ಕೊಹ್ಲಿ, ರೋಹಿತ್, ರಾಹುಲ್ ಯಶಸ್ಸಿನ ಹಿಂದೆ ಕುಮಟಾ ಯುವಕ; 4 ವರ್ಷ ಸ್ಮಶಾನದಲ್ಲಿ ಮಲಗಿದ್ದವನೇ ಟೀಂ ಇಂಡಿಯಾದ ಅಸಲಿ ಬೆನ್ನೆಲುಬು..!
39 ವರ್ಷದ ರಾಘವೇಂದ್ರ ಟೀಮ್ ಇಂಡಿಯಾದ ಬೆನ್ನೆಲುಬು. ಸೈಡ್ ಆರ್ಮ್ ಸಾಧನದ ಸಹಾಯದಿಂದ ರಘು ಗಂಟೆಗೆ 155ರಿಂದ 160 ಕಿ.ಮೀ ವೇಗದಲ್ಲಿ ಚೆಂಡೆಸೆಯುತ್ತಾರೆ. ಇದರಿಂದ ಭಾರತ ತಂಡದ ಆಟಗಾರರಿಗೆ ಗುಣಮಟ್ಟದ ಅಭ್ಯಾಸ ಸಿಗುತ್ತದೆ. ತಮ್ಮ ಯಶಸ್ಸಿನಲ್ಲಿ ರಾಘವೇಂದ್ರ ಅವರ ಪಾತ್ರ ಏನು ಎಂಬುದನ್ನು ರನ್ ಮಷಿನ್ ವಿರಾಟ್ ಕೊಹ್ಲಿ ಸಾಕಷ್ಟು ಬಾರಿ ಹೇಳಿದ್ದಾರೆ.
- ಸುದರ್ಶನ್ ಗೌಡ, ಸ್ಪೋರ್ಟ್ಸ್ ಬ್ಯೂರೋ, ಸುವರ್ಣ ನ್ಯೂಸ್
ಬೆಂಗಳೂರು(ನ.18): ಭಾರತ ಕ್ರಿಕೆಟ್ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದೆ. ಭಾನುವಾರ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯ. 12 ವರ್ಷಗಳ ನಂತರ ಮತ್ತೆ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಧುನಿಕ ಕ್ರಿಕೆಟ್ ದಿಗ್ಗಜರ ಬಲವಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರ ಶ್ರೀರಕ್ಷೆಯೂ ಇದೆ. ಅಂದ ಹಾಗೆ ಟೀಮ್ ಇಂಡಿಯಾದ ಅಷ್ಟೂ ಬ್ಯಾಟ್ಸ್’ಮನ್’ಗಳ ಯಶೋಶಕ್ತಿ ನಮ್ಮ ಕನ್ನಡಿಗ. ಹೆಸರು ರಾಘವೇಂದ್ರ ಡ್ವಿಗಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು.
ರಾಘವೇಂದ್ರ ಡ್ವಿಗಿ. ಇವರು ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್. ಇವತ್ತು ವಿರಾಟ್ ಕೊಹ್ಲಿ 50 ಏಕದಿನ ಅಂತರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ ಎಂದರೆ ಅದರಲ್ಲಿ ರಘು ಪಾತ್ರ ದೊಡ್ಡದು. ಈ ವಿಶ್ವಕಪ್’ನಲ್ಲೂ ಕೊಹ್ಲಿ 700+ ರನ್ ಗಳಿಸಿ ಮುನ್ನುಗ್ಗುತ್ತಿದ್ದಾರೆ ಅಂದ್ರೆ, ಅದರ ಹಿಂದೆ ರಘು ಅವರ ಶ್ರಮವಿದೆ. ವಿರಾಟ್ ಕೊಹ್ಲಿ ಅಷ್ಟೇ ಅಲ್ಲ, ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್ ರಾಹುಲ್.. ಹೀಗೆ ಟೀಮ್ ಇಂಡಿಯಾದ ಅಷ್ಟೂ ಬ್ಯಾಟ್ಸ್’ಮನ್’ಗಳ ಯಶಸ್ಸಿನ ಹಿಂದಿನ ಅಸಲಿ ಶಕ್ತಿ ರಾಘವೇಂದ್ರ ಡ್ವಿಗಿ.
World Cup 2023 Final: ಬರೀ 10 ಸೆಕೆಂಡ್‌ನ ಜಾಹೀರಾತಿಗೆ ಅಬ್ಬಬ್ಬಾ ಇಷ್ಟೊಂದು ಹಣ!
39 ವರ್ಷದ ರಾಘವೇಂದ್ರ ಟೀಮ್ ಇಂಡಿಯಾದ ಬೆನ್ನೆಲುಬು. ಸೈಡ್ ಆರ್ಮ್ ಸಾಧನದ ಸಹಾಯದಿಂದ ರಘು ಗಂಟೆಗೆ 155ರಿಂದ 160 ಕಿ.ಮೀ ವೇಗದಲ್ಲಿ ಚೆಂಡೆಸೆಯುತ್ತಾರೆ. ಇದರಿಂದ ಭಾರತ ತಂಡದ ಆಟಗಾರರಿಗೆ ಗುಣಮಟ್ಟದ ಅಭ್ಯಾಸ ಸಿಗುತ್ತದೆ. ತಮ್ಮ ಯಶಸ್ಸಿನಲ್ಲಿ ರಾಘವೇಂದ್ರ ಅವರ ಪಾತ್ರ ಏನು ಎಂಬುದನ್ನು ರನ್ ಮಷಿನ್ ವಿರಾಟ್ ಕೊಹ್ಲಿ ಸಾಕಷ್ಟು ಬಾರಿ ಹೇಳಿದ್ದಾರೆ.
ರಾಘವೇಂದ್ರ ಡ್ವಿಗಿ ಅವರ ಟೀಮ್ ಇಂಡಿಯಾ ಪ್ರಯಾಣ ಅತ್ಯಂತ ಸ್ಫೂರ್ತಿದಾಯಕ ಮತ್ತು ಅದ್ಭುತ. ರಘು ತಮ್ಮ ಜೀವನದಲ್ಲಿ ಎದುರಿಸಿಕೊಂಡು ಬಂದ ನೂರಾರು ಸಮಸ್ಯೆಗಳು, ಅವುಗಳನ್ನು ಮೆಟ್ಟಿ ನಿಂತ ರೀತಿ ಮತ್ತು ಶಿಸ್ತು, ಸಮರ್ಪಣೆ, ಸಂಯಮ, ಕಠಿಣ ಪರಿಶ್ರಮದ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಸ್ಥಾನ ಪಡೆದ ಕಥೆ ಯಾವ ಸಿನಿಮಾಗೂ ಕಡಿಮೆಯಿಲ್ಲ.
ಜೀವನ ಈ ಹುಡುಗನ ಮೇಲೆ ಅನೇಕ ಬೌನ್ಸರ್'ಗಳನ್ನು ಎಸೆದಿದೆ. ಆ ಎಲ್ಲಾ ಬೌನ್ಸರ್'ಗಳನ್ನು ಎದುರಿಸಿ ತಾನು ಕಟ್ಟಿದ್ದ ಕನಸಿನ ಗೋಪುರವನ್ನು ಏರಿದ ಛಲದಂಕಮಲ್ಲ ಈ ರಘು. ಅವರ ಕ್ರಿಕೆಟ್ ಪ್ರಯಾಣ ಅಡೆತಡೆಗಳಿಂದಲೇ ತುಂಬಿತ್ತು. ಆದರೆ ದೃಢ ನಿಶ್ಚಯ, ನೋವನ್ನು ಯಾರಲ್ಲೂ ಹಂಚಿಕೊಳ್ಳದೆ ತಾವೊಬ್ಬರೇ ಎದುರಿಸಿ ನಿಲ್ಲುವ ಮನೋಭಾವ ಮತ್ತು ಗೆಲ್ಲುವ ಕಲೆಯಿಂದ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಿದ ರೀತಿ ಎಂಥವರಿಗಾದರೂ ಅದ್ಭುತ ಅನ್ನಿಸದೆ ಇರದು. ಅವರ ಈ ಪ್ರಯಾಸಕರ ದಾರಿಯಲ್ಲಿ ಅನೇಕ ನಿಸ್ವಾರ್ಥ ಜನರು ಕಾಣಿಸಿಕೊಂಡಿದ್ದಾರೆ ಮತ್ತು ಅವರೆಲ್ಲಾ ರಘು ಈ ಹಂತಕ್ಕೆ ತಲುಪಲು ನೆರವಾಗಿದ್ದಾರೆ, ಮಾರ್ಗದರ್ಶನ ನೀಡಿದ್ದಾರೆ. ರಘು ಈಗ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್. ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಹೇಳುವ ಪ್ರಕಾರ ರಘು ವಿಶ್ವದಲ್ಲೇ ನಂ.1 ಥ್ರೋಡೌನ್ ತಜ್ಞ. ರಘು ಇಲ್ಲದೆ ಭಾರತ ತಂಡವಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನೈಜ ಕಥೆ ಮತ್ತು ಕಷ್ಟಪಟ್ಟು ಸಂಪಾದಿಸಿದ ಯಶಸ್ಸು ಸಿನಿಮಾವೊಂದಕ್ಕೆ ಸ್ಫೂರ್ತಿಯಾಗಬಲ್ಲುದು.
ICC World Cup 2023: ಜಿದ್ದಿನ ಕದನಕ್ಕೆ ಭಾರತ-ಆಸೀಸ್ ಸಜ್ಜು
ರಘು ಭಾರತೀಯ ಕ್ರಿಕೆಟ್ ತಂಡದ ‘ತರಬೇತಿ ಸಹಾಯಕ’ ಮತ್ತು ಥ್ರೋಡೌನ್ ತಜ್ಞ. ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಪ್ರತಿಯೊಬ್ಬರೂ ರಘು ಅವರ ಬಗ್ಗೆ ತುಂಬು ಹೃದಯದಿಂದ ಮಾತನಾಡುತ್ತಾರೆ, ಹೆಮ್ಮೆ ಪಡುತ್ತಾರೆ. ಅವರು ‘ಮೆನ್ ಇನ್ ಬ್ಲೂ’ ಸಹಾಯಕ ಸಿಬ್ಬಂದಿಯ ಪ್ರಮುಖ ಸದಸ್ಯನಷ್ಟೇ ಅಲ್ಲ, ಭಾರತ ತಂಡದ ಅವಿಭಾಜ್ಯ ಅಂಗವೂ ಹೌದು. ಇದು ದಿನ ಬೆಳಗಾಗುವಷ್ಟರಲ್ಲಿ ಸಿಕ್ಕ ಯಶಸ್ಸಲ್ಲ, ಇದಕ್ಕಾಗಿ ರಘು ಬರೀ ಬೆವರನ್ನಲ್ಲ, ರಕ್ತವನ್ನೇ ಬಸಿದಿದ್ದಾರೆ, ಹಸಿದ ಹೊಟ್ಟೆಯಲ್ಲಿ ದಿನಗಟ್ಟಲೆ ಮಲಗಿದ್ದಾರೆ, ಜೀವನವೇ ಸಾಕು ಎನ್ನುವಂತಹ ಕಷ್ಟಗಳನ್ನು ಎದುರಿಸಿದ್ದಾರೆ.
