ವಿಜಯ್ ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!
ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ 4ನೇ ಟ್ರೋಫಿ ಮುಡಿಗೇರಿಸಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಸೋಲಿಸಿ ಕರ್ನಾಟಕ ಪ್ರಶಸ್ತಿ ಗೆದ್ದುಕೊಂಡಿದೆ.
ಬೆಂಗಳೂರು(ಅ.24): ವಿಜಯ್ ಹಜಾರೆ ಟ್ರೋಫಿಯಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು 60 ರನ್(VJD ನಿಯಮ)ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಇದು ಕರ್ನಾಟಕದ 4ನೇ ವಿಜಯ್ ಹಜಾರೆ ಟ್ರೋಫಿಯಾಗಿದೆ.
ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿ; BCCI ಲೋಗೋ ಬಳಸಿದ ಅಶ್ವಿನ್‌ಗೆ ದಂಡದ ಭೀತಿ!
ಒಂದೂ ಪಂದ್ಯ ಸೋಲದೇ ಫೈನಲ್ ಪ್ರವೇಶಿಸಿದ ತಮಿಳುನಾಡು, ಫೈನಲ್ ಪಂದ್ಯದಲ್ಲಿ ಮುಗ್ಗರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡುಗೆ ಬರ್ತ್‌ಡೇ ಬಾಯ್ ಅಭಿಮನ್ಯು ಮಿಥುನ್ ಶಾಕ್ ನೀಡಿದರು. ಅಭಿನವ್ ಮುಕುಂದ್ 85 ಹಾಗೂ ಬಾಬಾ ಅಪರಾಜಿತ್ 66 ರನ್ ಸಿಡಿಸಿ ಚೇತರಿಕೆ ನೀಡಿದರು. ಆದರೆ ಮಿಥುನ್ ಹ್ಯಾಟ್ರಿಕ್ ವಿಕೆಟ್ ಜೊತೆಗೆ ಒಟ್ಟು 5 ವಿಕೆಟ್ ಕಬಳಿಸೋ ಮೂಲಕ ತಮಿಳುನಾಡು ತಂಡವನ್ನು 252 ರನ್‌ಗೆ ಆಲೌಟ್ ಮಾಡಿದರು.
ಇದನ್ನೂ ಓದಿ: ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!
ಹುಟ್ಟು ಹಬ್ಬದ ದಿನವೇ ಮಿಥುನ್ ದಾಖಲೆ
ಕರ್ನಾಟಕ ತಂಡದ ಅನುಭವಿ ವೇಗಿ ಶುಕ್ರವಾರ(ಅ.25) 30ನೇ ವಸಂತಕ್ಕೆ ಕಾಲಿಟ್ಟರು. ಹುಟ್ಟು ಹಬ್ಬದ ದಿನ 5 ವಿಕೆಟ್ ಕಬಳಿಸೋ ಮೂಲಕ ಸ್ಮರಣೀಯವಾಗಿಸಿಕೊಂಡರು. 30ನೇ ಹುಟ್ಟು ಹಬ್ಬದಲ್ಲಿ ಮಿಥುನ್ 3 ಅಪರೂಪದ ದಾಖಲೆ ಬರೆದರು
- ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಕ್ರಿಕೆಟಿಗ
- ಕರ್ನಾಟಕ ಪರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್
- ವಿಜಯ್ ಹಜಾರೆ ಹಾಗೂ ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 2ನೇ ಬೌಲರ್(ಮುರಳಿ ಕಾರ್ತಿಕ್ ಮೊದಲ ಕ್ರಿಕೆಟಿಗ)
ಈ ಗುರಿ ಬೆನ್ನಟ್ಟಿದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿದರೂ, ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರ ಶತಕದ ಜೊತೆಯಾದ ಮೂಲಕ ದಿಟ್ಟ ತಿರುಗೇಟು ನೀಡಿತು. 23 ಓವರ್‌ಗಳಿಗೆ ಕರ್ನಾಟಕ 1 ವಿಕೆಟ್ ಕಳೆದುಕೊಂಡು 146 ರನ್ ಸಿಡಿಸಿತು. ಮಯಾಂಕ್ ಅಜೇಯ 69 ಹಾಗೂ ಕೆಎಲ್ ರಾಹುಲ್ ಅಜೇಯ 52 ರನ್ ಸಿಡಿಸಿದ್ದರು. ಈ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮಳೆ ಬಂದ ಕಾರಣ ಪಂದ್ಯ ಮತ್ತೆ ಆರಂಭಿಸಲು ಸಾಧ್ಯವಾಗಲಿಲ್ಲ. ಫಲಿತಾಂಶಕ್ಕಾಗಿ ವಿಜೆಡಿ ನಿಯಮದ ಮೊರೆ ಹೋಗಲಾಯಿತು.
ವಿಜೆಡಿ ನಿಯಮದಂತೆ ಕರ್ನಾಟಕ ತಂಡವೂ 23 ಓವರ್‌ನಲ್ಲಿ 86 ರನ್ ಬಾರಿಸಬೇಕಿತ್ತು. ಆದರೆ 146 ರನ್ ಗಳಿಸಿದ್ದರಿಂದ ಕರ್ನಾಟಕ ತಂಡವನ್ನು 60 ರನ್‌ಗಳಿಂದ ಜಯಶಾಲಿ ಎಂದು ಘೋಷಿಸಲಾಯಿತು.
ಸಂಕ್ಷಿಪ್ತ ಸ್ಕೋರ್:
ತಮಿಳುನಾಡು: 252/10
ಅಭಿನವ್ ಮುಕುಂದ್ 85
ಅಭಿಮನ್ಯು ಮಿಥುನ್ 34/5
ಕರ್ನಾಟಕ: 146/1(23 ಓವರ್)
ಮಯಾಂಕ್ ಅಗರ್ವಾಲ್ 69*
ಕೆಎಲ್ ರಾಹುಲ್ 52*
ವಾಶಿಂಗ್ಟನ್ ಸುಂದರ್ 51/1
ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: