#IndvsSL ಋತುರಾಜ್ ಗಾಯಕ್ವಾಡ್‌ಗೆ 'ಕನ್ನಡ' ಕಲಿಸಿಕೊಟ್ಟ ಕ್ರಿಕೆಟಿಗ ಕೆ. ಗೌತಮ್
* ಸಿಎಸ್‌ಕೆ ಆಟಗಾರರನಿಗೆ ಕನ್ನಡ ಕಲಿಸಿಕೊಟ್ಟ ಕೆ. ಗೌತಮ್
* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿರುವ ಗೌತಮ್-ಋತುರಾಜ್
* ಕನ್ನಡಿಗರ ಮನ ಗೆದ್ದ ಕೃಷ್ಣಪ್ಪ ಗೌತಮ್ ಮಾತು
ಕೊಲಂಬೊ(ಜು.08): ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಸೀಮಿತ ಓವರ್‌ಗಳ ಸರಣಿಯನ್ನಾಡಲು ದ್ವೀಪರಾಷ್ಟ್ರಕ್ಕೆ ಬಂದಿಳಿದಿದೆ. ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಆತಿಥೇಯ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್‌ನಲ್ಲೇ ಬೀಡುಬಿಟ್ಟಿದೆ. ಹೀಗಾಗಿ ಧವನ್ ನಾಯಕತ್ವ ಹಾಗೂ ಕನ್ನಡಿಗ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಯಂಗಿಸ್ತಾನ್ ಶ್ರೀಲಂಕಾಗೆ ಬಂದಿಳಿದೆ.
ಜುಲೈ 13ರಿಂದ ಶ್ರೀಲಂಕಾ ವಿರುದ್ದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರು ಸಾಕಷ್ಟು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇದೇ ವೇಳೆ ಬಿಡುವಿನ ಸಮಯವನ್ನು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಕನ್ನಡಿಗ ಕೃಷ್ಣಪ್ಪ ಗೌತಮ್ ಹಾಗೂ ಋತುರಾಜ್ ಗಾಯಕ್ವಾಡ್ ಅವರ ನಡುವಿನ ಸಂಭಾಷಣೆಯ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಗೌತಮ್ ಕನ್ನಡ ಪಾಠ, ಕನ್ನಡಿಗರ ಹೃದಯಗೆದ್ದಿದ್ದು, ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ಮೊದಲ ಬಾರಿಗೆ ಕರ್ನಾಟಕದ ಆಲ್ರೌಂಡರ್ ಕೆ. ಗೌತಮ್ ಹಾಗೂ ಋತುರಾಜ್ ಗಾಯಕ್ವಾಡ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಡಿಯೋ ಆರಂಭದಲ್ಲೇ ಗೌತಮ್ ಕನ್ನಡದಲ್ಲೇ ಮಾತು ಆರಂಭಿಸಿದ್ದಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಟೀಂ ಇಂಡಿಯಾ ಸಹ ಆಟಗಾರ ಗಾಯಕ್ವಾಡ್‌ಗೆ ಕನ್ನಡದ ಸ್ಪಷ್ಟ ಉಚ್ಛಾರವನ್ನು ಹೇಳಿಕೊಟ್ಟಿದ್ದಾರೆ. ಈ ಮೂಲಕ ಗೌತಮ್ ಎಲ್ಲೇ ಇರು, ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಸಾಲನ್ನು ಸಾಕಾರ ಮಾಡಿದ್ದಾರೆ. ಈ ಇಬ್ಬರ ನಡುವೆ ಕನ್ನಡ ಹಾಗೂ ಮರಾಠಿ ಭಾಷೆಯ ಪದಗಳ ವಿಚಾರ ವಿನಿಮಯವಾಗಿದ್ದು, ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇಂಡಿಯಾ ಲಂಕಾ ಪ್ರವಾಸ; 90 ಕೋಟಿ ರೂ ಗಳಿಸಲಿದೆ ಲಂಕಾ ಕ್ರಿಕೆಟ್ ಮಂಡಳಿ
ಲಂಕಾ ಸರಣಿಗೆ ಕೃಷ್ಣಪ್ಪ ಗೌತಮ್ ಮಾತ್ರವಲ್ಲದೇ ಮತ್ತಿಬ್ಬರು ಕನ್ನಡಿಗರಾದ ದೇವದತ್ ಪಡಿಕ್ಕಲ್ ಹಾಗೂ ಮನೀಶ್ ಪಾಂಡೆ ಕೂಡಾ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಹಲವು ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ 6 ಯುವ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.