ಧಾರಾವಿ ಸ್ಲಂ ಬೀದಿಯಿಂದ WPLವರೆಗೆ, ಸಿಮ್ರನ್ ಜರ್ನಿಯೇ ಒಂದು ಸ್ಪೂರ್ತಿಯ ಕಥೆ..!
ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಧಾರಾವಿ ನಿವಾಸಿ ಸಿಮ್ರನ್ ಶೇಕ್ ಭಾಗಿ
10 ಲಕ್ಷ ರುಪಾಯಿ ಮೂಲಬೆಲೆಗೆ ಯುಪಿ ವಾರಿಯರ್ಸ್ ತೆಕ್ಕೆಗೆ ಜಾರಿರುವ ಸಿಮ್ರನ್
ಟೀಂ ಇಂಡಿಯಾ ಪ್ರತಿನಿಧಿಸುವ ಕನಸು ಕಾಣುತ್ತಿರುವ ಸಿಮ್ರನ್
ಮುಂಬೈ(ಮಾ.06): ಧಾರಾವಿ, ಕೇವಲ ಭಾರತ ಮಾತ್ರವಲ್ಲ ಜಗತ್ತಿನ ಅತಿದೊಡ್ಡ ಸ್ಲಂ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮನಸ್ಸು ಮಾಡಿದರೆ, ದೃಢ ಸಂಕಲ್ಪ ಹಾಗೂ ಕಠಿಣ ಪರಿಶ್ರಮವಿದ್ದರೇ ಕೊಳೆಗೇರಿಯಿಂದಲೂ ಕೆಸರಿನಿಂದ ಅರಳಿದಂತ ಕಮಲದಂತೆ ಕಂಗೊಳಿಸಬಹುದು ಎನ್ನುವುದಕ್ಕೆ 21 ವರ್ಷದ ಸಿಮ್ರನ್ ಬಾನು ಶೇಕ್ ಎನ್ನುವ ಪ್ರತಿಭಾನ್ವಿತ ಆಟಗಾರ್ತಿಯೇ ಸಾಕ್ಷಿ. ಸಿಮ್ರನ್ ಬಾನು ಇದೀಗ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಹೌದು, ಸಿಮ್ರನ್ ಶೇಕ್ ಅವರನ್ನು ಯುಪಿ ವಾರಿಯರ್ಸ್ ಫ್ರಾಂಚೈಸಿಯು, WPL ಆಟಗಾರ್ತಿಯರ ಹರಾಜಿನಲ್ಲಿ ಮೂಲಬೆಲೆ 10 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಇನ್ನು ಧಾರಾವಿ ಬಗ್ಗೆ ಹೇಳಬೇಕೆಂದರೆ, 550 ಎಕರೆ ವಿಸ್ತಿರ್ಣ ಹೊಂದಿರುವ ಈ ಕೊಳೆಗೇರಿಯಲ್ಲಿ ಸುಮಾರು 10 ಲಕ್ಷ ಮಂದಿ ವಾಸ ಮಾಡುತ್ತಿದ್ದಾರೆ. ಜಗತ್ತಿನ ಅತಿಹೆಚ್ಚು ಜನಸಂದಣಿಯನ್ನು ಹೊಂದಿರುವ ಪ್ರದೇಶ ಇದಾಗಿದ್ದು, ಇಲ್ಲಿ 68 ಪ್ರತಿಶತ ಮಂದಿ ಸಾಕ್ಷರರಿದ್ದಾರೆ. ಇದು ಇತರೇ ಸ್ಲಂಗಳಿಗೆ ಹೋಲಿಸಿದರೆ, ಧಾರಾವಿ ಸ್ಲಂನಲ್ಲಿ ಅತಿಹೆಚ್ಚು ಸಾಕ್ಷರರಿದ್ದಾರೆ ಎನ್ನುವುದು ವಿಶೇಷ. ಇಲ್ಲಿ ಅತಿಹೆಚ್ಚು ಚರ್ಮದ ಉತ್ಪನ್ನಗಳ ಪುನರ್ಬಳಕೆ ಉದ್ಯಮಗಳಿದ್ದು, ಅತಿದೊಡ್ಡ ರಫ್ತು ಕೇಂದ್ರವೂ ಹೌದು. ಈ ಧಾರಾವಿ ಪ್ರದೇಶವನ್ನು ಅಭಿವೃದ್ದಿ ಪಡಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ ಸಹಾ, ಇಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ದಿ ಹಾಗೂ ನೈರ್ಮಲ್ಯದ ವಿಚಾರದಲ್ಲಿ ಇನ್ನೂ ಸಾಕಷ್ಟು ಹಿಂದುಳಿದಿದೆ.