ನಿಮಗೆ ಜೀವನದಲ್ಲಿ ಸ್ಫೂರ್ತಿ ಬೇಕಾದರೆ, 35 ವರ್ಷದ ರಘು ಅವರ ಜೀವನಕ್ಕಿಂತ ಬೇರೆ ಉದಾಹರಣೆಯ ಅಗತ್ಯವಿಲ್ಲ. ಕುಮಟಾ ತಾಲ್ಲೂಕಿನ ವಿವೇಕ್ ನಗರ ಮೂಲದ ಈ ಯುವಕ ತನ್ನ ಧ್ಯೇಯವನ್ನು ಸಾಧಿಸುವವರೆಗೆ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸಿದ್ಧಾರೆ. ತಿನ್ನಲು ಅನ್ನವಿಲ್ಲದೆ ಖಾಲಿ ಹೊಟ್ಟೆಯಲ್ಲಿದ್ದ ದಿನಗಳನ್ನೂ ಕಂಡಿದ್ದಾರೆ, ಸ್ಮಶಾನದಲ್ಲಿ ಮಲಗಿದ್ದಾರೆ. ಕುಮಟಾದಿಂದ ಮುಂಬಯಿ-ಕಾರವಾರ-ಹುಬ್ಬಳ್ಳಿ-ಬೆಂಗಳೂರು. ಬೆಂಗಳೂರಿನಿಂದ ಟೀಮ್ ಇಂಡಿಯಾಗೆ ರಘು ತಲುಪಿದ್ದೇ ಒಂದು ರೋಚಕ ಕಥೆ.
ಲಕ್ಷಾಂತರ ಭಾರತೀಯ ಯುವಕರಂತೆ ರಘು ಕೂಡ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡುವ ಕನಸು ಕಂಡಿದ್ದರು. ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿದ್ದ ರಘು, 10ನೇ ತರಗತಿ ಪರೀಕ್ಷೆ ಮುಗಿಸಿದ ನಂತರ ಕುಮಟಾದಿಂದ ಸುಮಾರು 175 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿಗೆ ಬರುತ್ತಾರೆ. 1999-2000ರಲ್ಲಿ ರಘು ಹುಬ್ಬಳ್ಳಿಗೆ ಬಂದಾಗ ಅವರ ಬಳಿ ಇದ್ದದ್ದು ಕೇವಲ 21 ರುಪಾಯಿ. ಹುಬ್ಬಳ್ಳಿಯಲ್ಲಿ ವಾಸಿಸಲು ಸ್ಥಳ ಕೂಡ ಇರಲಿಲ್ಲ. ಸುಮಾರು ಒಂದು ವಾರ ರಘು ಹುಬ್ಬಳ್ಳಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಲಗಿದ್ದರು. ಆದರೆ ಪೊಲೀಸರು ಅಲ್ಲಿಂದ ಓಡಿಸಿದರು. ಮುಂದೆ ಅವರು ಎರಡು ವಾರಗಳ ಕಾಲ ಹನುಮಾನ್ ದೇವಸ್ಥಾನದಲ್ಲಿ ಮಲಗಿದರು. ಆದರೆ ಹೆಚ್ಚು ದಿನ ದೇವಸ್ಥಾನದಲ್ಲಿ ಉಳಿಯಲು ಅವಕಾಶ ಸಿಗಲಿಲ್ಲ, ಹೀಗಾಗಿ ಸ್ಮಶಾನ ಬಿಟ್ಟರೆ ಬೇರೆ ಯಾವುದೇ ಆಯ್ಕೆ ರಘು ಮುಂದೆ ಇರಲಿಲ್ಲ.
