ನೂತನ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಪ್ 10ರಿಂದ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿನ ಕಳಪೆ ಪ್ರದರ್ಶನದಿಂದಾಗಿ ಅವರು 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದೇ ವೇಳೆ, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದೆ. ಮುಂಬರುವ ಫೆಬ್ರವರಿ 07ರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಹೀಗಿರುವಾಗಲೇ ಐಸಿಸಿ ನೂತನ ಟಿ20 ರ‍್ಯಾಂಕಿಂಗ್‌ ಪ್ರಕಟಗೊಂಡಿದ್ದು, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಇದೀಗ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ.

ನೂತನವಾಗಿ ಪ್ರಕಟಗೊಂಡ ರ‍್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಮೂರು ಸ್ಥಾನ ಕುಸಿತ ಕಾಣುವ ಮೂಲಕ 13ನೇ ಸ್ಥಾನಕ್ಕೆ ಜಾರಿದ್ದಾರೆ. ಕಳೆದೊಂದು ವರ್ಷದಿಂದಲೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ತೋರಲು ವಿಫಲವಾಗುತ್ತಲೇ ಬಂದಿದ್ದಾರೆ. ಇದೀಗ ಸಾಕಷ್ಟು ಸಮಯದ ಬಳಿಕ ಇದೇ ಮೊದಲ ಬಾರಿಗೆ ಸೂರ್ಯ ಐಸಿಸಿ ಟಿ20 ಶ್ರೇಯಾಂಕದಲ್ಲಿ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಟಾಪ್ 10 ಪಟ್ಟಿಯಿಂದ ಸೂರ್ಯ ಔಟ್!

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಇದೀಗ ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಈ ಇಬ್ಬರು ಬ್ಯಾಟರ್‌ಗಳು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನೀರಸ ಪ್ರದರ್ಶನ ತೋರಿದ್ದರು. ಸೂರ್ಯಕುಮಾರ್ ಯಾದವ್ 2022ರ ಜುಲೈನಲ್ಲಿ ಟಿ20 ರ‍್ಯಾಂಕಿಂಗ್‌ನಲ್ಲಿನಲ್ಲಿ ನಂ.1 ಸ್ಥಾನಕ್ಕೇರಿದ್ದರು. ಇದಾಗಿ 18 ತಿಂಗಳ ಬಳಿಕ ಅವರ ಫಾರ್ಮ್‌ ಕುಸಿತ ಕಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ತಿಲಕ್ ವರ್ಮಾ ಒಂದು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ಬಂದರೆ, ಅಭಿಷೇಕ್ ಶರ್ಮಾ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಐದು ಸ್ಥಾನ ಮೇಲೇರಿ ಹತ್ತನೇ ಸ್ಥಾನಕ್ಕೆ ಬಂದಿರುವುದು ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20ಯಲ್ಲಿ ಮಾತ್ರ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಐದು ಸ್ಥಾನ ಮೇಲೇರಿ 42ನೇ ಸ್ಥಾನಕ್ಕೆ ಏರಿದ್ದಾರೆ. ಶುಭಮನ್ ಗಿಲ್ ಒಂದು ಸ್ಥಾನ ಕೆಳಗಿಳಿದು 31ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಏಳು ಸ್ಥಾನಗಳ ಏರಿಕೆ ಕಂಡು 36ನೇ ಸ್ಥಾನಕ್ಕೆ ಬಂದಿರುವುದು ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿನ ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ.

ನಂ.1 ಸ್ಥಾನ ಉಳಿಸಿಕೊಂಡ ವರುಣ್ ಚಕ್ರವರ್ತಿ

ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತದ ವರುಣ್ ಚಕ್ರವರ್ತಿ ಮೊದಲ ಸ್ಥಾನವನ್ನು ಉಳಿಸಿಕೊಂಡರೆ, ಎರಡು ಸ್ಥಾನ ಕಳೆದುಕೊಂಡ ಅಕ್ಷರ್ ಪಟೇಲ್ 15ನೇ ಸ್ಥಾನದಲ್ಲಿದ್ದಾರೆ. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ರ‍್ಯಾಂಕಿಂಗ್‌ನಲ್ಲಿ ಲಾಭ ಪಡೆದ ಮತ್ತೊಬ್ಬ ಆಟಗಾರ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20ಯಲ್ಲಿ ಮಿಂಚಿದ ಬುಮ್ರಾ 10 ಸ್ಥಾನ ಮೇಲೇರಿ 18ನೇ ಸ್ಥಾನಕ್ಕೆ ತಲುಪಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಸಂಜು ಸೇರಿದಂತೆ ಆಟಗಾರರಿಗೆ ವಿಶ್ವಕಪ್‌ಗೂ ಮುನ್ನ ರ‍್ಯಾಂಕಿಂಗ್ ಸುಧಾರಿಸಿಕೊಳ್ಳಲು ಅವಕಾಶ ಸಿಗಲಿದೆ.