ಟಿ20 ವಿಶ್ವಕಪ್‌ನ ಸೂಪರ್-8 ಹಂತದ ನಿರ್ಣಾಯಕ ಪಂದ್ಯದಲ್ಲಿ, ಭಾರತವು ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ ಭಾರತದ ಸೆಮೀಸ್ ಕನಸು ಜೀವಂತ.

ಚೆನ್ನೈ: ಸೂಪರ್‌-8 ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 72 ರನ್‌ ಭರ್ಜರಿ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್‌ ಭಾರತ ತಂಡ, ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ತಂಡ ಕೊನೆ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಗೆಲ್ಲಬೇಕಿದೆ. ಮತ್ತೊಂದೆಡೆ ಸೂಪರ್‌-8ರಲ್ಲಿ ಸತತ 2 ಪಂದ್ಯದಲ್ಲೂ ಸೋತ ಜಿಂಬಾಬ್ವೆ ಟೂರ್ನಿಯಿಂದಲೇ ಹೊರಬಿತ್ತು.

Add Asianetnews Kannada as a Preferred SourcegooglePreferred

ಚೆಪಾಕ್‌ನಲ್ಲಿ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ ಅಕ್ಷರಶಃ ಅಬ್ಬರಿಸಿತು. ಕ್ರೀಸ್‌ಗೆ ಬಂದ ಎಲ್ಲಾ 6 ಮಂದಿಯೂ ಸ್ಫೋಟಕ ಆಟವಾಡಿದ್ದರಿಂದ ತಂಡ 4 ವಿಕೆಟ್‌ ನಷ್ಟದಲ್ಲಿ 256 ರನ್‌ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿ ಗೆಲ್ಲಲು ಜಿಂಬಾಬ್ವೆ ಸಾಧ್ಯವಾಗದಿದ್ದರೂ ಸುಲಭದಲ್ಲಿ ತಂಡ ಸೋಲೊಪ್ಪಿಕೊಳ್ಳಲಿಲ್ಲ. ಕೊನೆವರೆಗೂ ಹೋರಾಡಿದ ತಂಡ 6 ವಿಕೆಟ್‌ ನಷ್ಟದಲ್ಲಿ 184 ರನ್‌ ಸಿಡಿಸಿತು.

ಭಾರತ ಸ್ಫೋಟಕ ಆಟ:

ಭಾರತ ಈ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡಿತು. ಅಭಿಷೇಕ್‌ ಶರ್ಮಾ-ಸಂಜು ಸ್ಯಾಮ್ಸನ್‌ರನ್ನು ಆಡಿಸಿದ ತಂಡ ಅದರಲ್ಲಿ ಯಶಸ್ವಿಯಾಯಿತು. ಸಂಜು ಸ್ಯಾಮ್ಸನ್‌ 15 ಎಸೆತಕ್ಕೆ 24, ಇಶಾನ್‌ ಕಿಶನ್‌ 24 ಎಸೆತಕ್ಕೆ 38 ರನ್‌ ಸಿಡಿಸಿದರು. ತಮ್ಮ ಮೊದಲ 3 ಪಂದ್ಯದಲ್ಲೂ ಸೊನ್ನೆ ಸುತ್ತಿ 4ನೇ ಪಂದ್ಯದಲ್ಲಿ ಕೇವಲ 15 ರನ್‌ ಗಳಿಸಿದ್ದ ಅಭಿಷೇಕ್‌ ಈ ಪಂದ್ಯದಲ್ಲಿ 30 ಎಸೆತಕ್ಕೆ 55 ರನ್‌ ಚಚ್ಚಿದರು. ನಾಯಕ ಸೂರ್ಯಕುಮಾರ್‌ ಕೊಡುಗೆ 13 ಎಸೆತಕ್ಕೆ 33 ರನ್‌. ಕೊನೆ 5 ಓವರ್‌ಗಳಲ್ಲಿ ತಂಡದ ಮೊತ್ತ ಮತ್ತಷ್ಟು ಹೆಚ್ಚಿತು. 30 ಎಸೆತಕ್ಕೆ 80+ ರನ್‌ ಗಳಿಸಿತು. ಹಾರ್ದಿಕ್‌ ಪಾಂಡ್ಯ 23 ಎಸೆತಕ್ಕೆ ಔಟಾಗದೆ 50 ರನ್‌ ಬಾರಿಸಿದರೆ, ತಿಲಕ್‌ ವರ್ಮಾ 16 ಎಸೆತಗಳಲ್ಲಿ ಔಟಾಗದೆ 44 ರನ್ ಬಾರಿಸಿದರು.

