ಕೊಲಂಬೊ(ಮೇ.03): ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ತಿಸಾರ ಪರೆರಾ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಇಂದು(ಮೇ.03) ದಿಢೀರ್ ವಿದಾಯ ಘೋಷಿಸಿದ್ದಾರೆ. 

32 ವರ್ಷದ ತಿಸಾರ ಪೆರೆರಾ ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದು, ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಾಂಗ್ಲಾದೇಶ ವಿರುದ್ದ ಸೀಮಿತ ಓವರ್‌ಗಳ ಸರಣಿಯಲ್ಲಿ ಯುವ ಕ್ರಿಕೆಟಿಗರಿಗೆ ಮಣೆಹಾಕುವುದನ್ನು ಮನಗಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಲು ಪೆರೆರಾ ತೀರ್ಮಾನಿಸಿದ್ದಾರೆ.

ನಾನು ಶ್ರೀಲಂಕಾ ತಂಡದ ಪರ 7 ಕ್ರಿಕೆಟ್ ವಿಶ್ವಕಪ್ ಆಡಿದ್ದೇನೆ ಹಾಗೂ ಬಾಂಗ್ಲಾದೇಶದಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ತಂಡದಲ್ಲಿದೆ ಎನ್ನುವುದೇ ನನಗೆ ಸಿಕ್ಕ ದೊಡ್ಡ ಗೌರವ. ಇದು ನನ್ನ ಜೀವನದ ಅತಿ ದೊಡ್ಡ ಅವಿಸ್ಮರಣೀಯ ಕ್ಷಣ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಚಚ್ಚಿದ ತಿಸಾರ ಪೆರೆರಾ..! ವಿಡಿಯೋ ವೈರಲ್

ತಿಸಾರ ಪೆರೆರಾ ಶ್ರೀಲಂಕಾ ಪರ 6 ಟೆಸ್ಟ್, 166 ಏಕದಿನ ಹಾಗೂ 84 ಟಿ20 ಪಂದ್ಯವನ್ನಾಡಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡದ ಆಧಾರಸ್ತಂಭವಾಗಿ ಗುರುತಿಸಿಕೊಂಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಪೆರೆರಾ 2338 ರನ್‌ ಹಾಗೂ 175 ವಿಕೆಟ್ ಕಬಳಿಸಿ ಮಿಂಚಿದ್ದರು.

ಕಳೆದೆರಡು ತಿಂಗಳ ಹಿಂದಷ್ಟೇ ಪರೆರಾ ಕ್ಲಬ್‌ ಕ್ರಿಕೆಟ್‌ ಟೂರ್ನಿಯೊಂದರಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ, ಈ ಸಾಧನೆ ಮಾಡಿದ ಲಂಕಾದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಬ್ರೆಟ್ ಲೀ ಜತೆಗೆ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್ ಕಬಳಿಸಿದ ವೇಗದ ಬೌಲರ್‌ ಎನ್ನುವ ದಾಖಲೆ ಪೆರೆರಾ ಹೆಸರಿನಲ್ಲಿದೆ.