1992ರ ವಿಶ್ವಕಪ್ ಹೀರೋ ಈಗ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಪುತ್ರನ ಪ್ರಕಾರ, ಸೂಕ್ತ ಚಿಕಿತ್ಸೆ ಸಿಗದ ಕಾರಣ ಅವರ ಬಲಗಣ್ಣಿನ ದೃಷ್ಟಿ ಶೇ. 85ರಷ್ಟು ಕ್ಷೀಣಿಸಿದ್ದು, ಅವರು ಅಂತರರಾಷ್ಟ್ರೀಯ ಸಮುದಾಯದ ಸಹಾಯವನ್ನು ಕೋರಿದ್ದಾರೆ.

ವಿಶ್ವ ಕ್ರಿಕೆಟ್ ಮೈದಾನದಲ್ಲಿ ನಾಯಕನಾಗಿ ಮೆರೆದು, 1992ರಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ, ಆ ನಂತರ ರಾಜಕೀಯ ಪ್ರವೇಶಿಸಿ ದೇಶದ ಪ್ರಧಾನಿಯೂ ಆಗಿದ್ದ ದಂತಕಥೆ ಇಮ್ರಾನ್ ಖಾನ್ ಇಂದು ಕತ್ತಲ ಕೋಣೆಯಲ್ಲಿ ಜೀವನದ ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. 1992ರ ವಿಶ್ವಕಪ್ ಹೀರೋ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಳೆದ 1100 ದಿನಗಳಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಆದರೆ, ಈಗ ಅವರಿಂದ ತೂರಿಬರುತ್ತಿರುವ ಆತಂಕಕಾರಿ ಸುದ್ದಿಯೊಂದು ವಿಶ್ವ ಕ್ರಿಕೆಟ್ ಜಗತ್ತನ್ನೇ ನಡುಗಿಸಿದೆ.

ಖಾನ್‌ ಪುತ್ರನ ಪೋಸ್ಟ್!

ಇಮ್ರಾನ್ ಖಾನ್ ಅವರ ಕಿರಿಯ ಪುತ್ರ ಖಾಸಿಮ್ ಖಾನ್ ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಸಮುದಾಯ ಮತ್ತು ಜಗತ್ತಿನ ಕಣ್ಣು ತೆರೆಸುವ ಭಾವುಕ ಮನವಿ ಮಾಡಿದ್ದಾರೆ.

'ನನ್ನ ತಂದೆಗೆ ಕಣ್ಣು ಕಾಣಿಸುತ್ತಿಲ್ಲ, ಅವರನ್ನು ಬದುಕಿಸಿ!'

ಖಾಸಿಮ್ ಖಾನ್ ತಮ್ಮ ಪೋಸ್ಟ್‌ನಲ್ಲಿ ತಂದೆಯ ಆರೋಗ್ಯದ ದುಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. "ನನ್ನ ತಂದೆ ಇಮ್ರಾನ್ ಖಾನ್ ಜೈಲಿಗೆ ತಳ್ಳಲ್ಪಟ್ಟು ಬರೋಬ್ಬರಿ 1100 ದಿನಗಳಾಗಿವೆ. ಮಾರ್ಚ್ ತಿಂಗಳಿನಿಂದ ನಾನಾಗಲಿ ಅಥವಾ ನನ್ನ ಸಹೋದರನಾಗಲಿ ಅವರ ಧ್ವನಿಯನ್ನೇ ಕೇಳಿಲ್ಲ. ಕಳೆದ ಹಲವು ತಿಂಗಳುಗಳಿಂದ ಅವರನ್ನು ಭೇಟಿಯಾಗಲು ನಮಗೆ ಅಥವಾ ಕುಟುಂಬಕ್ಕೆ ಯಾವುದೇ ರೀತಿಯ ಅನುಮತಿಯನ್ನೂ ನೀಡುತ್ತಿಲ್ಲ. ಅವರ ಆರೋಗ್ಯದ ಸ್ಥಿತಿ ಹೇಗಿದೆ ಎನ್ನುವುದೂ ನಮಗೆ ತಿಳಿಯುತ್ತಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ.