ಬೆನೆಟ್‌ ಹೋರಾಟ:

ಗುರಿ ಬೆನ್ನತ್ತಲು ಇಳಿದ ಜಿಂಬಾಬ್ವೆ ಪವರ್‌-ಪ್ಲೇನಲ್ಲಿ ವಿಕೆಟ್‌ ಉಳಿಸಿಕೊಂಡರೂ ರನ್‌ ಗಳಿಕೆಗೆ ವೇಗ ನೀಡಲಿಲ್ಲ. ಆರಂಭಿಕ ಆಟಗಾರ ಬ್ರಿಯಾನ್‌ ಬೆನೆಟ್‌ ಅಬ್ಬರಿಸಿದರೂ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಹೀಗಾಗಿ ಬೆನೆಟ್‌ ಕೊನೆವರೆಗೂ ಏಕಾಂಗಿ ಹೋರಾಟ ನಡೆಸಿದರು. ಅವರು 59 ಎಸೆತಕ್ಕೆ ಔಟಾಗದೆ 97 ರನ್‌ ಗಳಿಸಿದರು. ಸಿಕಂದರ್‌ ರಝಾ 31 ರನ್‌ ಕೊಡುಗೆ ನೀಡಿದರು. ಅರ್ಶ್‌ದೀಪ್‌ 3 ವಿಕೆಟ್‌ ಪಡೆದರು.

ಸ್ಕೋರ್: ಭಾರತ 20 ಓವರ್‌ಗಳಲ್ಲಿ 256/4 (ಅಭಿಷೇಕ್‌ 55, ಹಾರ್ದಿಕ್‌ 50*, ತಿಲಕ್‌ 44*, ಇಶಾನ್‌ 38, ಸೂರ್ಯ 33, ಸಂಜು 24, ಸಿಕಂದರ್‌ 1-29), ಜಿಂಬಾಬ್ವೆ 20 ಓವರ್‌ಗಳಲ್ಲಿ 184/6 (ಬೆನಟ್‌ 97*, ಸಿಕಂದರ್‌ 31, ಅರ್ಶ್‌ದೀಪ್‌ 3-24)

--256/4: ವಿಶ್ವಕಪ್‌ನಲ್ಲಿ 2ನೇ ಗರಿಷ್ಠ ಸ್ಕೋರ್‌

ಭಾರತ ಗಳಿಸಿದ 256 ರನ್‌, ಟಿ20 ವಿಶ್ವಕಪ್‌ ಇತಿಹಾಸದಲ್ಲೇ 2ನೇ ಗರಿಷ್ಠ ಸ್ಕೋರ್‌. 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ ಗಳಿಸಿದ 260 ರನ್‌ ಈಗಲೂ ದಾಖಲೆ. 2007ರಲ್ಲಿ ಇಂಗ್ಲೆಂಡ್‌ ವಿರುದ್ಧ 4 ವಿಕೆಟ್‌ಗೆ 218 ರನ್‌ ಗಳಿಸಿದ್ದು ಭಾರತದ ಗರಿಷ್ಠ ಸ್ಕೋರ್‌ ಆಗಿತ್ತು.

6 ಬ್ಯಾಟರ್ಸ್‌ ಸ್ಟ್ರೈಕ್‌ರೇಟ್‌ 150+: ವಿಶ್ವಕಪ್‌ ದಾಖಲೆ

ಭಾರತದ ಎಲ್ಲಾ 6 ಬ್ಯಾಟರ್‌ಗಳು 150+ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ಟಿ20 ವಿಶ್ವಕಪ್‌ ಇನ್ನಿಂಗ್ಸ್‌ನಲ್ಲಿ 6 ಅಥವಾ ಅದಕ್ಕಿಂತ ಹೆಚ್ಚು ಬ್ಯಾಟರ್‌ಗಳು 150+ ಸ್ಟ್ರೈಕ್‌ರೇಟ್‌ನಲ್ಲಿ ತಲಾ 20+ ರನ್‌ ಗಳಿಸಿದ್ದು ಇದೇ ಮೊದಲು.