ಸೂರತ್‌[ನ.29]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿ ಕೊನೆ ಹಂತಕ್ಕೆ ತಲುಪಿದೆ. ಶುಕ್ರವಾರ ಸೆಮಿಫೈನಲ್‌ ಹಂತ ಮುಕ್ತಾಯವಾಗಲಿದೆ. ಒಂದೇ ದಿನ 2 ಸೆಮೀಸ್‌ ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್‌ ಕರ್ನಾಟಕ, ಸೆಮಿಫೈನಲ್‌ ಪಂದ್ಯದಲ್ಲಿ ಹರ್ಯಾಣ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ತಮಿಳುನಾಡು, ರಾಜಸ್ಥಾನ ತಂಡದ ಎದುರು ಸೆಣಸಲಿದೆ. 

ಮುಷ್ತಾಕ್ ಅಲಿ ಟ್ರೋಫಿ: ಸೆಮೀಸ್ ಪ್ರವೇಶಿಸಿದ ಕರ್ನಾಟಕ

ಇತ್ತೀಚೆಗೆ ನಡೆದಿದ್ದ ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. ಇದೀಗ ಭಾರತದ ಟಿ20 ಚಾಂಪಿಯನ್‌ ಪಟ್ಟಕ್ಕಾಗಿ ಕರ್ನಾಟಕ-ತಮಿಳುನಾಡು ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿವೆ.

ಮುಷ್ತಾಕ್ ಅಲಿ ಟ್ರೋಫಿ: ಸೆಮೀಸ್ ಪ್ರವೇಶಿಸಿದ ತಮಿಳುನಾಡು, ಕರ್ನಾಟಕದ ಆಸೆ ಜೀವಂತ

ಸೂಪರ್‌ ಲೀಗ್‌ ಹಂತದ ಮುಕ್ತಾಯಕ್ಕೆ ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಹಂತಕ್ಕೆ ಅರ್ಹತೆ ಪಡೆಯಲಿವೆ. ಅದರಂತೆ ‘ಬಿ’ ಗುಂಪಿನಲ್ಲಿ ತಮಿಳುನಾಡು 3 ಗೆಲುವಿನೊಂದಿಗೆ 12 ಅಂಕಗಳಿಸಿ ಮೊದಲ ಸ್ಥಾನ ಪಡೆದಿದ್ದರೇ, ಕರ್ನಾಟಕ ಕೂಡ 3 ಜಯದೊಂದಿಗೆ 12 ಅಂಕಗಳಿಸಿ 2ನೇ ಸ್ಥಾನಿಯಾಗಿ ಸೆಮೀಸ್‌ ಪ್ರವೇಶಿಸಿತು. ಇನ್ನು ಮುಂಬೈ ತಂಡ ಕೂಡ 3 ಜಯದೊಂದಿಗೆ 12 ಅಂಕಗಳಿಸಿತ್ತು. ಆದರೆ ನೆಟ್‌ ರನ್‌ರೇಟ್‌ ಹೆಚ್ಚಾಗಿದ್ದ ಕಾರಣ ಕರ್ನಾಟಕ ಸೆಮೀಸ್‌ಗೆ ಲಗ್ಗೆ ಇಟ್ಟಿತು.

ಬಲಿಷ್ಠ ಬ್ಯಾಟಿಂಗ್‌ ಪಡೆ:

