ್ಕಿನ್ ಅಹಮ್ಮದ್, ಮೊಹಮ್ಮದ್ ಸೈಫುದ್ದೀನ್, ಸೊರಿಫುಲ್ ಇಸ್ಲಾಂ, ಮೆಹದಿ ಹಸನ್, ನಸುಮ್ ಅಹಮ್ಮದ್
ಮೀಸಲು ಆಟಗಾರ: ಅಮಿನುಲ್ ಇಸ್ಲಾಂ ಬಿಪ್ಲಬ್ ಮತ್ತು ರುಬೆಲ್ ಹೊಸೈನ್
