ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಿಂದ ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದಾಗಿ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ನಾಯಕ ಶುಭಮನ್ ಗಿಲ್ ಹೊರಬಿದ್ದಿದ್ದಾರೆ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ, ಹೀಗಾದಲ್ಲಿ ಎರಡನೇ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ಅನುಪಸ್ಥಿತಿ ಭಾರತ ತಂಡವನ್ನು ಕಾಡಲಿದೆ
ಅಭ್ಯಾಸದಿಂದ ದೂರ ಉಳಿದ ಶುಭ್‌ಮನ್ ಗಿಲ್:
ನಿನ್ನೆ ಗುವಾಹಟಿಗೆ ಬಂದಿಳಿದ ಭಾರತ ತಂಡ ಇಂದು ಬೆಳಿಗ್ಗೆ ಅಭ್ಯಾಸಕ್ಕೆ ಇಳಿದರೂ, ಗಿಲ್ ಅಭ್ಯಾಸದಿಂದ ದೂರ ಉಳಿದಿದ್ದರು. ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿದ್ದ ಗಿಲ್, ಕುತ್ತಿಗೆ ನೋವಿನಿಂದಾಗಿ ನಾಲ್ಕು ರನ್ ಗಳಿಸಿದ್ದಾಗ ಕ್ರೀಸ್ ತೊರೆದಿದ್ದರು. ನಂತರ ಗಿಲ್ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಗೆಲ್ಲಲು ಕೆಲವೇ ರನ್ ಬೇಕಿದ್ದವು ಆಗಲೂ ಗಿಲ್ ಬ್ಯಾಟ್ ಮಾಡಲು ಮೈದಾನಕ್ಕಿಳಿದಿರಲಿಲ್ಲ.
ಕೋಲ್ಕತಾದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 124 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 93 ರನ್‌ಗಳಿಗೆ ಆಲೌಟ್ ಆಗಿ 30 ರನ್‌ಗಳ ಸೋಲು ಅನುಭವಿಸಿದಾಗ ಗಿಲ್ ಅನುಪಸ್ಥಿತಿ ನಿರ್ಣಾಯಕವಾಯಿತು. ಎರಡನೇ ಟೆಸ್ಟ್‌ಗೆ ಗಿಲ್‌ಗೆ ಬದಲಿ ಆಟಗಾರನನ್ನು ಆಯ್ಕೆಗಾರರು ಇನ್ನೂ ಪ್ರಕಟಿಸಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಋತುರಾಜ್ ಗಾಯಕ್ವಾಡ್ ಅಥವಾ ಕರುಣ್ ನಾಯರ್ ಅವರನ್ನು ಪರಿಗಣಿಸಲಾಗುವುದು ಎಂಬ ವರದಿಗಳಿದ್ದರೂ, ಆಯ್ಕೆಗಾರರು ಬದಲಿ ಆಟಗಾರರನ್ನು ಆಯ್ಕೆ ಮಾಡಲು ಸಿದ್ಧರಿರಲಿಲ್ಲ. ಹೀಗಾಗಿ ಶುಭ್‌ಮನ್ ಗಿಲ್ ಸ್ಥಾನಕ್ಕೆ ಸಾಯಿ ಸುದರ್ಶನ್ ಇಲ್ಲವೇ ದೇವದತ್ ಪಡಿಕ್ಕಲ್ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಗುವಾಹಟಿ ಟೆಸ್ಟ್: ಭಾರತಕ್ಕೆ ಮಾಡು ಇಲ್ಲವೇ ಮಡಿ ಮ್ಯಾಚ್
ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿರುವುದರಿಂದ ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ. ಟೆಸ್ಟ್ ಡ್ರಾ ಆದರೂ ದಕ್ಷಿಣ ಆಫ್ರಿಕಾ ಸರಣಿ ಗೆಲ್ಲಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮುನ್ನಡೆಗೆ ಅಡ್ಡಿಯಾಗಲಿದೆ. ಎರಡನೇ ಟೆಸ್ಟ್‌ಗೆ ಆತಿಥ್ಯ ವಹಿಸುತ್ತಿರುವ ಗುವಾಹಟಿ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.


