ಮುಷ್ತಾಕ್ ಅಲಿ ಟ್ರೋಫಿ: ಮಿಥುನ್ ಹ್ಯಾಟ್ರಿಕ್, ಆದರೂ ಕರ್ನಾಟಕಕ್ಕೆ ಕಠಿಣ ಗುರಿ
ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಬೌಲಿಂಗ್ ನೆರವಿನಿಂದ ಹರ್ಯಾಣ ತಂಡವನ್ನು ಕೇವಲ 194 ರನ್‌ಗಳಿಗೆ ನಿಯಂತ್ರಿಸಿದೆ. ಚೈತನ್ಯ ಬಿಷ್ಣೋಯಿ ಹಾಗೂ ಹಿಮಾಂಶು ರಾಣಾ ಅರ್ಧಶತಕ ಸಿಡಿಸುವ ಮೂಲಕ ಹರ್ಯಾಣ ತಂಡಕ್ಕೆ ನೆರವಾದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಸೂರತ್[ನ.29]: ಚೈತನ್ಯ ಬಿಷ್ಣೋಯಿ ಹಾಗೂ ಹಿಮಾಂಶು ರಾಣಾ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಹರ್ಯಾಣ ತಂಡವು 194 ರನ್ ಬಾರಿಸಿದ್ದು, ಹಾಲಿ ಚಾಂಪಿಯನ್ ಕರ್ನಾಟಕ್ಕೆ ಕಠಿಣ ಗುರಿ ನೀಡಿದೆ. ಅಭಿಮನ್ಯು ಮಿಥುನ್ ಒಂದೇ ಓವರ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಹಿತ 5 ವಿಕೆಟ್ ಪಡೆದು ಮಿಂಚಿದರು.
ಮುಷ್ತಾಕ್ ಅಲಿ ಟ್ರೋಫಿ: ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕಿಂದು ಹರ್ಯಾಣ ಚಾಲೆಂಜ್
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹರ್ಯಾಣ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಚೈತನ್ಯ ಬಿಷ್ಣೋಯಿ ಹಾಗೂ ಹರ್ಷಲ್ ಪಟೇಲ್ 6.4 ಓವರ್’ಗಳಲ್ಲಿ 67 ರನ್’ಗಳ ಜತೆಯಾಟವಾಡಿದರು. ಹರ್ಷಲ್ ಪಟೇಲ್ 20 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 34 ರನ್ ಬಾರಿಸಿ ಶ್ರೇಯಸ್ ಗೋಪಾಲ್’ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶಿವಂ ಚೌಹ್ಹಾಣ್[6] ಕೂಡಾ ಶ್ರೇಯಸ್’ಗೆ ವಿಕೆಟ್ ಒಪ್ಪಿಸಿದಾಗ ಕರ್ನಾಟಕ ಕುಣಿದು ಕುಪ್ಪಳಿಸಿತು. ಆದರೆ ಬಿಷ್ಣೋಯಿ ಹಾಗೂ ಹಿಮಾಂಶು ರಾಣಾ ಭರ್ಜರಿ ಜತೆಯಾಟವಾಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಬಿಷ್ಣೋಯಿ-ಹಿಮಾಂಶು ಅರ್ಧಶತಕ: ಆರಂಭಿಕ ಬ್ಯಾಟ್ಸ್’ಮನ್ ಚೈತನ್ಯ ಬಿಷ್ಣೋಯಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದರು. 35 ಎಸೆತಗಳನ್ನು ಎದುರಿಸಿದ ಬಿಷ್ಣೋಯಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 55 ರನ್ ಬಾರಿಸಿ ರನೌಟ್ ಆದರು. ಇನ್ನು ಹಿಮಾಂಶು ರಾಣಾ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 61 ರನ್ ಬಾರಿಸಿ ಅಭಿಮನ್ಯು ಮಿಥುನ್’ಗೆ ವಿಕೆಟ್ ಒಪ್ಪಿಸಿದರು.
ವಿಜಯ್ ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!
ಒಂದೇ ಓವರ್’ನಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದ ಅಭಿಮನ್ಯು ಮಿಥುನ್:
ಕರ್ನಾಟಕ ತಂಡದ ಅನುಭವಿ ವೇಗಿ 20ನೇ ಓವರ್’ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಒಂದೇ ಓವರ್’ನಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಮಿಂಚಿದರು. ಮೊದಲ 3 ಓವರ್’ಗಳಲ್ಲಿ 37 ರನ್ ಬಾರಿಸಿದ್ದ ಮಿಥುನ್ ಕೊನೆಯ ಓವರ್’ನಲ್ಲಿ ರಾಣಾ, ತೆವಾಟಿಯಾ, ಸುಮಿತ್ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದರು. 4ನೇ ಎಸೆತದಲ್ಲಿ ಅಮಿತ್ ಮಿಶ್ರಾ ವಿಕೆಟ್ ಪಡೆದರು, ಬಳಿಕ ಒಂದು ವೈಡ್ ಬಾಲ್ ಎಸೆದರು. 5ನೇ ಎಸೆತದಲ್ಲಿ ಒಂದು ರನ್ ನೀಡಿದ ಮಿಥುನ್ ಆರನೇ ಎಸೆತದಲ್ಲಿ ಜಯಂತ್ ಯಾದವ್ ವಿಕೆಟ್ ಪಡೆಯುವ ಮೂಲಕ 5ನೇ ವಿಕೆಟ್ ಪಡೆದರು. ಒಂದು ಹಂತದಲ್ಲಿ ಹರ್ಯಾಣ ಸುಲಭವಾಗಿ 200 ರನ್ ಗಡಿ ದಾಟುವ ವಿಶ್ವಾಸದಲ್ಲಿತ್ತು. ಆದರೆ ಮಿಥುನ್ ಕಟ್ಟುನಿಟ್ಟಿನ ಬೌಲಿಂಗ್ ನೆರವಿನಿಂದ 194 ರನ್’ಗಳಿಗೆ ನಿಯಂತ್ರಿಸಿದರು. ಈ ಹಿಂದೆ ಮಿಥುನ್ ವಿಜಯ್ ಹಜಾರೆ ಟ್ರೋಫಿಯಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.