ಜಿಂಬಾಬ್ವೆ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಇತಿಹಾಸ ಬರೆದ ಯುವ ತಾರೆ ವೈಭವ್ ಸೂರ್ಯವಂಶಿ, ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಭಾರತೀಯರ ಎಲೈಟ್ ಕ್ಲಬ್‌ಗೆ ಸೇರಿದ್ದಾರೆ. ಆದರೆ 12 ಎಸೆತಗಳ ಅಜೇಯ ವಿಶ್ವ ದಾಖಲೆಯನ್ನು ಯಾರಿಂದಲೂ ಮುರಿಯಲಾಗಿಲ್ಲ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಟಿ20 ಕ್ರಿಕೆಟ್ ಎಂದರೆ ಅಲ್ಲಿ ಮೈದಾನದಲ್ಲಿ ರನ್‌ಗಳ ಚಂಡಮಾರುತ ಏಳಲೇಬೇಕು! ಕ್ರೀಸ್‌ಗೆ ಕಾಲಿಟ್ಟ ತಕ್ಷಣ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿ, ಪಂದ್ಯದ ಚಿತ್ರಣವನ್ನೇ ಬದಲಾಯಿಸುವ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳ ಶಕ್ತಿಶಾಲಿ ಪಡೆಯೇ ಭಾರತದಲ್ಲಿದೆ. ಇದೀಗ ಈ ದಿಗ್ಗಜರ ಸಾಲಿಗೆ ವೈಭವ್ ಸೂರ್ಯವಂಶಿ ಎಂಬ ಕಿರಿಯ ಯುವ ತಾರೆಯ ಹೊಸ ಸೇರ್ಪಡೆಯಾಗಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ಬೌಲರ್‌ಗಳನ್ನು ದಂಡಿಸಿದ ವೈಭವ್, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡ ವೈಭವ್, 18 ಎಸೆತಗಳಲ್ಲಿ ಫಿಫ್ಟಿ ಸಿಡಿಸಿದ ಭಾರತದ ಎಲೈಟ್ ಕ್ಲಬ್ ಸೇರಿದ್ದಾರೆ.
19 ವರ್ಷಗಳಿಂದ ಅಜೇಯ ಆ ವರ್ಲ್ಡ್ ರೆಕಾರ್ಡ್!
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕದ ಮಾತು ಬಂದಾಗ ಪ್ರತಿಯೊಬ್ಬ ಅಭಿಮಾನಿಯ ಕಣ್ಣಮುಂದೆ ಬರುವುದು 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್! ಸೆಪ್ಟೆಂಬರ್ 19, 2007 ರಂದು ಡರ್ಬನ್ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಬಾರಿಸಿದ ಆರು ಸಿಕ್ಸರ್‌ಗಳು ಹಾಗೂ ಕೇವಲ 12 ಎಸೆತಗಳಲ್ಲಿ ಸಿಡಿಸಿದ ಅರ್ಧಶತಕ ಇಂದಿಗೂ ಕ್ರಿಕೆಟ್ ಇತಿಹಾಸದ ಸುವರ್ಣ ಪುಟಗಳಲ್ಲಿದೆ. ಇದು ಭಾರತಕ್ಕೆ ಮಾತ್ರವಲ್ಲದೆ, ಇಡೀ ವಿಶ್ವ ಕ್ರಿಕೆಟ್‌ನ ಅತ್ಯಂತ ವೇಗದ T20I ಅರ್ಧಶತಕವಾಗಿದ್ದು, ಕಳೆದ 19 ವರ್ಷಗಳಿಂದ ಯಾರಿಂದಲೂ ಮುರಿಯಲಾಗದ ಅಜೇಯ ಐತಿಹಾಸಿಕ ದಾಖಲೆಯಾಗಿ ಉಳಿದಿದೆ.
ಆ ದಾಖಲೆ ಸನಿಹ ಇರುವರು ಯಾರು?