ಮೊದಲ ಸೆಮೀಸ್‌ನಲ್ಲಿ ರಾಜ್ಯ ತಂಡಕ್ಕೆ ಹರ್ಯಾಣ ತಂಡ ಎದುರಾಗಲಿದೆ. ಕರ್ನಾಟಕ ತನ್ನ ತಾರಾ ಆಟಗಾರರಾದ ನಾಯಕ ಮನೀಶ್‌ ಪಾಂಡೆ, ಕೆ.ಎಲ್‌. ರಾಹುಲ್‌, ಕರುಣ್‌ ನಾಯರ್‌, ಬಾಂಗ್ಲಾ ಟೆಸ್ಟ್‌ ಮುಗಿಸಿ ಬಂದಿರುವ ಮಯಾಂಕ್‌ ಅಗರ್‌ವಾಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದೆ. ದೇವದತ್‌ ಪಡಿಕ್ಕಲ್‌ ಲಯದಲ್ಲಿದ್ದು ಈ ಟೂರ್ನಿಯ 10 ಇನ್ನಿಂಗ್ಸ್‌ಗಳಲ್ಲಿ 461 ರನ್‌ಗಳಿಸಿದ್ದಾರೆ. ಇದರಲ್ಲಿ 1 ಶತಕ, 4 ಅರ್ಧಶತಕ ಸೇರಿವೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ದಾಖಲಿಸಿದ ಆಟಗಾರರ ಪೈಕಿ ದೇವದತ್‌ ಮೊದಲ ಸ್ಥಾನದಲ್ಲಿದ್ದಾರೆ. 65.85ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿರುವ ದೇವದತ್‌, ಟೂರ್ನಿಯಲ್ಲಿ ಅತಿ ಹೆಚ್ಚು (27) ಸಿಕ್ಸರ್‌ ಸಿಡಿಸಿದ ಆಟಗಾರ ಎನಿಸಿದ್ದಾರೆ. ದೇವದತ್‌ ತಂಡದ ಬ್ಯಾಟಿಂಗ್‌ ಆಧಾರ ಸ್ತಂಭ ಎನಿಸಿದ್ದಾರೆ. ಪವನ್‌ ದೇಶಪಾಂಡೆ, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌ ಅವರಂತಹ ಆಲ್ರೌಂಡರ್‌ಗಳ ಬಲ ತಂಡಕ್ಕಿದೆ. ಬೌಲಿಂಗ್‌ನಲ್ಲಿ ರೋನಿತ್‌ ಮೋರೆ, ಯುವ ವೇಗಿ ವಿ. ಕೌಶಿಕ್‌ ಭರವಸೆ ಮೂಡಿಸಿದ್ದಾರೆ.

ಭಾರತ ವಿರುದ್ಧದ ಸರಣಿಗೆ ವೆಸ್ಟ್ ಇಂಡೀಸ್ ಸರಣಿ ಪ್ರಕಟ, ಗೇಲ್’ಗಿಲ್ಲ ಸ್ಥಾನ

ಇತ್ತ ಹರ್ಯಾಣ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಕರ್ನಾಟಕಕ್ಕೆ ಪ್ರಬಲ ಸವಾಲೊಡ್ಡುವ ಉತ್ಸಾಹದಲ್ಲಿದೆ. ‘ಎ’ ಗುಂಪಿನಲ್ಲಿ ಆಡಿದ 4 ಪಂದ್ಯಗಳಿಂದ 3ರಲ್ಲಿ ಜಯಗಳಿಸಿ 12 ಅಂಕಗಳಿಸಿದ ಹರ್ಯಾಣ ಮೊದಲ ಸ್ಥಾನ ಪಡೆದು ಸೆಮೀಸ್‌ಗೇರಿದೆ. ಚೈತನ್ಯ ಬಿಷ್ಣೋಯಿ, ಹರ್ಷಲ್‌ ಪಟೇಲ್‌, ಶಿವಂ ಚೌಹಾಣ್‌, ರಾಹುಲ್‌ ತೆವಾಟಿಯ, ಅಮಿತ್‌ ಮಿಶ್ರಾ, ಜಯಂತ್‌ ಯಾದವ್‌ ಹಾಗೂ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ.