ನಂತರ ಅವರು ಬಿವಿಬಿ ಇಂಜಿನಿಯರಿಂಗ್ ಕಾಲೇಜು ಬಳಿ ಇರುವ ಸ್ಮಶಾನವೊಂದರಲ್ಲಿ ಆಶ್ರಯ ಪಡೆದರು. ಸುಮಾರು 4 ವರ್ಷಗಳ ಕಾಲ ಸ್ಮಶಾನವೇ ರಘು ಅವರಿಗೆ ಮನೆಯಾಯಿತು. ಕ್ರಿಕೆಟ್ ಮ್ಯಾಟೇ ಹಾಸಿಗೆ, ಅದೇ ಹೊದಿಕೆ.
ಟೀಂ ಇಂಡಿಯಾದ ಪ್ಯಾಕೇಜ್ ಸ್ಟಾರ್ ರಾಹುಲ್: DRS ತೆಗೆದುಕೊಳ್ಳೋದ್ರಲ್ಲೂ ಕನ್ನಡಿಗ ಪಂಟರ್..!
ರಾಘವೇಂದ್ರ ಅವರ ಕನಸಿಗೆ ದೊಡ್ಡ ತಿರುವು ಸಿಕ್ಕಿದ್ದು ಅವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದಾಗ. ರಘು ಬೆಂಗಳೂರಿನ ಇರ್ಫಾನ್ ಅವರ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ಗೆ ಸೇರಿದರು. ಕೆಐಒಸಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಹಾಯ ಮಾಡುತ್ತಿದ್ದ ರಘು, ನಂತರ ಕರ್ನಾಟಕ ತಂಡಕ್ಕೆ ಟ್ರೈನಿಂಗ್ ಆಸಿಸ್ಟೆಂಟ್ ಆಗಿ ಸೇರಿಕೊಳ್ತಾರೆ. ಇಂತಹ ಒಂದು ಅವಕಾಶ ಸಿಗುವಲ್ಲಿ ಕರ್ನಾಟಕದ ಮಾಜಿ ಕ್ರಿಕೆಟಿಗ ತಿಲಕ್ ನಾಯ್ಡು ಮತ್ತು ಮೈಸೂರು ಎಕ್ಸ್'ಪ್ರೆಸ್ ಜಾವಗಲ್ ಶ್ರೀನಾಥ್ ಪಾತ್ರ ತುಂಬಾ ದೊಡ್ಡದು.
ಶ್ರೀನಾಥ್ ಗಮನ ಸೆಳೆದದ್ದು ಹೇಗೆ ಗೊತ್ತಾ..?
ರಘು ಒಮ್ಮೆ KSCA ‘ಬಿ’ ಮೈದಾನದಲ್ಲಿ (NCA) ತಿಲಕ್ ನಾಯ್ಡು ಅವರಿಗೆ ಥ್ರೋಡೌನ್ಗಳನ್ನು ಎಸೆಯುತ್ತಿದ್ದರು. ಆ ಸಮಯದಲ್ಲಿ NCA ಜಿಮ್ನಲ್ಲಿ ಥ್ರೆಡ್ಮಿಲ್ ಬಳಸುತ್ತಿದ್ದ ಜಾವಗಲ್ ಶ್ರೀನಾಥ್ ಅಲ್ಲಿಂದಲೇ ಅವರು ರಘುವನ್ನು ಗಮನಿಸಿದರು. ತಿಲಕ್ ಜೊತೆ ರಘು ತಮ್ಮ ಕ್ರಿಕೆಟ್ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದುದನ್ನು ನೋಡಿದ ಶ್ರೀನಾಥ್ ಅವರಿಗೆ ರಘು ಬಗ್ಗೆ ಕುತೂಹಲ ಉಂಟಾಯಿತು. ಯಾರು ಈ ಚಿಕ್ಕ ಹುಡುಗ ಎಂದು ತಿಲಕ್ ಅವರನ್ನು ಶ್ರೀನಾಥ್ ಕೇಳಿದರು. ಆಗ ರಘು ಬಗ್ಗೆ ಹೇಳಿದ ತಿಲಕ್ ನಾಯ್ಡು, ಶ್ರೀನಾಥ್ ಅವರ ಸಹಾಯವನ್ನು ಕೋರಿದರು.