ಯುವಿ ದಾಖಲೆಗೆ ಹತ್ತಿರವಾದ ಅಭಿಷೇಕ್ ಶರ್ಮಾ ಯುವರಾಜ್ ಅವರ ಈ ಮಹಾ ದಾಖಲೆಗೆ ಅತ್ಯಂತ ಹತ್ತಿರ ತಲುಪಿದ ಹೆಗ್ಗಳಿಕೆ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರದ್ದು. 2026ರ ಜನವರಿ 25 ರಂದು ನ್ಯೂಜಿಲೆಂಡ್ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಭಿಷೇಕ್ ಇಡೀ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸಿದ್ದರು. ಟಿ20ಯಲ್ಲಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಬಾರಿ ಅರ್ಧಶತಕ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಯೂ ಇವರಿಗಿದೆ. ನ್ಯೂಜಿಲೆಂಡ್ ವಿರುದ್ಧ (14 ಮತ್ತು 18 ಎಸೆತಗಳು) ಹಾಗೂ ಇಂಗ್ಲೆಂಡ್ ವಿರುದ್ಧ (17 ಮತ್ತು 20 ಎಸೆತಗಳು) ಇವರು ಸ್ಫೋಟಕ ಫಿಫ್ಟಿ ಬಾರಿಸಿದ್ದಾರೆ.
16 ಎಸೆತದಲ್ಲಿ ಹಾರ್ದಿಕ್ ಫಿಪ್ಟಿ!
ದುಬೆ-ಹಾರ್ದಿಕ್ ಬಿರುಗಾಳಿ ಹಾಗೂ '18 ಎಸೆತಗಳ' ಎಲೈಟ್ ಕ್ಲಬ್ ಇನ್ನು ಆಲ್‌ರೌಂಡರ್ ಶಿವಂ ದುಬೆ ಜನವರಿ 28, 2026 ರಂದು ಕಿವೀಸ್ ಪಡೆ ವಿರುದ್ಧ ಕೇವಲ 15 ಎಸೆತಗಳಲ್ಲಿ ಫಿಫ್ಟಿ ಚಚ್ಚಿದ್ದರೆ, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಡಿಸೆಂಬರ್ 19, 2025 ರಂದು ದಕ್ಷಿಣ ಆಫ್ರಿಕಾ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಹೆಗ್ಗಳಿಕೆ ಹಲವು ಶ್ರೇಷ್ಠ ಭಾರತೀಯ ಬ್ಯಾಟರ್‌ಗಳಿಗಿದೆ:
ಕೆ.ಎಲ್. ರಾಹುಲ್: 2021ರ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ (18 ಎಸೆತ).
ಸೂರ್ಯಕುಮಾರ್ ಯಾದವ್: 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ (18 ಎಸೆತ).
ವೈಭವ್ ಸೂರ್ಯವಂಶಿ: ಜಿಂಬಾಬ್ವೆ ವಿರುದ್ಧ (18 ಎಸೆತ) ಸಿಡಿಸಿ ಈ ಎಲೈಟ್ ಕ್ಲಬ್‌ನಲ್ಲಿದ್ದಾರೆ.
ಗಂಭೀರ್, ರೋಹಿತ್ ಹಾಗೂ ಅಕ್ಷರ್ ಅಬ್ಬರ ಕಡಿಮೆ ಎಸೆತಗಳಲ್ಲಿ ಪಂದ್ಯದ ದಿಕ್ಕು ಬದಲಿಸಿದವರ ಪಟ್ಟಿಯಲ್ಲಿ ಮಾಜಿ ಆರಂಭಿಕ ಗೌತಮ್ ಗಂಭೀರ್ (19 ಎಸೆತ, 2009ರಲ್ಲಿ ಶ್ರೀಲಂಕಾ ವಿರುದ್ಧ) ಹಾಗೂ ನಾಯಕ ರೋಹಿತ್ ಶರ್ಮಾ (19 ಎಸೆತ, 2024ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ) ಮುಂಚೂಣಿಯಲ್ಲಿದ್ದಾರೆ. ಇವರ ಜೊತೆಗೆ ಅಕ್ಷರ್ ಪಟೇಲ್ (20 ಎಸೆತ, 2023) ಮತ್ತು ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ (20 ಎಸೆತ, 2026ರಲ್ಲಿ ನಮೀಬಿಯಾ ವಿರುದ್ಧ) ಕೂಡ ಈ ಸ್ಫೋಟಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಯುವರಾಜ್ ಸಿಂಗ್ ಅವರ 12 ಎಸೆತಗಳ ಚಾರಿತ್ರಿಕ ವಿಶ್ವ ದಾಖಲೆಯಿಂದ ಆರಂಭವಾದ ಈ ಆಕ್ರಮಣಕಾರಿ ಬ್ಯಾಟಿಂಗ್ ಪರಂಪರೆಯು, ಇಂದು ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರಂತಹ ಯುವ ರತ್ನಗಳ ಕೈಯಲ್ಲಿ ಸುರಕ್ಷಿತವಾಗಿದೆ.

