ಕೋಲ್ಕತಾ ಟೆಸ್ಟ್‌ನಲ್ಲಿ ಸೋತ ಭಾರತ ತಂಡ, ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸಮಬಲಗೊಳಿಸುವ ಗುರಿ ಹೊಂದಿದೆ. ಗಾಯಾಳು ಶುಭ್‌ಮನ್‌ ಗಿಲ್‌ ಬದಲಿಗೆ ರಿಷಭ್‌ ಪಂತ್ ತಂಡವನ್ನು ಮುನ್ನಡೆಸಲಿದ್ದು, ತಂಡದ ಆಯ್ಕೆಯಲ್ಲಿ ಕೆಲವು ಬದಲಾವಣೆಗಳಾಗುವ ನಿರೀಕ್ಷೆಯಿದೆ.

ಗುವಾಹಟಿ: ಕೋಲ್ಕತಾ ಟೆಸ್ಟ್‌ ಪಂದ್ಯದಲ್ಲಿ ತಾನು ನಿರೀಕ್ಷಿಸದ ರೀತಿಯಲ್ಲಿ ಸೋಲುಂಡು ಮುಖಭಂಗ ಅನುಭವಿಸಿರುವ ಭಾರತ ತಂಡ ಈಗ ಹಾಲಿ ಟೆಸ್ಟ್‌ ವಿಶ್ವ ಚಾಂಪಿಯನ್‌ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಪಂದ್ಯಕ್ಕೆ ಸಜ್ಜಾಗಿದೆ.

ಆರಂಭಿಕ ಪಂದ್ಯದಲ್ಲಿ ಭಾರತ ತಂಡ ದ.ಆಫ್ರಿಕಾದ ಸ್ಪಿನ್ನರ್‌ಗಳ ಮುಂದೆ ಪರದಾಡಿ ಸೋತಿತ್ತು. ಇದರೊಂದಿಗೆ ಸರಣಿ ಗೆಲುವಿನ ಆಸೆ ಕೈಬಿಟ್ಟಿರುವ ತಂಡ, ಸರಣಿ 1-1 ಸಮಬಲಗೊಳಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ?

ಶುಭ್‌ಮನ್‌ ಗಿಲ್‌ ಈ ಪಂದ್ಯದಲ್ಲಿ ಆಡುವುದಿಲ್ಲ. ಹೀಗಾಗಿ ತಂಡಕ್ಕೆ ಆಯ್ಕೆ ಗೊಂದಲ ಎದುರಾಗಲಿದೆ. ಸಾಯಿ ಸುದರ್ಶನ್‌ರನ್ನು ತಂಡಕ್ಕೆ ಸೇರಿಸಿಕೊಂಡರೆ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸಬೇಕಾಗುತ್ತದೆ. ಹೀಗಾದರೆ ವಾಷಿಂಗ್ಟನ್‌ ಸುಂದರ್‌ ಮತ್ತೆ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆಯಬೇಕಾಗುತ್ತದೆ. ಇನ್ನು, ಕುಲ್ದೀಪ್ ಮತ್ತು ಅಕ್ಷರ್‌ ಪಟೇಲ್‌ ಪೈಕಿ ಒಬ್ಬರನ್ನು ಹೊರಗಿಟ್ಟು ನಿತೀಶ್‌ ಕುಮಾರ್‌ರನ್ನು ಆಡಿಸುವ ಸಾಧ್ಯತೆಯೂ ಇದೆ.

ಮತ್ತೊಂದೆಡೆ ದ.ಆಫ್ರಿಕಾ ತಂಡ ಕೋಲ್ಕತಾ ಟೆಸ್ಟ್‌ ಗೆಲುವಿನ ಹುಮ್ಮಸ್ಸಿನಲ್ಲಿದ್ದು, ಮತ್ತೊಂದು ಗೆಲುವಿನ ಮೂಲಕ ಸರಣಿ ಕೈವಶಪಡಿಸಿಕೊಳ್ಳಲು ಕಾತರಿಸುತ್ತಿದೆ.

ವಿರಾಮ ಸಮಯ ಬದಲು:

ಟೆಸ್ಟ್‌ ಪಂದ್ಯದಲ್ಲಿ ಸಾಮಾನ್ಯವಾಗಿ ಮೊದಲ ಅವಧಿ ಬಳಿಕ ಊಟ, 2ನೇ ಅವಧಿ ವೇಳೆ ಟೀ ವಿರಾಮ ಇರುತ್ತದೆ. ಆದರೆ ಈ ಟೆಸ್ಟ್‌ನಲ್ಲಿ ಮೊದಲ ಅವಧಿ ಬಳಿಕ ಟೀ, 2ನೇ ಅವಧಿ ವೇಳೆ ಮಧ್ಯಾಹ್ನ 1.20ರಿಂದ 40 ನಿಮಿಷಗಳ ಊಟದ ವಿರಾಮ ಇರಲಿದೆ. ಬಳಿಕ 2 ರಿಂದ ಸಂಜೆ 4 ಗಂಟೆಯವರೆಗೂ ಕೊನೆ ಅವಧಿ ನಡೆಯಲಿದೆ.

ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ

-

ರಿಷಭ್‌ ಪಂತ್ ನಾಯಕ

1ನೇ ಟೆಸ್ಟ್‌ ವೇಳೆ ಕುತ್ತಿಗೆ ಗಾಯಕ್ಕೆ ತುತ್ತಾಗಿದ್ದ ಶುಭ್‌ಮನ್‌ ಗಿಲ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ರಿಷಭ್‌ ಪಂತ್‌ ತಂಡದ ನಾಯಕತ್ವ ವಹಿಸಲಿದ್ದಾರೆ