ಇಂತಹ ಸ್ಲಂನಲ್ಲಿ ಹುಟ್ಟಿ ಬೆಳೆದ ಹುಡುಗಿ ಸಿಮ್ರನ್ ಬಾನು ಶೇಕ್, ಏನಾದರೂ ಸಾಧನೆ ಮಾಡಬೇಕು ಎಂದು ಕನಸುಹೊತ್ತು ಹೊರಡುವವರ ಪಾಲಿಗೆ ಅಕ್ಷರಶಃ ಸ್ಪೂರ್ತಿಯ ಚಿಲುಮೆಯಾಗಬಲ್ಲರು. ಹೌದು, ಸಿಮ್ರನ್, ಬಾಲ್ಯದಿಂದಲೇ ಕ್ರಿಕೆಟ್ ಆಡಲು ಆರಂಭಿಸಿದವರು. ಹಾಗಂತ ವೃತ್ತಿಪರ ಕ್ಲಬ್‌ನಲ್ಲಿ ಅಲ್ಲ, ಬದಲಾಗಿ ಆ ಏರಿಯಾದ ಹುಡುಗರ ಜತೆ ಕ್ರಿಕೆಟ್ ಆಡುತ್ತಿದ್ದರು. ಆದರೆ 15 ವರ್ಷವಾದ ಬಳಿಕ ಕ್ರಿಕೆಟ್ ಬಗ್ಗೆ ಸ್ವಲ್ಪ ಗಂಭೀರವಾಗಿ ಆಲೋಚಿಸತೊಡಗಿದರು. ಆದರೂ ತನ್ನ ಕನಸು ನನಸು ಮಾಡಿಕೊಳ್ಳುವುದು ಹೇಗೆ ಎನ್ನುವ ಯಾವುದೇ ಐಡಿಯಾ ಇರಲಿಲ್ಲ.
ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಸಿಮ್ರನ್ ಬಾನು ಶೇಕ್, ಆ ಬಳಿಕ ಕ್ರಾಸ್‌ವೇ ಮೂಲದ ಯುನೈಟೆಡ್ ಕ್ಲಬ್ ಸೇರಿದರು. ಅಲ್ಲಿ ರೋಮ್ದಿಯೋ ಸರ್ ಬಳಿ ಕ್ರಿಕೆಟ್‌ನ ಪಟ್ಟುಗಳನ್ನು ಕಲಿಯಲಾರಂಭಿಸಿದರು. ಇನ್ನು ಸಿಮ್ರನ್‌ಗೆ ಸಂಜಯ್ ಸತಂ, ಕ್ರಿಕೆಟ್ ಕಿಟ್ ಸೇರಿದಂತೆ ಹಲವು ಸಹಾಯವನ್ನು ಮಾಡುವ ಮೂಲಕ ಆಕೆಗೆ ನೆರವಾಗಿದ್ದರು. 'ನಾನು ಸಂಜಯ್ ಸತಂ ಅವರು ಮಾಡಿದ ಸಹಾಯವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಿಮ್ರನ್ ಹೇಳಿದ್ದರು.
WPL 2023: ರನ್ ಹೊಳೆ ಹರಿಸಲು ಸಣ್ಣ ಬೌಂಡರಿ..! BCCI ಮಾಸ್ಟರ್ ಪ್ಲಾನ್
ಗಲ್ಲಿ ಕ್ರಿಕೆಟ್‌ನಲ್ಲಿ ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುವುದಕ್ಕೂ ವೃತ್ತಿಪರವಾಗಿ ಲೆದರ್‌ಬಾಲ್‌ನಲ್ಲಿ ಕ್ರಿಕೆಟ್ ಆಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದನ್ನು ಸಿಮ್ರನ್ ಶೇಕ್ ಒಪ್ಪಿಕೊಂಡಿದ್ದಾರೆ. " ಗಲ್ಲಿ ಕ್ರಿಕೆಟ್‌ಗೂ ವೃತ್ತಿಪರ ಕ್ರಿಕೆಟ್‌ಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ನಾನು ಕ್ರಿಕೆಟ್ ಅನ್ನು ಇಷ್ಟಪಡುತ್ತೇನೆ ಎಂದು ಶೇಕ್, ಆವಾಜ್- ದ ವಾಯ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಟೆನಿಸ್ ಬಾಲ್ ಕ್ರಿಕೆಟ್ ಆಡುವುದಕ್ಕೆ ಹೋಲಿಸಿದರೆ, ಲೆದರ್‌ಬಾಲ್ ಕ್ರಿಕೆಟ್ ಆಡುವುದು ಸಾಕಷ್ಟು ಸುಲಭ ಎನಿಸುತ್ತದೆ ಎಂದು ಸಿಮ್ರನ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸಿಮ್ರನ್ ಕೌಟುಂಬಿಕ ಹಿನ್ನಲೆ ಸಾಕಷ್ಟು ಬಡತನದಿಂದ ಕೂಡಿದ್ದು, ತಂದೆ ವೈರ್‌ಮನ್ ಕೆಲಸ ಮಾಡುತ್ತಿದ್ದು, 7 ಮಕ್ಕಳನ್ನು ಹೊಂದಿದ್ದಾರೆ.
