ನೆಟ್ಟಗೆ ಖರೀದಿ ಮಾಡದೇ ಈಗ ಹಿಂದಿ ಹೇರಿಕೆ ಮಾಡ್ತೀರಾ? RCB ಹಿಂದಿ ಎಕ್ಸ್ ಖಾತೆ ಆರಂಭಕ್ಕೆ ವಿರೋಧ!
ಹರಾಜಿನ ಬಳಿಕ ಆರ್‌ಬಿ ಮ್ಯಾನೇಜ್ಮೆಂಟ್ ಟ್ರೋಲ್ ಆಗುತ್ತಿದೆ. ಇದರ ನಡುವೆ ಆರ್‌ಸಿಬಿ ಎಕ್ಸ್(ಟ್ವಿಟರ್)ಖಾತೆಯಲ್ಲಿ ಹಿಂದೇ ಪೇಜ್ ಆರಂಭಿಸಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆರ್‌ಸಿಬಿ ಹಿಂದಿ ಹೇರಿಕೆ ಮಾಡುತ್ತಿದೆ ಅನ್ನೋ ಆಕ್ರೋಶ ಭುಗಿಲೆದ್ದಿದೆ.
ಬೆಂಗಳೂರು(ನ.27) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025ರ ಆರಂಭಕ್ಕೂ ಮುನ್ನವೇ ಹಲವು ವಿಘ್ನ ಎದುರಿಸುತ್ತಿದೆ. ಕಪ್ ಗೆಲ್ಲದಿದ್ದರೂ 2008ರಿಂದ ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಈ ಬಾರಿಯ ಹರಾಜಿನಲ್ಲಿನ ಖರೀದಿ ತೃಪ್ತಿಯಾಗಿಲ್ಲ. ಪ್ರಮುಖ ಆಟಗಾರರ ಕೈಬಿಟ್ಟಿದ್ದಾರೆ ಅನ್ನೋ ಕೂಗೂ ಜೋರಾಗಿದೆ. ಆರ್‌ಸಿಬಿ ಟೀಂ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನದ ನಡುವೆ ಇದೀಗ ಕನ್ನಡಿಗರ ಆಕ್ರೋಶಕ್ಕೂ ಆರ್‌ಸಿಬಿ ಗುರಿಯಾಗಿದೆ. ಆರ್‌ಸಿಬಿ ಹಿಂದಿ ಹೇರಿಕೆ ಮಾಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಇದಕ್ಕೆ ಕಾರಣ ಆರ್‌ಸಿಬಿ ಇದೀಗ ಎಕ್ಸ್(ಟ್ವಿಟರ್)ನಲ್ಲಿ ಹಿಂದಿ ಪೇಜ್ ಆರಂಭಿಸಿದೆ. ಆರ್‌ಸಿಬ ಹಿಂದಿ ಎಕ್ಸ್ ಪೇಜ್‌ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಆರ್‌ಸಿಬಿ ತಂಡ ಹಿಂದಿ ಪೇಜ್ ಆರಂಭಿಸುವ ಅವಶ್ಯಕತೆ ಏನಿತ್ತು? ಇದು ಹಿಂದಿ ಹೇರಿಕೆಯ ಮೊದಲ ಹೆಜ್ಜೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿರುವುದು ಇದೊಂದೆ ಕ್ರೀಡಾ ಫ್ರಾಂಚೈಸಿಯಲ್ಲ. ಹಲವು ಕ್ರೀಡಾ ಫ್ರಾಂಚೈಸಿಗಳು ಬೆಂಗಳೂರಿನಲ್ಲಿದೆ. ಎಲ್ಲಾ ತಂಡಗಳು ಕನ್ನಡಿಗರು, ಕನ್ನಡ ಭಾಷೆ, ಕ್ರೀಡೆಗೆ ಗೌರವ ನೀಡುತ್ತಿದೆ. ಆದರೆ ಆರ್‌ಸಿಬಿ ಮಾತ್ರ ಹಿಂದಿಗಾಗಿ ಹೊಸ ಪೇಜ್ ಆರಂಭಿಸಿದೆ ಎಂದು ಆರೋಪ ಕೇಳಿಬಂದಿದೆ.
ಬ್ಯಾಂಕ್‌ಗೆ ಮಾಡಿರ್ಬೋದು ಆದ್ರೆ RCB ಅಭಿಮಾನಿಗೆ ಮೋಸಮಾಡಿಲ್ಲ, ಹರಾಜು ಬಳಿಕ ಮಲ್ಯ ನೆನೆದ ಫ್ಯಾನ್ಸ್!