ತಂಡ: ಮನೀಶ್‌ ಪಾಂಡೆ (ನಾಯಕ), ಕರುಣ್‌ ನಾಯರ್‌, ರಾಹುಲ್‌, ದೇವದತ್‌, ರೋಹನ್‌ ಕದಂ, ಪವನ್‌ ದೇಶಪಾಂಡೆ, ಶರತ್‌, ಶ್ರೇಯಸ್‌, ಸುಚಿತ್‌, ಪ್ರವೀಣ್‌ ದುಬೆ, ಮಿಥುನ್‌, ಕೌಶಿಕ್‌, ರೋನಿತ್‌ ಮೋರೆ, ಮಯಾಂಕ್‌, ಅನಿರುದ್ಧ್ ಜೋಶಿ.

ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 2

ತಮಿಳುನಾಡು-ರಾಜಸ್ಥಾನ ಸೆಣಸು:

ಶುಕ್ರವಾರ ನಡೆಯುವ 2ನೇ ಸೆಮಿಫೈನಲ್‌ನಲ್ಲಿ ತಮಿಳುನಾಡು, ರಾಜಸ್ಥಾನ ತಂಡದ ಸವಾಲನ್ನು ಎದುರಿಸಲಿದೆ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿರುವ ತಮಿಳುನಾಡು, ರಾಜಸ್ಥಾನ ವಿರುದ್ಧ ಸುಲಭ ಜಯದ ನಿರೀಕ್ಷೆಯಲ್ಲಿದೆ. ಆದರೂ ರಾಜಸ್ಥಾನ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ. ‘ಎ’ ಗುಂಪಿನಲ್ಲಿ ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಬರೋಡಾ ತಂಡಗಳು ತಲಾ 2 ಗೆಲುವಿನೊಂದಿಗೆ 8 ಅಂಕಗಳಿಸಿದ್ದವು. ನೆಟ್‌ ರನ್‌ರೇಟ್‌ನಲ್ಲಿ ಅಂತರ ಸಾಧಿಸಿದ ರಾಜಸ್ಥಾನ ಅದೃಷ್ಠದ ಲೆಕ್ಕಾಚಾರದಲ್ಲಿ ಸೆಮೀಸ್‌ಗೇರಿತು.

ಬಾಂಗ್ಲಾ ವಿರುದ್ಧದ ಟೆಸ್ಟ್‌ ಮುಗಿದಿರುವ ಹಿನ್ನೆಲೆಯಲ್ಲಿ ಆರ್‌. ಅಶ್ವಿನ್‌ ಅವರ ಸೇವೆ ತಮಿಳುನಾಡು ತಂಡಕ್ಕೆ ಲಭ್ಯವಿದೆ. ಈಗಾಗಲೇ ವಾಷಿಂಗ್ಟನ್‌ ಸುಂದರ್‌, ದಿನೇಶ್‌ ಕಾರ್ತಿಕ್‌, ವಿಜಯ್‌ ಶಂಕರ್‌, ಮುರುಳಿ ವಿಜಯ್‌ ಅವರಂತಹ ತಾರಾ ಆಟಗಾರರನ್ನು ಒಳಗೊಂಡಿರುವ ತಮಿಳುನಾಡು ತಂಡಕ್ಕೆ ಅಶ್ವಿನ್‌ ಸೇರ್ಪಡೆಗೊಂಡರೇ ಮತ್ತಷ್ಟು ಬಲಿಷ್ಠವಾಗಲಿದೆ. ಇನ್ನೊಂದೆಡೆ ರಾಜಸ್ಥಾನ ತಂಡದಲ್ಲಿ ತಾರಾ ಬೌಲರ್‌ಗಳ ದಂಡೇ ಇದೆ. ದೀಪಕ್‌ ಚಾಹರ್‌, ರಾಹುಲ್‌ ಚಾಹರ್‌, ಖಲೀಲ್‌ ಅಹ್ಮದ್‌ ಸೇವೆ ರಾಜಸ್ಥಾನಕ್ಕೆ ಲಭ್ಯವಿದ್ದು, ತಮಿಳುನಾಡು ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ಸಂಜೆ 6.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 2