Asianet Suvarna News Asianet Suvarna News

ಉಮ್ರಾನ್‌ ಮಲಿಕ್‌ರಷ್ಟು ವೇಗವಾಗಿ ಬೌಲಿಂಗ್‌ ಮಾಡಲು ನನಗೆ ಸಾಧ್ಯವಿಲ್ಲವೆಂದ ಹರ್ಷಲ್‌ ಪಟೇಲ್‌..!

* ಭಾರತ-ದಕ್ಷಿಣ ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ತಾವು ತಮ್ಮ ಬೌಲಿಂಗ್ ಕೌಶಲ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆಂದ ಹರ್ಷಲ್ ಪಟೇಲ್
* ತಾವು ಉಮ್ರಾನ್ ಮಲಿಕ್ ಅವರಷ್ಟು ವೇಗವಾಗಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದ ಡೆತ್ ಓವರ್ ಸ್ಪೆಷಲಿಸ್ಟ್

Since I cant bowl as fast as Umran Malik I have to keep developing my skills Says Harshal Patel kvn
Author
Bengaluru, First Published Jun 17, 2022, 2:02 PM IST

ಬೆಂಗಳೂರು(ಜೂ.17): ಟೀಂ ಇಂಡಿಯಾ ಅನುಭವಿ ವೇಗಿ ಹರ್ಷಲ್‌ ಪಟೇಲ್‌ (Harshal Patel) ಸದ್ಯ ದಕ್ಷಿಣ ಆಫ್ರಿಕಾ ವಿರುದ್ದ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹರಿಣಗಳೆದುರಿನ ಮೂರನೇ ಟಿ20 ಪಂದ್ಯದಲ್ಲಿ ಹರ್ಷಲ್ ಪಟೇಲ್‌ ಕೇವಲ 3.1 ಓವರ್‌ಗಳಲ್ಲಿ 25 ರನ್‌ ನೀಡಿ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಹರ್ಷಲ್ ಪಟೇಲ್ ಮಿಂಚಿನ ದಾಳಿಯ ನೆರವಿನಿಂದ ಟೀಂ ಇಂಡಿಯಾ 48 ರನ್‌ಗಳ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. 

2021ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಬೆನ್ನಲ್ಲೇ ಹರ್ಷಲ್ ಪಟೇಲ್‌, ಟೀಂ ಇಂಡಿಯಾಗೆ (Team India) ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್‌, ಭಾರತ ತಂಡದ ಪರ ಪಾದಾರ್ಪಣೆ ಮಾಡಿದ್ದರು. ಇದಾಗಿ 6  ತಿಂಗಳು ಕಳೆದಿದ್ದು, 11 ಟಿ20 ಪಂದ್ಯಗಳಿಂದ 19.52ರ ಸರಾಸರಿಯಲ್ಲಿ 17 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಬಲಗೈ ವೇಗಿ ಹರ್ಷಲ್‌ ಪಟೇಲ್‌, ತಮ್ಮ ಬೌಲಿಂಗ್‌ ಕೌಶಲ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಉಮ್ರಾನ್‌ ಮಲಿಕ್ (Umran Malik) ಅವರಷ್ಟು ವೇಗವಾಗಿ ಬೌಲಿಂಗ್ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು 31 ವರ್ಷದ ಹರ್ಷಲ್‌ ಪಟೇಲ್ ಹೇಳಿದ್ದಾರೆ.

ನಿಜ ಹೇಳಬೇಕೆಂದರೆ, ನಾನು ಯಾವ ರೀತಿ ಬೌಲಿಂಗ್ ಮಾಡುತ್ತೇನೆ ಎನ್ನುವುದನ್ನು ಜನರು ಕಳೆದೆರಡು ವರ್ಷಗಳಿಂದ ಐಪಿಎಲ್‌ನಲ್ಲಿ ನೋಡುತ್ತಾ ಬಂದಿದ್ದಾರೆ. ಯಾವುದೇ ಬೌಲರ್‌ ದೀರ್ಘಕಾಲದವರೆಗೆ ಬೌಲಿಂಗ್ ಮಾಡುತ್ತಾ ಬಂದರೆ ಎದುರಾಳಿಗಳು ಆ ಬೌಲರ್‌ನ ಶಕ್ತಿ-ಸಾಮರ್ಥ್ಯ ಏನು ಎನ್ನುವುದನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಬೌಲರ್‌ ಆಗಿ ನನ್ನ ಪಾತ್ರವೇನೆಂದರೇ, ನಾನು ಅವರಿಗಿಂತ ಒಂದು ಹೆಜ್ಜೆ ಮುಂದಿರಬೇಕು. ನಿಮ್ಮಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎನ್ನುವುದರ ಕುರಿತಂತೆ 15 ಪ್ಲಾನ್‌ಗಳಿರಬಹುದು. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸವಿಲ್ಲದೇ ನಿಮ್ಮ ಪ್ಲಾನ್ ಕಾರ್ಯಗೊಳಿಸದೇ ಹೋದರೇ ಯಾವುದೂ ಅಂದುಕೊಂಡಂತೆ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಾನು ವೇಗದ ಬೌಲಿಂಗ್ ಮಾಡುವ ಕುರಿತಂತೆ ಹೆಚ್ಚು ಆಲೋಚಿಸಲು ಹೋಗಿಲ್ಲ. ನಾನು ಉಮ್ರಾನ್ ಮಲಿಕ್‌ ಅವರಷ್ಟು ವೇಗವಾಗಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನನ್ನ ಕೌಶಲ್ಯಗಳನ್ನು ಇನ್ನಷ್ಟು ಸುಧಾರಿಸಿಕೊಳ್ಳುವತ್ತ ಗಮನ ಕೊಡುತ್ತೇವೆ. ನಾನು ಆರಂಭದಿಂದಲೂ ವೇಗವಾಗಿ ಬೌಲಿಂಗ್ ಮಾಡುತ್ತಿರಲಿಲ್ಲ. ನಾನು ಹತ್ತಿರಹತ್ತಿರ 140 ಕಿಲೋಮೀಟರ್‌ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೆ. ನನ್ನ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ನನ್ನ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ ಎಂದು ಹರ್ಷಲ್ ಪಟೇಲ್‌ ಹೇಳಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಸತತ ಎರಡು ಸೋಲುಗಳ ಬಳಿಕ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿತ್ತು. ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಹರ್ಷಲ್ ಪಟೇಲ್, ಇದೀಗ ಜೂನ್ 17ರಂದು ರಾಜ್‌ಕೋಟ್ ಮೈದಾನದಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಮತ್ತೆ ಮಿಂಚಿನ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ ಟೀಂ ಇಂಡಿಯಾ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

Follow Us:
Download App:
  • android
  • ios