Asianet Suvarna News Asianet Suvarna News

ಬಯೋ ಬಬಲ್‌ ಉಲ್ಲಂಘಿಸಿ ರಸ್ತೆಯಲ್ಲಿ ಸಿಗರೇಟ್‌ ಹಿಡಿದು ಓಡಾಡಿದ 3 ಲಂಕಾ ಕ್ರಿಕೆಟಿಗರು ಸಸ್ಪೆಂಡ್

* ಬಯೋ ಬಬಲ್‌ ಉಲ್ಲಂಘಿಸಿ ತಂಡದಿಂದ ಹೊರಬಿದ್ದ ಮೂವರು ಲಂಕಾ ಕ್ರಿಕೆಟಿಗರು

* ಬ್ರಿಟನ್ ರಸ್ತೆ ಬದಿ ಸಿಗರೇಟ್‌ ಹಿಡಿದಿರುವ ಲಂಕಾ ಆಟಗಾರರ ವಿಡಿಯೋ ವೈರಲ್

* ಇದರ ಬೆನ್ನಲ್ಲೇ ತಂಡದಿಂದ ಕಿಕೌಟ್ ಆದ ಈ ಮೂವರು ಲಂಕಾ ಕ್ರಿಕೆಟಿಗರು

Sri Lankan 3 Cricket Players Suspended For Breaching Bio Bubble After Video goes Viral kvn
Author
London, First Published Jun 29, 2021, 12:49 PM IST

ಲಂಡನ್‌(ಜೂ.29): ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್‌ವಾಷ್‌ ಅನುಭವಿಸಿರುವ ಶ್ರೀಲಂಕಾ ಕ್ರಿಕೆಟ್ ತಂಡ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಲಂಕಾದ ಮೂವರು ಕ್ರಿಕೆಟಿಗರು ಬಯೋ ಬಬಲ್‌ ನಿಯಮ ಉಲ್ಲಂಘಿಸಿ ಬ್ರಿಟನ್‌ ರಸ್ತೆಗಳಲ್ಲಿ ಸಿಗರೇಟ್‌ ಹಿಡಿದುಕೊಂಡು ಬಿಂದಾಸ್‌ ಆಗಿ ಓಡಾಡಲು ಹೋಗಿ ಲಂಕಾ ತಂಡದಿಂದಲೇ ಹೊರಬಿದ್ದಿದ್ದಾರೆ.

ಹೌದು, ಶ್ರೀಲಂಕಾದ ತಾರಾ ಕ್ರಿಕೆಟಿಗರಾದ ಕುಸಾಲ್ ಮೆಂಡಿಸ್, ಧನುಷ್ಕಾ ಗುಣತಿಲಕಾ ಹಾಗೂ ನಿರ್ಶೋನ್‌ ಡಿಕ್‌ವೆಲ್ಲಾ ಬಯೋ ಬಬಲ್‌ ಉಲ್ಲಂಘಿಸಿದ ತಪ್ಪಿಗಾಗಿ ಮೂವರು ಆಟಗಾರರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಇದಷ್ಟೇ ಅಲ್ಲದೇ ಈ ಮೂವರು ಆಟಗಾರರನ್ನು ಶ್ರೀಲಂಕಾ ಕ್ರಿಕೆಟ್ ಕಾರ್ಯನಿರ್ವಾಹಕ ಸಮಿತಿಯು ತನಿಖೆಗೊಳಪಡಿಸಿದೆ.
 
ಲಂಕಾ ಕ್ರಿಕೆಟಿಗರಾದ ಮೆಂಡಿಸ್ ಹಾಗೂ ಡಿಕ್‌ವೆಲ್ಲಾ ಡುರ್ಹಾಮ್‌ನ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಹಿಡಿದುಕೊಂಡು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಮೂವರು ಕ್ರಿಕೆಟಿಗರು ಬಯೋ ಬಬಲ್‌ ಉಲ್ಲಂಘಿಸಿದ ತಪ್ಪಿಗಾಗಿ ಡುರ್ಹಾಮ್‌ನಿಂದ ತಕ್ಷಣವೇ ತವರಿಗೆ ಕರೆಸಿಕೊಳ್ಳಲಾಗಿದೆ. ಹೀಗಾಗಿ ಇಂದಿನಿಂದ(ಜೂ.29) ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಈ ಮೂವರು ಲಂಕಾ ಆಟಗಾರರು ಹೊರಬಿದ್ದಿದ್ದಾರೆ.

ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಬಿದ್ದ ಜೋಸ್ ಬಟ್ಲರ್

ಹೀಗಿದೆ ನೋಡಿ ಆ ವಿಡಿಯೋ:

ಬಯೋ ಬಬಲ್ ಉಲ್ಲಂಘಿಸಿದ ಈ ಮೂವರು ಆಟಗಾರರು ಇಂಗ್ಲೆಂಡ್ ಸರಣಿ ಮಾತ್ರವಲ್ಲದೇ, ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದಲೂ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಲಂಕಾ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಲಂಕಾ ಎದುರಿನ ಏಕದಿನ ಸರಣಿ ಜುಲೈ 13ರಿಂದ ಆರಂಭವಾಗಲಿದೆ. ಏಕದಿನ ಹಾಗೂ ಟಿ20 ಸರಣಿಗೆ ಕೊಲಂಬೊದ ಆರ್‌. ಪ್ರೇಮದಾಸ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ದುರಾದೃಷ್ಟವೆಂದರೆ ಈ ಘಟನೆ ಬೆಳಕಿಗೆ ಬಂದ ಒಂದು ದಿನ ಮುಂಚೆ ಟಿ20 ಸರಣಿಯಲ್ಲಿ ಮ್ಯಾಚ್‌ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದ ಫಿಲ್‌ ವೆಟ್ಟಿಕೇಸ್‌ ಅವರಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಮ್ಯಾಚ್‌ ರೆಫ್ರಿ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 7 ಮಂದಿ ಸಿಬ್ಬಂದಿಗಳನ್ನು ಐಸೋಲೇಷನ್‌ನಲ್ಲಿಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios