ಭಾರತ ಎದುರಿನ ಸರಣಿಗೂ ಮುನ್ನ ಲಂಕಾಗೆ ಶಾಕ್; ಕೋಚ್ ಗ್ರ್ಯಾಂಟ್ ಫ್ಲವರ್‌ಗೆ ಕೋವಿಡ್ ದೃಢ
* ಶ್ರೀಲಂಕಾ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್‌ಗೆ ಕೋವಿಡ್ ದೃಢ
* ಭಾರತ ವಿರುದ್ದದ ಸರಣಿಗೂ ಮುನ್ನ ಲಂಕಾ ತಂಡಕ್ಕೆ ಶಾಕ್
* ಪಿಸಿಆರ್ ಟೆಸ್ಟ್ ಮಾಡಿದ ಬಳಿಕ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ
ಕೊಲಂಬೊ(ಜು.09): ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ಮರಳಿದ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರಿಗೆ ಆಘಾತ ಎದುರಾಗಿದ್ದು, ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸದ್ಯ ಫ್ಲವರ್ ಐಸೋಲೆಟ್ ಆಗಿದ್ದು, ಉಳಿದ ಆಟಗಾರರನ್ನು ಕ್ವಾರಂಟೈನ್ ಮಾಡಲಾಗಿದೆ.
ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಗೂ ಮುನ್ನ ಫ್ಲವರ್‌ಗೆ ಕೋವಿಡ್ 19 ದೃಢಪಟ್ಟಿರುವುದು ಲಂಕಾ ಪಾಳಯದಲ್ಲಿ ಆತಂಕ ಮನೆಮಾಡಿದೆ. ಶ್ರೀಲಂಕಾ ಕ್ರಿಕೆಟ್ ತಂಡವು ಜುಲೈ 13ರಿಂದ ತವರಿನಲ್ಲಿ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾವನ್ನು ಎದುರಿಸಲಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್‌ಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಗ್ರ್ಯಾಂಟ್ ಫ್ಲವರ್ ಅವರು ಮಂದ ಸೋಂಕಿನ ಲಕ್ಷಣವನ್ನು ಹೊಂದಿದ್ದರು. ಪಿಸಿಆರ್ ಟೆಸ್ಟ್ ಮಾಡಿದ ಬಳಿಕ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
#IndvsSL ಋತುರಾಜ್ ಗಾಯಕ್ವಾಡ್‌ಗೆ 'ಕನ್ನಡ' ಕಲಿಸಿಕೊಟ್ಟ ಕ್ರಿಕೆಟಿಗ ಕೆ. ಗೌತಮ್
ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ಬಂದ ಲಂಕಾ ಆಟಗಾರರು ಹಾಗೂ ಸಿಬ್ಬಂದಿಗಳು ಕ್ವಾರಂಟೈನ್‌ನಲ್ಲಿದ್ದರು. ಗ್ರ್ಯಾಂಟ್ ಫ್ಲವರ್‌ಗೆ ಸೋಂಕು ದೃಢಪಡುತ್ತಿದ್ದಂತೆಯೇ ಅವರನ್ನು ಉಳಿದ ಆಟಗಾರರಿಂದ ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಇದೀಗ ಆಟಗಾರರಿಗೆ ಮತ್ತೊಮ್ಮೆ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದು ಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಟೀಂ ಇಂಡಿಯಾ ಲಂಕಾ ಪ್ರವಾಸ; 90 ಕೋಟಿ ರೂ ಗಳಿಸಲಿದೆ ಲಂಕಾ ಕ್ರಿಕೆಟ್ ಮಂಡಳಿ
ಶ್ರೀಲಂಕಾ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಟಿ20 ಹಾಗೂ ಏಕದಿನ ಸರಣಿಯನ್ನಾಡಿತ್ತು. ಈ ಎರಡೂ ಸರಣಿಯಲ್ಲೂ ಲಂಕಾ ದಯಾನೀಯ ಸೋಲು ಕಾಣುವ ಮೂಲಕ ಸರಣಿ ಕೈಚೆಲ್ಲಿತ್ತು. ಈ ತಂಡಕ್ಕೆ ಜಿಂಬಾಬ್ವೆ ಬ್ಯಾಟಿಂಗ್ ದಿಗ್ಗಜ ಗ್ರ್ಯಾಂಟ್ ಫ್ಲವರ್ ಬ್ಯಾಟಿಂಗ್ ಕೋಚ್ ಆಗಿ ಮಾರ್ಗದರ್ಶನ ಮಾಡಿದ್ದರು. ಇನ್ನು ಪ್ರವಾಸದಲ್ಲಿ ಬಯೋ ಬಬಲ್ ಉಲ್ಲಂಘಿಸಿದ ತಪ್ಪಿಗಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ಉಪನಾಯಕ ಕುಸಾಲ್ ಮೆಂಡಿಸ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿರ್ಶೋನ್ ಡಿಕ್‌ವೆಲ್ಲಾ ಹಾಗೂ ಆಲ್ರೌಂಡರ್ ದನುಷ್ಕಾ ಗುಣತಿಲಕ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಂದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧ ಹೇರಿದೆ.