ಕ್ಷೀಣಿಸಿದ ದೃಷ್ಟಿ!

ಜೈಲಿನಲ್ಲಿ ಅವರಿಗೆ ನೀಡಿರುವ ಏಕಾಂಗಿ ಬಂಧನ (Solitary Confinement) ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡದಿರುವ ಕಾರಣದಿಂದಾಗಿ ಇಮ್ರಾನ್ ಖಾನ್ ಅವರ ಬಲಗಣ್ಣಿನ ದೃಷ್ಟಿ ಶೇ. 85 ರಷ್ಟು ಕ್ಷೀಣಿಸಿದೆ ಎನ್ನಲಾಗಿದೆ. ಕೇವಲ 15% ದೃಷ್ಟಿಯಷ್ಟೇ ಉಳಿದಿದ್ದು, ತಕ್ಷಣ ಸೂಕ್ತ ಹಾಗೂ ಅಗತ್ಯ ವೈದ್ಯಕೀಯ ಚಿಕಿತ್ಸೆ ಸಿಗದಿದ್ದರೆ ಅವರು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ.

ಮಾನವ ಹಕ್ಕು ಸಂಘಟನೆಗಳಿಗೆ ಅಂತರರಾಷ್ಟ್ರೀಯ ಮನವಿ!

ಜೈಲಿನಲ್ಲಿ ಅವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿದೆಯೋ ಇಲ್ಲವೋ ಎಂಬ ಸಣ್ಣ ಮಾಹಿತಿಯೂ ನಮಗಿಲ್ಲ. ಪ್ರಪಂಚದಾದ್ಯಂತ ಇರುವ ಮಾನವ ಹಕ್ಕುಗಳ ಸಂಘಟನೆಗಳು, ವಿಶ್ವ ಸಂಸ್ಥೆ ಮತ್ತು ಪ್ರಜಾಪ್ರಭುತ್ವದ ರಾಷ್ಟ್ರಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು. ಮೂಲಭೂತ ಚಿಕಿತ್ಸೆಯಿಂದಲೂ ಅವರನ್ನು ವಂಚಿಸಲಾಗುತ್ತಿದ್ದು, ನನ್ನ ತಂದೆಯ ಪ್ರಾಣ ಮತ್ತು ಆರೋಗ್ಯದ ಜವಾಬ್ದಾರಿ ಅಲ್ಲಿನ ಸರ್ಕಾರದ ಮೇಲಿದೆ ಎಂದು ಖಾಸಿಮ್ ಖಾನ್ ಆಕ್ರೋಶದ ಜೊತೆಗೆ ಕಣ್ಣೀರಿನ ಮನವಿ ಮಾಡಿದ್ದಾರೆ.

ಬ್ಯಾಟ್ಸಮನ್‌ಗೆ ಸಿಂಹಸ್ವಪ್ನವಾಗಿದ್ದ ಖಾನ್‌!

ಒಂದಾನೊಂದು ಕಾಲದಲ್ಲಿ ಮೈದಾನದಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ 'ಮಾಸ್ಟರ್ ಆಲ್-ರೌಂಡರ್' ಇಂದು ಕತ್ತಲ ಕೋಣೆಯಲ್ಲಿ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ತಲುಪಿರುವುದು ಕ್ರೀಡಾಲೋಕವನ್ನು ಬೆಚ್ಚಿಬೀಳಿಸಿದೆ. ಜಗತ್ತಿನ ಪ್ರಸಿದ್ಧ ಮಾಜಿ ಕ್ರಿಕೆಟಿಗರು ಮತ್ತು ವಿಶ್ವ ನಾಯಕರು ಈ ಮನವಿಗೆ ಹೇಗೆ ಸ್ಪಂದಿಸುತ್ತಾರೆ ಹಾಗೂ ಪಾಕಿಸ್ತಾನ ಸರ್ಕಾರ ಅವರ ವೈದ್ಯಕೀಯ ನೆರವಿಗೆ ಮುಂದಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.