"ನಾವು ನಾಲ್ಕು ಸಹೋದರಿಯರು ಹಾಗೂ ಮೂವರು ಸಹೋದರರನ್ನು ಹೊಂದಿದ್ದೇವೆ. ನಮ್ಮ ತಾಯಿ ಮನೆ ನಿರ್ವಹಣೆ ಮಾಡುತ್ತಾರೆ. ಇನ್ನು ನಮ್ಮ ತಂದೆ ವೈರಿಂಗ್ ಕೆಲಸ ಮಾಡುತ್ತಾರೆ. ನನಗೆ ಇಬ್ಬರು ಅಕ್ಕಂದಿರು ಇದ್ದಾರೆ. ಇನ್ನುಳಿದವರು ನನಗಿಂತ ಚಿಕ್ಕವರು" ಎಂದು ಸಿಮ್ರನ್ ಬಾನು ಶೇಕ್ ಹೇಳಿದ್ದಾರೆ
ಸ್ಪೋಟಕ ಬಲಗೈ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಸಿಮ್ರನ್ ಶೇಕ್, ಬೌಲಿಂಗ್‌ನಲ್ಲಿ ಒಳ್ಳೆಯ ಲೆಗ್‌ಸ್ಪಿನ್ನರ್ ಕೂಡಾ ಹೌದು. ಸ್ಪೋಟಕ ಬ್ಯಾಟಿಂಗ್ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಮಿಂಚಿರುವ ಸಿಮ್ರನ್, ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ.
ಸ್ಥಳೀಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದ ಸಿಮ್ರನ್ ಶೇಕ್, ಮುಂಬೈ ಅಂಡರ್ 19 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಮುಂಬೈ ಸೀನಿಯರ್ಸ್ ತಂಡದಲ್ಲಿಯೂ ಸಿಮ್ರನ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. "ನಾನೋರ್ವ ಬ್ಯಾಟರ್, ನಾನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ನಾನು ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಬ್ಯಾಟಿಂಗ್ ಮಾಡಲು ಸಿದ್ದನಿದ್ದೇನೆ" ಎಂದು ಸಿಮ್ರನ್ ಹೇಳಿದ್ದಾರೆ.
ನಾನು ನನ್ನ ಬದುಕಿನಲ್ಲಿ ಹಲವು ಸವಾಲುಗಳನ್ನು ಮೆಟ್ಟಿನಿಂತು, ಇಚ್ಛಾಶಕ್ತಿಯಿಂದ ನಾನಿದನ್ನು ಸಾಧಿಸಿದ್ದೇನೆ. ನನ್ನ ಪ್ರಯತ್ನವನ್ನು ಹೀಗೆಯೇ ಮುಂದುವರೆಸುತ್ತೇನೆ ಎಂದು ಸಿಮ್ರನ್ ಹೇಳಿದ್ದಾರೆ.
ನಾನು ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಮಹಿಳಾ ಎಲೈಸಿ ಪೆರ್ರಿಯನ್ನು ಇಷ್ಟಪಡುತ್ತೇನೆ. ಆದರೆ ಭಾರತ ತಂಡದ ಜೆಮಿಮಾ ರೋಡ್ರಿಗ್ಸ್ ಅವರನ್ನು ಅನುಕರಿಸುತ್ತಿದ್ದೇನೆ. ಕಳೆದ ಕೆಲ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಸಾಕಷ್ಟು ಅಭಿವೃದ್ದಿ ಹೊಂದಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಬಳಿಕ ಇದೀಗ ಭಾರತದಲ್ಲೂ ಟಿ20 ಲೀಗ್ ಆರಂಭಗೊಂಡಿದೆ. ಕೋಟಿ ರುಪಾಯಿಗಳ ಲೆಕ್ಕದಲ್ಲಿ ಹರಾಜಿನಲ್ಲಿ ಆಟಗಾರ್ತಿಯರನ್ನು ಖರೀದಿಸಲಾಗಿದೆ. ಇದರಿಂದ ಮಹಿಳಾ ಕ್ರಿಕೆಟಿಗರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲಿದೆ ಎಂದು ಸಿಮ್ರನ್ ಅಭಿಪ್ರಾಯಪಟ್ಟಿದ್ದಾರೆ.
ಸಿಮ್ರನ್ ಶೇಕ್, ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದು, ದೇಶಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಡಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.