ಕೋಲ್ಕತಾ ಟೆಸ್ಟ್‌ನಲ್ಲಿ ಸೋತ ಭಾರತ ತಂಡ ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್‌ಗೆ ಸಜ್ಜಾಗುತ್ತಿದೆ. ಈಡನ್‌ ಗಾರ್ಡನ್ಸ್‌ಗಿಂತ ಭಿನ್ನವಾಗಿರುವ ಗುವಾಹಟಿ ಪಿಚ್, ಕೆಂಪು ಮಣ್ಣಿನಿಂದ ಕೂಡಿದ್ದು ವೇಗಿಗಳಿಗೆ ನೆರವಾಗುವ ನಿರೀಕ್ಷೆಯಿದೆ.  

ಗುವಾಹಟಿ: ಕೋಲ್ಕತಾ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿದ್ದ ಭಾರತ ತಂಡ, ನ.22ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಆದರೆ ತಂಡದ ಇತ್ತೀಚಿನ ಪ್ರದರ್ಶನ ಪಿಚ್‌ ಮೇಲೆ ಅವಲಂಬಿತವಾಗಿರುವುದರಿಂದ, 2ನೇ ಟೆಸ್ಟ್‌ಗೆ ಬಳಸಲಾಗುವ ಪಿಚ್‌ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

ವರದಿಗಳ ಪ್ರಕಾರ, ಸರಣಿಯ ಆರಂಭಿಕ ಪಂದ್ಯಕ್ಕೆ ಈಡನ್ ಗಾರ್ಡನ್ಸ್‌ನಲ್ಲಿ ತಯಾರಿಸಲಾಗಿದ್ದ ಪಿಚ್‌ಗಿಂತ ಗುವಾಹಟಿ ಪಿಚ್‌ ಭಿನ್ನವಾಗಿರಲಿದ್ದು, ವೇಗಿಗಳಿಗೆ ನೆರವಾಗುವ ನಿರೀಕ್ಷೆಯಿದೆ. ಪಿಚ್‌ನಲ್ಲಿ ವೇಗ ಹಾಗೂ ಉತ್ತಮ ಬೌನ್ಸರ್‌ಗಳು ಕಂಡುಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

‘ಇಲ್ಲಿನ ಪಿಚ್ ಕೆಂಪು ಮಣ್ಣಿನಿಂದ ತಯಾರಿಸಲ್ಪಟ್ಟಿದೆ. ಇದು ಸಾಮಾನ್ಯವಾಗಿ ಹೆಚ್ಚಿನ ವೇಗ ಮತ್ತು ಬೌನ್ಸ್ ನೀಡಲಿದೆ. ತವರಿನ ಋತು ಆರಂಭಗೊಳ್ಳುವ ಮೊದಲೇ ಭಾರತ ತಂಡ ಪಿಚ್‌ ಬಗ್ಗೆ ತನ್ನ ಬೇಡಿಕೆ ಸ್ಪಷ್ಟಪಡಿಸಿತ್ತು. ಗಣನೀಯವಾಗಿ ಬದಲಾಗುವ ಬೌನ್ಸ್ ಆಗದಂತೆ ಖಚಿತಪಡಿಸಿಕೊಳ್ಳಲು ಕ್ಯುರೇಟರ್‌ಗಳು ಪ್ರಯತ್ನಿಸುತ್ತಿದ್ದಾರೆ’ ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.

Scroll to load tweet…

ಏಕದಿನ, ಟಿ2ಯಲ್ಲಿ ದೊಡ್ಡ ಮೊತ್ತ:

ಗುವಾಹಟಿ ಕ್ರೀಡಾಂಗಣದ ದಾಖಲೆ ಗಮನಿಸಿದರೆ, ಇಲ್ಲಿ ಬ್ಯಾಟರ್‌ಗಳು ಹೆಚ್ಚಿನ ನೆರವು ಪಡೆದ ಉದಾಹರಣೆಯಿದೆ. ಭಾರತ ತಂಡ ಇಲ್ಲಿ ಶ್ರೀಲಂಕಾ, ವಿಂಡೀಸ್‌ ವಿರುದ್ಧ ತಲಾ 1 ಪಂದ್ಯವಾಡಿದೆ. 2 ಪಂದ್ಯಗಳ ಒಟ್ಟ 4 ಇನ್ನಿಂಗ್ಸ್‌ಗಳಲ್ಲೂ 300+ ರನ್‌ ದಾಖಲಾಗಿವೆ. ಗರಿಷ್ಠ ಮೊತ್ತ 373. ಇನ್ನು, ಭಾರತ ತಂಡ 3 ಟಿ20 ಪಂದ್ಯಗಳನ್ನಾಡಿದ್ದು, ಈ ಪೈಕಿ 2ರಲ್ಲಿ ತಂಡದ ಸ್ಕೋರ್‌ ತಲಾ 220 ದಾಟಿವೆ. ಮಹಿಳೆಯರ ಏಕದಿನ, ಟಿ20ಯಲ್ಲೂ ಇಲ್ಲಿ ದೊಡ್ಡ ಮೊತ್ತ ದಾಖಲಾದ ಉದಾಹರಣೆಯಿದೆ.

ಆದರೆ ಈ ಕ್ರೀಡಾಂಗಣದಲ್ಲಿ ಟೆಸ್ಟ್‌ ಪಂದ್ಯ ಆಯೋಜನೆಗೊಳ್ಳುತ್ತಿರುವುದು ಇದೇ ಮೊದಲು. ಹೀಗಾಗಿ ಭಾರತ ತಂಡ ಯಾವ ರೀತಿ ಪಿಚ್‌ಗೆ ಬೇಡಿಕೆ ಇಡಲಿದೆ ಎಂಬ ಕುತೂಹಲವಿದೆ. ಸ್ಪಿನ್ನರ್‌ಗಳ ವಿರುದ್ಧ ಪರದಾಡುತ್ತಿರುವುದರಿಂದ ತಂಡ ಗುವಾಹಟಿಯಲ್ಲಿ ಸ್ಪರ್ಧಾತ್ಮಕ ಪಿಚ್‌ಗೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗುತ್ತಿದೆ.

ಭಾರತ ಟೀಂ ಜತೆ ಶುಭ್‌ಮನ್ ಗಿಲ್‌ ಗುವಾಹಟಿಗೆ

ಬುಧವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಗುವಾಹಟಿಗೆ ಬಂದರು. ಮೊದಲ ಟೆಸ್ಟ್‌ ವೇಳೆ ಕುತ್ತಿಗೆ ಉಳುಕಿದ್ದರಿಂದ ಕೆಲ ದಿನ ಆಸ್ಪತ್ರೆಯಲ್ಲಿದ್ದ ನಾಯಕ ಶುಭ್‌ಮನ್‌ ಗಿಲ್‌ ಕೂಡಾ ತಂಡದ ಜೊತೆಗೆ ಆಗಮಿಸಿದರು. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಕೂಡಾ ಮಾಹಿತಿ ನೀಡಿದೆ. ಆದರೆ 2ನೇ ಟೆಸ್ಟ್‌ನಲ್ಲಿ ಆಡಲಿದ್ದಾರೊ ಇಲ್ಲವೊ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಬಗ್ಗೆ ಬಿಸಿಸಿಐ ಕೂಡಾ ಸ್ಪಷ್ಟ ಮಾಹಿತಿ ನೀಡಿಲ್ಲ.