ರಘು ಭಾರತ ತಂಡಕ್ಕೆ ಆಯ್ಕೆಯಾಗಿ ಕ್ರಿಕೆಟ್ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವಲ್ಲಿ ಜಾವಗಲ್ ಶ್ರೀನಾಥ್ ಪಾತ್ರ ನಿರ್ಣಾಯಕ. ಆ ದಿನಗಳನ್ನು ಏಷ್ಯನೆಟ್ ಸುವರ್ಣ ನ್ಯೂಸ್.ಕಾಂ ಜೊತೆ ಹಂಚಿಕೊಂಡಿದ್ದ ಶ್ರೀನಾಥ್, “ರಘು KSCAಗೆ (ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಬರುತ್ತಿದ್ದರು. ತರಬೇತಿ ಅವಧಿಯಲ್ಲಿ ಆಟಗಾರರಿಗೆ ಚೆಂಡುಗಳನ್ನು ಎಸೆಯಲು ಮತ್ತು ಯಾವುದೇ ಕೆಲಸವನ್ನು ಮಾಡಲು ಸಿದ್ಧರಾಗಿದ್ದರು. ರಘು ಅದ್ಭುತ ದೃಢತೆಯನ್ನು ಹೊಂದಿದ್ದ ಪ್ರಾಮಾಣಿಕ ಹುಡುಗ. ಜೀವನದಲ್ಲಿ ನೀವು ಆಟದ ಬಗ್ಗೆ ಸರಿಯಾದ ರೀತಿಯ ಭಕ್ತಿಯನ್ನು ತೋರಿಸಿದರೆ, ಅದು ನಿಮಗೆ ಸರಿಯಾದ ದಿಕ್ಕನ್ನೇ ತೋರಿಸುತ್ತದೆ. ರಘು ಪ್ರಕರಣದಲ್ಲಿ ನಾವು ನೋಡಿದ್ದು ಅದನ್ನೇ. ಅವನು ಒಳ್ಳೆಯ ಹುಡುಗ. ಒಳ್ಳೆಯ ಜನರಿಗೆ ಯಾವಾಗಲೂ ಜೀವನದಲ್ಲಿ ಒಳ್ಳೆಯದ್ದೇ ಸಿಗುತ್ತದೆ. ಅದೇ ರಘು ಅವರ ವಿಷಯದಲ್ಲಿ ನಡೆದಿದೆ” ಎಂದಿದ್ದರು ಶ್ರೀನಾಥ್.
KSCAನಲ್ಲಿ, ರಘು ಕರ್ನಾಟಕ ರಣಜಿ ತಂಡಕ್ಕೆ ಸಹಾಯ ಮಾಡುತ್ತಿದ್ದರು. ಕರ್ನಾಟಕ ತಂಡದೊಂದಿಗೆ ಇಲ್ಲದಿದ್ದಾಗ, ಚಿನ್ನಸ್ವಾಮಿ ಕ್ರೀಡಾಂಗಣ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಹೋಗುತ್ತಿದ್ದರು. ಶ್ರೀನಾಥ್ ಅವರ ಕಾರಣದಿಂದಾಗಿ KSCAಯಿಂದ ರಘು ಅಧಿಕೃತವಾಗಿ NCAಯ ಭಾಗವಾಗುವಂತಾಯಿತು. ಆರು ತಿಂಗಳು KSCA, ಉಳಿದ ಆರು ತಿಂಗಳು NCAನಲ್ಲಿ ಕೆಲಸ. ನೆನಪಿರಲಿ, ಈ ಕೆಲಸಗಳಿಗೆ ರಘು ಯಾವುದೇ ಸಂಭಾವನೆ ಪಡೆಯುತ್ತಿರಲಿಲ್ಲ. ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದಾಗ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬರುತ್ತಿದ್ದ ಟೀಮ್ ಇಂಡಿಯಾ ಆಟಗಾರರು ರಘು ಅವರ ಪ್ರತಿಭೆಯನ್ನು ಗುರುತಿಸಲು ಶುರು ಮಾಡಿದರು.
ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಬಳಿ ಕ್ರಿಕೆಟ್ ಕಲಿತ ರಘು, ನಂತರದ ದಿನಗಳಲ್ಲಿ ಸಚಿನ್ ತೆಂಡುಲ್ಕರ್ ಅವರು ಅತ್ಯಂತ ಇಷ್ಟ ಪಡುವ ವ್ಯಕ್ತಿಯಾಗಿ ಬೆಳೆದು ನಿಂತದ್ದು ನಿಜಕ್ಕೂ ದೊಡ್ಡ ಸಾಧನೆ.
ರಘು 2011ರಲ್ಲಿ ಮೊದಲ ಬಾರಿ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಾಗಿ ರಾಷ್ಟ್ರೀಯ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದರು. ಇಲ್ಲಿ ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ ಒಂದೇ ಪ್ರವಾಸದ ನಂತರ ರಘು ಮತ್ತೆ ಎನ್'ಸಿಎಗೆ ಮರಳಿದರು.
ಭಾರತ ತಂಡ 2011ರಲ್ಲಿ 28 ವರ್ಷಗಳ ನಂತರ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಆ ವಿಶ್ವಕಪ್ ಟೂರ್ನಿಗೆ ಎಂ.ಎಸ್ ಧೋನಿ ನಾಯಕತ್ವದ ತಂಡ NCAನಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡಿತ್ತು. ಆಗ ರಘು ಧೋನಿ ನೇತೃತ್ವದ ತಂಡದ ಅಭ್ಯಾಸಕ್ಕೆ ನೆರವಾಗಿದ್ದರು. ಮತ್ತೆ ಅವರು 2014ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ‘ತರಬೇತಿ ಸಹಾಯಕ’ರಾಗಿ ಭಾರತೀಯ ತಂಡಕ್ಕೆ ಮರಳಿದರು. ಅಂದಿನಿಂದ ರಘು ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.
ಮೂರು ಗಂಟೆಗಳ ತರಬೇತಿ ಅವಧಿಯಲ್ಲಿ ರಘು ಸುಮಾರು 1,000 ಎಸೆತಗಳನ್ನು ಎಸೆಯುತ್ತಾರೆ. ಅವರ ಎಸೆತಗಳು ಸತತವಾಗಿ 150+ ಕಿಲೋ ಮೀಟರ್ ವೇಗವನ್ನು ಮುಟ್ಟುತ್ತವೆ. ರಘು ಅವರು ಒದಗಿಸುವ ವಿಶ್ವಶ್ರೇಷ್ಠ ಗುಣಮಟ್ಟದ ಅಭ್ಯಾಸದ ಪರಿಣಾಮ, ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಜಗತ್ತಿನ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುವಂತಾಗಿದೆ. ಇದನ್ನು ಕೊಹ್ಲಿ ಸಹಿತ ಟೀಂ ಇಂಡಿಯಾ ಆಟಗಾರರೇ ಸಾಕಷ್ಟು ಬಾರಿ ಹೇಳಿದ್ದಾರೆ.
ಎಲ್ಲೋ ಇದ್ದ ರಘು ಅವರನ್ನು ಮತ್ತೆಲ್ಲಿಗೋ ಮುಟ್ಟಿಸಿ, ಇಂದು ಜಗತ್ತಿನ ಶ್ರೇಷ್ಠ ಕ್ರಿಕೆಟಿಗರೇ ಮೆಚ್ಚುವಂತಾಗಿದ್ದಕ್ಕೆ ಕಾರಣ ಪರಿಶ್ರಮ ಮತ್ತು ಪ್ರಾಮಾಣಿಕತೆ.