ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಬಗ್ಗುಬಡಿದ ಹರ್ಮನ್‌ಪ್ರೀತ್ ಕೌರ್ ಪಡೆಶ್ರೀಲಂಕಾ ವಿರುದ್ದ 8 ವಿಕೆಟ್‌ಗಳ ಸುಲಭ ಜಯ ದಾಖಲಿಸಿದ ಭಾರತದ ವನಿತೆಯರುಅಜೇಯ 51 ರನ್ ಬಾರಿಸಿ ಅಬ್ಬರಿಸಿದ ಸ್ಮೃತಿ ಮಂಧನಾ

ಸೈಲೆಟ್‌(ಅ.15): ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು, ನೆರೆಯ ಶ್ರೀಲಂಕಾ ತಂಡವನ್ನು 8 ವಿಕೆಟ್‌ಗಳಿಂದ ಅನಾಯಾಸವಾಗಿ ಮಣಿಸಿ ಏಳನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾ ನೀಡಿದ್ದ 66 ರನ್‌ಗಳ ಗುರಿ ಹರ್ಮನ್‌ಪ್ರೀತ್ ಪಡೆಗೆ ಸವಾಲು ಎನಿಸಲೇ ಇಲ್ಲ. ಭಾರತ ತಂಡವು ಕೇವಲ 8.3 ಓವರ್‌ಗಳಲ್ಲಿ ಗೆಲುವಿನ ಕೇಕೆ ಹಾಕುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಸೈಲೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಷ್ಯಾಕಪ್ ಫೈನಲ್ ಟೂರ್ನಿಯಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಮಹಿಳಾ ತಂಡವು ಭಾರತಕ್ಕೆ ಗೆಲ್ಲಲು 66 ರನ್‌ಗಳ ಸಾಧಾರಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ ನಿರೀಕ್ಷೆಯಂತೆಯೇ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಜೋಡಿ 3.4 ಓವರ್‌ಗಳಲ್ಲಿ 32 ರನ್‌ಗಳ ಜತೆಯಾಟವಾಡಿತು. ಶಫಾಲಿ ವರ್ಮಾ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಜೆಮಿಯಾ ರೋಡ್ರಿಗಸ್‌ 2 ರನ್ ಬಾರಿಸಿ ಪೆವಿಲಿಯನ್ ಸೇರಿದರು.

Scroll to load tweet…

Women's Asia Cup: ಏಷ್ಯಾಕಪ್ ಗೆಲ್ಲಲು ಹರ್ಮನ್‌ಪ್ರೀತ್ ಕೌರ್ ಪಡೆಗೆ ಅಲ್ಪ ಗುರಿ..!

ಸ್ಮೃತಿ ಮಂಧನಾ ಆಕರ್ಷಕ ಅರ್ಧಶತಕ: ಒಂದು ಕಡೆ ದಿಢೀರ್ ಎನ್ನುವಂತೆ ಎರಡು ವಿಕೆಟ್ ಕಳೆದುಕೊಂಡರು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಉಪನಾಯಕಿ ಸ್ಮೃತಿ ಮಂಧನಾ, ಅಜೇಯ ಅರ್ಧಶತಕ ಸಿಡಿಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭದಿಂದಲೇ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಸ್ಮೃತಿ ಮಂಧನಾ, ಕೇವಲ 25 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 51 ರನ್‌ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಮತ್ತೊಂದು ತುದಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ 11 ರನ್‌ ಬಾರಿಸಿ ಉತ್ತಮ ಸಾಥ್ ನೀಡಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕಿ ಚಮಾರಿ ಅಟಪಟ್ಟು ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಶ್ರೀಲಂಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕಿ ಚಮಾರಿ ಅಟಪಟ್ಟು(6) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅನುಷ್ಕಾ ಸಂಜೀವಿನಿ ಇಬ್ಬರೂ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು. ಹರ್ಷಿತಾ ಮಾದವಿ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಮಾಲ್ಷಾ ಸೆಹಾನಿ ಹಾಗೂ ಸುಗಂದಿಕಾ ಕುಮಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಪರಿಣಾಮ ಶ್ರೀಲಂಕಾ ತಂಡವು 32 ರನ್ ಗಳಿಸುವಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡು ಹೀನಾಯ ಪ್ರದರ್ಶನ ತೋರಿತು. 

ಇನ್ನು ಕೊನೆಯಲ್ಲಿ ಒಶಾಡಿ ರಣಸಿಂಘೆ(13) ಹಾಗೂ ಇನೊಕಾ ರಣವೀರಾ(18*) ಕೆಲಕಾಲ ಭಾರತೀಯ ಬೌಲರ್‌ಗಳಿಗೆ ಪ್ರತಿರೋಧ ತೋರುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಈ ಇಬ್ಬರು ಬ್ಯಾಟರ್‌ಗಳನ್ನು ಹೊರತುಪಡಿಸಿ ಲಂಕಾದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. 

ಭಾರತ ಪರ ಮಿಂಚಿನ ಪ್ರದರ್ಶನ ತೋರಿದ ರೇಣುಕಾ ಸಿಂಗ್‌ 3 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಸಹಿತ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರೆ, ಕನ್ನಡತಿ ರಾಜೇಶ್ವರಿ ಹಾಗೂ ಸ್ನೆಹ್ ರಾಣಾ ತಲಾ ಎರಡೆರಡು ವಿಕೆಟ್ ಪಡೆದರು.