ಚೆನ್ನೈ/ಮುಂಬೈ(ಏ.02): ಆಸ್ಪ್ರೇಲಿಯಾ ವಿರುದ್ಧ ಇತ್ತೀಚೆಗೆ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಲು ನೆರವಾಗಿದ್ದ 6 ಯುವ ಆಟಗಾರರಿಗೆ ಹೊಸ ಥಾರ್‌ ಜೀಪ್‌ ಉಡುಗೊರೆಯಾಗಿ ನೀಡುವುದಾಗಿ, ಮಹೀಂದ್ರಾ ಸಂಸ್ಥೆಯ ಮಾಲೀಕ ಆನಂದ್‌ ಮಹೀಂದ್ರಾ ಘೋಷಿಸಿದ್ದರು. ಇದೀಗ ಆಟಗಾರರಿಗೆ ಹೊಸ ಜೀಪ್‌ಗಳು ತಲುಪಿವೆ.

ವೇಗಿಗಳಾದ ನಟರಾಜನ್‌ ಹಾಗೂ ಶಾರ್ದೂಲ್‌ ಠಾಕೂರ್‌ ತಮಗೆ ದೊರೆತ ಥಾರ್‌ ಜೀಪ್‌ನ ಮುಂದೆ ನಿಂತು ತೆಗಿಸಿಕೊಂಡ ಫೋಟೋವನ್ನು ಟ್ವೀಟ್‌ ಮಾಡಿದ್ದು, ಫೋಟೋ ವೈರಲ್‌ ಆಗಿದೆ. ಇಬ್ಬರೂ, ಆನಂದ್‌ ಮಹೀಂದ್ರಾಗೆ ಧನ್ಯವಾದ ಹೇಳಿದ್ದಾರೆ. ನಟರಾಜನ್‌ ತಾವು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದಾಗ ತೊಟ್ಟಿದ್ದ ಜೆರ್ಸಿಯನ್ನು ಆನಂದ್‌ ಅವರಿಗೆ ಉಡುಗೊರೆಯಾಗಿ ನೀಡುತ್ತಿರುವುದಾಗಿ ಹೇಳಿದ್ದಾರೆ.

ಟೀಂ ಇಂಡಿಯಾದ 6 ಕ್ರಿಕೆಟಿಗರಿಗೆ SUV ಕಾರ್ ಗಿಫ್ಟ್ ಕೊಟ್ಟ ಆನಂದ್‌ ಮಹೀಂದ್ರ..!

ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಶಾರ್ದೂಲ್ ಠಾಕೂರ್‌, ಚೊಚ್ಚಲ ಸರಣಿಯಾಡಿದ ಮೊಹಮ್ಮದ್‌ ಸಿರಾಜ್‌, ಶುಭ್‌ಮನ್‌ ಗಿಲ್‌, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್ ಹಾಗೂ ಟಿ. ನಟರಾಜನ್‌ ಅದ್ಭುತ ಪ್ರದರ್ಶನದ ಮೂಲಕ ಆನಂದ್ ಮಹೀಂದ್ರಾ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯನ್ನು ಭಾರತ 2-1 ಅಂತರದಲ್ಲಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲೇ ಆಘಾತಕಾರಿ ಸೋಲು ಕಂಡಿದ್ದ ಭಾರತ ಅದಾದ ಬಳಿಕ ಎರಡು ಗೆಲುವು ಹಾಗೂ ಒಂದು ಡ್ರಾ ಸಾಧಿಸುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡನೇ ಬಾರಿಗೆ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿತ್ತು. ಈ ಸರಣಿಯಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿ ಮಿಂಚಿದ 6 ಆಟಗಾರರಿಗೆ ಆನಂದ್‌ ಮಹೀಂದ್ರಾ ಥಾರ್ ಜೀಪ್ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು.