ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ 24 ರನ್ ಗಳಿಸಿ ಸ್ಪೋಟಕ ಆರಂಭ ನೀಡಿದರು. ಅವರು ಔಟಾಗಿ ಡಗೌಟ್‌ಗೆ ಮರಳಿದಾಗ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಕ್ಕಾಗಿ ಕೋಚ್ ಗೌತಮ್ ಗಂಭೀರ್ ಮತ್ತು ಸಿಬ್ಬಂದಿ ಅವರನ್ನು ಅಪ್ಪಿಕೊಂಡು ಶ್ಲಾಘಿಸಿದರು.

ಚೆನ್ನೈ: ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಕೇವಲ 15 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದ ಸಂಜು ಸ್ಯಾಮ್ಸನ್‌ರನ್ನು ಡಗೌಟ್‌ನಲ್ಲಿ ಕೋಚ್ ಗೌತಮ್ ಗಂಭೀರ್ ಮತ್ತು ಸಹಾಯಕ ಸಿಬ್ಬಂದಿ ಅಪ್ಪಿಕೊಂಡು ಅಭಿನಂದಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ಸಂಜುಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸಿಕ್ಕ ಎರಡನೇ ಅವಕಾಶ ಇದಾಗಿತ್ತು. ಟಾಸ್ ವೇಳೆ ನಾಯಕ ಸೂರ್ಯಕುಮಾರ್ ಯಾದವ್, ಸಂಜು ತಂಡದಲ್ಲಿದ್ದಾರೆ ಎಂದು ಹೇಳುತ್ತಿದ್ದಂತೆ ಚೆನ್ನೈನಲ್ಲಿದ್ದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದರು. ಇವತ್ತಿನ ಪಂದ್ಯದಲ್ಲಿ ಸಂಜು ಅವರೇ ಕೀಪರ್ ಎಂಬ ಸೂರ್ಯಕುಮಾರ್ ಮಾತಿಗೆ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು.

ಸ್ಪೋಟಕ ಆರಂಭ ಒದಗಿಸಿಕೊಟ್ಟ ಸಂಜು ಸ್ಯಾಮ್ಸನ್

ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಸಂಜು, ತಾನು ಎದುರಿಸಿದ ಎರಡನೇ ಎಸೆತದಲ್ಲೇ ಸಿಕ್ಸರ್ ಬಾರಿಸಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದರು. ನಂತರ ಮತ್ತೊಂದು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿ, 15 ಎಸೆತಗಳಲ್ಲಿ 24 ರನ್ ಗಳಿಸಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಸಂಜು ಔಟಾಗಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಚೆಪಾಕ್‌ನಲ್ಲಿ ತಮ್ಮ ಕಳಪೆ ದಾಖಲೆಯನ್ನು ಸರಿಪಡಿಸಿಕೊಳ್ಳಲು ಸಂಜುಗೆ ಇದೊಂದು ಉತ್ತಮ ಅವಕಾಶವಾಗಿತ್ತು. ಆದರೆ, ತಂಡ ನೀಡಿದ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿ ಪೆವಿಲಿಯನ್‌ಗೆ ಮರಳಿದರು. ಆರಂಭಿಕ ವಿಕೆಟ್‌ಗೆ ಸಂಜು-ಅಭಿಷೇಕ್ ಜೋಡಿ 3.4 ಓವರ್‌ಗಳಲ್ಲಿ 48 ರನ್ ಕಲೆಹಾಕಿತು. ಇದು ಈ ವಿಶ್ವಕಪ್‌ನಲ್ಲಿ ಭಾರತದ ಅತ್ಯುತ್ತಮ ಆರಂಭಿಕ ಜೊತೆಯಾಟವಾಗಿದೆ. 24 ರನ್‌ಗಳಿಗೆ ಔಟಾಗಿದ್ದು ಅಭಿಮಾನಿಗಳಿಗೆ ಬೇಸರ ತಂದರೂ, ತಂಡಕ್ಕೆ ಬೇಕಾದ ಸ್ಪೋಟಕ ಆರಂಭವನ್ನು ಸಂಜು ನೀಡಿದ್ದರು.

ಆರಂಭದಲ್ಲಿ ಅಭಿಷೇಕ್ ಶರ್ಮಾ ನೆಲೆಯೂರಲು ಸಮಯ ತೆಗೆದುಕೊಂಡಾಗ, ಸಂಜು ಬಿರುಸಿನ ಆಟವಾಡಿ ಒತ್ತಡವನ್ನು ಕಡಿಮೆ ಮಾಡಿದರು. ಅಭಿಷೇಕ್ ಕೂಡ ಅಬ್ಬರಿಸಲು ಶುರುಮಾಡಿದ ಬೆನ್ನಲ್ಲೇ, ಮುಜರಬಾನಿ ಅವರ ಸ್ಲೋ ಬೌಲ್‌ಗೆ ಸಂಜು ವಿಕೆಟ್ ಒಪ್ಪಿಸಿದರು. ಆದರೆ ಡಗೌಟ್‌ಗೆ ಬಂದ ಸಂಜು ಅವರನ್ನು ಕೋಚ್ ಗೌತಮ್ ಗಂಭೀರ್ ಮತ್ತು ಬೌಲಿಂಗ್ ಕೋಚ್ ಮಾರ್ನಿ ಮಾರ್ಕೆಲ್ ಅಪ್ಪಿಕೊಂಡು ಶ್ಲಾಘಿಸಿದರು. ಹಿಂದಿನ ಪಂದ್ಯಗಳಲ್ಲಿ ಮೊದಲ ಓವರ್‌ಗಳಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕುತ್ತಿದ್ದ ಭಾರತಕ್ಕೆ, ಈ ಬಾರಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಕ್ಕೆ ಕೋಚಿಂಗ್ ಸಿಬ್ಬಂದಿ ಸಂಜು ಆಟವನ್ನು ಮೆಚ್ಚಿಕೊಂಡರು.

26 ಡಾಟ್‌ಬಾಲ್‌

ಭಾರತದ ಇನ್ನಿಂಗ್ಸ್‌ನಲ್ಲಿ 26 ಡಾಟ್‌ಬಾಲ್‌ಗಳಿದ್ದವು. ಇದು ಟಿ20 ವಿಶ್ವಕಪ್‌ ಇನ್ನಿಂಗ್ಸ್‌ನಲ್ಲಿ ಜಂಟಿ ಕನಿಷ್ಠ. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾ ಕೂಡಾ ಕೇವಲ 26 ಡಾಟ್‌ ಮಾಡಿತ್ತು.

ಪಂದ್ಯದಲ್ಲಿ 440 ರನ್‌: ವಿಶ್ವಕಪ್‌ನ 2ನೇ ಗರಿಷ್ಠ

ಈ ಪಂದ್ಯದಲ್ಲಿ ಒಟ್ಟು 440 ರನ್‌(ಭಾರತ 256, ಜಿಂಬಾಬ್ವೆ 184) ದಾಖಲಾಯಿತು. ಇದು ಟಿ20 ವಿಶ್ವಕಪ್‌ ಇತಿಹಾಸದಲ್ಲೇ 2ನೇ ಗರಿಷ್ಠ. 2016ರಲ್ಲಿ ಇಂಗ್ಲೆಂಡ್‌-ದ.ಆಫ್ರಿಕಾ ಪಂದ್ಯದಲ್ಲಿ 459 ರನ್‌ ದಾಖಲಾಗಿತ್ತು.