ಆರ್‌ಸಿಬಿ ಹೊಸದಾಗಿ Royal Challengers Bengaluru Hindi ಹೆಸರಿನ @RCBinHindi ಎಕ್ಸ್ ಖಾತೆ ಆರಂಭಿಸಿದೆ. ಈ ಮೂಲಕ ಆರ್‌ಸಿಬಿ ಮೂರಕ್ಕಿಂತ ಹೆಚ್ಚು ಎಕ್ಸ್ ಖಾತೆಗಳನ್ನು ನಿರ್ವಹಿಸುತ್ತಿದೆ. ಆರ್‌ಸಿಬಿಯ ಮೂಲ ಎಕ್ಸ್(ಟ್ವಿಟರ್) ಪೇಜ್ Royal Challengers Bengaluru ಹೆಸರಿನ @RCBTweets ಮುಖ್ಯ ಖಾತೆಯಾಗಿದೆ. ಇಲ್ಲಿ ಇಂಗ್ಲೀಷ್‌ನಲ್ಲಿ ಟ್ವೀಟ್ ಮಾಡಲಾಗುತ್ತದೆ. ಇನ್ನು ಕನ್ನಡದಲ್ಲಿ ಪೋಸ್ಟ್ ಮಾಡಲು ಆರ್‌ಸಿಬಿ Royal Challengers Bengaluru Kannada ಅನ್ನೋ ಹೆಸರಿನ @RCBinKannada ಖಾತೆ ಆರಂಭಿಸಿದೆ. ಈ ಪೇಜ್‌ನಲ್ಲಿ ಕನ್ನಡದಲ್ಲಿ ಟ್ವೀಟ್ ಮಾಡಲಾಗುತ್ತಿದೆ. ಇದರ ಜೊತೆಗೆ ಹಿಂದಿಯಲ್ಲಿ ಟ್ವೀಟ್ ಮಾಡಲು ಹೊಸ ಹಿಂದಿ ಖಾತೆಯನ್ನೂ ಆರಂಭಿಸಿದೆ.
ಈ ರೀತಿ ಮೂರು ಮೂರು ಖಾತೆಗಳ ಅವಶ್ಯಕತೆ ಏನಿತ್ತು. ಒಂದೇ ಎಕ್ಸ್ ಖಾತೆಯಲ್ಲಿ ಎಲ್ಲಾ ಭಾಷೆಯಲ್ಲೂ ಬೇಕಿದ್ದರೆ ಪೋಸ್ಟ್ ಮಾಡಬಹುದಿತ್ತು. ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಇತರ ತಂಡಗಳು ಒಂದೇ ಎಕ್ಸ್ ಖಾತೆಯಲ್ಲಿ ತಮ್ಮ ತಮ್ಮ ಭಾಷೆಯಲ್ಲೂ ಪೋಸ್ಟ್ ಮಾಡುತ್ತಿದೆ. ಆದರೆ ಆರ್‌ಸಿಬಿ ಮೂರು ಬೇರೆ ಬೇರೆ ಖಾತೆಗಳನ್ನು ಆರಂಭಿಸಿದೆ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೇ ಖಾತೆಯಲ್ಲಿ ಉತ್ತಮವಾಗಿ ಕನ್ನಡ ಹಾಗೂ ಇತರ ಭಾಷೆಯನ್ನು ಬಳಸಿ ಪೋಸ್ಟ್ ಮಾಡುವುದು ಹೇಗೆ ಎಂದು ಆರ್‌ಸಿಬಿ, ಬೆಂಗಳೂರು ಎಫ್‌ಸಿ ಫುಟ್ಬಾಲ್ ತಂಡದ ಎಕ್ಸ್ ಖಾತೆ ಹಾಗೂ ಬೆಂಗಳೂರು ಬುಲ್ಸ್ ಪ್ರೋ ಕಬಡ್ಡಿ ತಂಡದ ಎಕ್ಸ್ ಖಾತೆ ನೋಡಿ ಕಲಿತುಕೊಳ್ಳಲಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.
ಕನ್ನಡಪರ ಹೋರಾಟಗಾರ ಸಜಿತ್ ಈ ಕುರಿತು ಟ್ವೀಟ್ ಮಾಡಿ, ಹಿಂದಿ ಹೇರಿಕೆ ನಿಲ್ಲಿಸಿ ಎಂದು ಎಚ್ಚರಿಸಿದ್ದಾರೆ. ಹಲವು ಕನ್ನಡಿಗರು ಆರ್‌ಸಿಬಿಯ ಹಿಂದಿ ಎಕ್ಸ್ ಪೇಜ್ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಆರ್‌ಸಿಬಿ ಹಿಂದಿ ಪೇಜ್ ನಿಲ್ಲಿಸದಿದ್ದರೆ ಆರ್‌ಸಿಬಿ ಎಲ್ಲಾ ಪೇಜ್ ಬ್ಲಾಕ್ ಅಭಿಯಾನ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ. ಇತ್ತ ಆರ್‌ಸಿಬಿ ಮ್ಯಾನೇಜ್ಮೆಂಟ್ ಆಟಗಾರರ ಖರೀದಿಯಲ್ಲಿ ನಿರ್ಲಕ್ಷ್ಯ ಮಾಡಿದೆ, ಹಣ ಉಳಿಸುವ ಪ್ರಯತ್ನ ಮಾಡಿದೆ ಅನ್ನೋ ಆರೋಪ ಕೇಳಿಬಂದಿದೆ. ಕೆಎಲ್ ರಾಹುಲ್, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಕೆಲ ಪ್ರಮುಖ ಆಟಗಾರರ ಖರೀದಿಸಿದ ಕಾರಣ ಆಕ್ರೋಶ ಹೆಚ್ಚಾಗಿದೆ.