ಮುಷ್ತಾಕ್ ಅಲಿ ಟ್ರೋಫಿ: ಸೆಮೀಸ್ ಪ್ರವೇಶಿಸಿದ ಕರ್ನಾಟಕ
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದೆ. ಸೂಪರ್ ಲೀಗ್ ಹಂತದಲ್ಲಿ ಪಂಜಾಬ್ ವಿರುದ್ಧ ಮುಂಬೈ ಗೆದ್ದರೂ, ನೆಟ್ ರನ್‌ರೇಟ್ ಆಧಾರದಲ್ಲಿ ಮನೀಶ್ ಬಳಗ ಸೆಮೀಸ್ ಪ್ರವೇಶಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಸೂರತ್[ನ.27]: ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪಂಜಾಬ್ ವಿರುದ್ಧ ಮುಂಬೈ ತಂಡ 22 ರನ್’ಗಳ ಜಯ ಸಾಧಿಸಿದೆ. ಶುಭ್’ಮನ್ ಗಿಲ್ ಸಿಡಿಲಬ್ಬರದ ಅರ್ಧಶತಕ ವ್ಯರ್ಥವಾದರೂ, ಕರ್ನಾಟಕದ ಪಾಲಿಗೆ ವರದಾನವಾಯಿತು. ನೆಟ್ ರನ್ ರೇಟ್ ಆದಾರದಲ್ಲಿ ಮುಂಬೈ ತಂಡವನ್ನು ಹಿಂದಿಕ್ಕಿ ಹಾಲಿ ಚಾಂಪಿಯನ್ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದೆ.
ಮುಷ್ತಾಕ್ ಅಲಿ ಟ್ರೋಫಿ: ಸೆಮೀಸ್ ಪ್ರವೇಶಿಸಿದ ತಮಿಳುನಾಡು, ಕರ್ನಾಟಕದ ಆಸೆ ಜೀವಂತ
ಮುಂಬೈ ನೀಡಿದ್ದ 244 ರನ್’ಗಳ ಗುರಿ ಬೆನ್ನತ್ತಿದ ಪಂಜಾಬ್ ಸ್ಫೋಟಕ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಅಭಿಷೇಕ್ ಶರ್ಮಾ, ಶುಭ್’ಮನ್ ಗಿಲ್ ಜೋಡಿ 7.4 ಓವರ್’ಗಳಲ್ಲಿ 84 ರನ್’ಗಳ ಜತೆಯಾಟವಾಡಿತು. ಅಭಿಷೇಕ್ 29 ಎಸೆತಗಳಲ್ಲಿ 47 ರನ್ ಬಾರಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಗಿಲ್ ಕೇವಲ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 78 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಗುರುಕಿರತ್ ಸಿಂಗ್ ಮನ್ 21 ಎಸೆತದಲ್ಲಿ 40 ರನ್ ಚಚ್ಚಿದ್ದರು. ಈ ಮೂವರ ವಿಕೆಟ್ ಪತನವಾಗುತ್ತಿದ್ದಂತೆ ನಾಟಕೀಯ ಕುಸಿತ ಕಂಡಿತು. 15 ಓವರ್ ಅಂತ್ಯದ ವೇಳೆಗೆ ಪಂಜಾಬ್ 170 ರನ್ ಬಾರಿಸಿತ್ತು. ಗಿಲ್ ವಿಕೆಟ್ ಒಪ್ಪಿಸುತ್ತಿದ್ದಂತೆ ಮುಂಬೈ ತಂಡದ ಬೌಲರ್’ಗಳು ಬಿಗಿ ಹಿಡಿತ ಸಾಧಿಸಿದರು. ಮುಂಬೈ ಪರ ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ ಹಾಗೂ ಶುಭಂ ರಂಜನೆ ತಲಾ 2 ವಿಕೆಟ್ ಪಡೆದರು.
ಸಯ್ಯದ್ ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ‘ಸನ್’ ಸ್ಟ್ರೋಕ್!
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಕೂಡಾ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಪೃಥ್ವಿ ಶಾ- ಆದಿತ್ಯ ತಾರೆ ಜೋಡಿ 71 ರನ್’ಗಳ ಜತೆಯಾಟ ನಿಭಾಯಿಸಿದರು. ತಾರೆ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಪೃಥ್ವಿ ಶಾ 53, ಶ್ರೇಯಸ್ ಅಯ್ಯರ್ ಅಜೇಯ 80 ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ 80 ರನ್ ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಸೆಮೀಸ್ ಪ್ರವೇಶಿಸಿದ ತಂಡಗಳು: ತಮಿಳುನಾಡು, ಕರ್ನಾಟಕ, ಹರಿಯಾಣ ಹಾಗೂ ರಾಜಸ್ಥಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ನವೆಂಬರ್ 29ರಂದು ಪ್ರಶಸ್ತಿ ಸುತ್ತಿಗಾಗಿ ಈ ತಂಡಗಳು ಕಾದಾಡಲಿವೆ.