ಐದು ವರ್ಷಗಳ ಬಳಿಕ ಶಿವಮೊಗ್ಗದ ನವುಲೆ ಕೆಎಸ್‌ಸಿಎ ಮೈದಾನವು ಕರ್ನಾಟಕ ಮತ್ತು ಗೋವಾ ನಡುವಿನ ರಣಜಿ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡಕ್ಕೆ, ಹಿಂದಿನ ಪಂದ್ಯ ಗೆದ್ದ ಹುಮ್ಮಸ್ಸಿನಲ್ಲಿರುವ ಗೋವಾ ತಂಡವು ಪ್ರಬಲ ಪೈಪೋಟಿ ನೀಡಲಿದೆ.
ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಮೈದಾನ 5 ವರ್ಷಗಳ ಬಳಿಕ ರಣಜಿ ಪ್ರಥಮ ದರ್ಜೆ ಪಂದ್ಯಕ್ಕೆ ಆತಿಥ್ಯ ವಹಿಸಿದೆ.ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ಹಾಗೂ ಗೋವಾ ತಂಡಗಳು ಮುಖಾಮುಖಿಯಾಗಿವೆ. ಮಳೆಯಿಂದಾಗಿ ಔಟ್‌ಫೀಲ್ಡ್ ಕೊಂಚ ಒದ್ದೆಯಾಗಿರುವುದರಿಂದಾಗಿ ಟಾಸ್ ಕೊಂಚ ತಡವಾಗಲಿದೆ.
ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕರ್ನಾಟಕ
ಈ ಋತುವಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಗೆದ್ದಿರುವ ಗೋವಾ ತುಂಬಾ ಹುಮ್ಮಸ್ಸಿನಲ್ಲೇ ಕಣಕ್ಕಿಳಿಯುತ್ತಿದೆ. ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ತಂಡ ಮೊದಲ ಗೆಲುವಿನ ತವಕದಲ್ಲಿದೆ. ಅನುಭವಿ ಬ್ಯಾಟರ್ ಕರುಣ್ ನಾಯರ್ ಬ್ಯಾಟ್ ನಿಂದ ಮೊದಲ ಪಂದ್ಯದಲ್ಲಿ ನಿರೀಕ್ಷಿತ ರನ್ ಬಂದಿರಲಿಲ್ಲ. ಅಲ್ಲದೆ ನಾಯಕ ಮಯಾಂಕ್ ಅಗರ್‌ವಾಲ್ ಕೂಡಾ ಈ ಪಂದ್ಯದಲ್ಲಿ ಮಿಂಚಲೇಬೇಕಿದೆ. ಜೊತೆಗೆ ಯುವ ಬ್ಯಾಟರ್‌ಗಳಾದ ಆರ್. ಸ್ಮರಣ್, ನಿಕಿನ್ ಜೋಸ್, ವಿಕೆಟ್ ಕೀಪರ್ ಕೆ.ಎಲ್. ಶ್ರೀಜಿತ್ ತಂಡದ ಕೈಹಿಡಿಯಬೇಕಿದೆ. ಉಳಿದಂತೆ ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ. ಒಳಗೊಂಡ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದರೆ, ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್‌ಗೆ ಯುವ ಸ್ಪಿನ್ನರ್‌ಗಳಾದ ಮೊಹಿನ್ ಖಾನ್ ಮತ್ತು ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ಸಾಥ್ ನೀಡಲಿದ್ದಾರೆ.
ಗೋವಾ ತಂಡವನ್ನು ದೀಪ್ ರಾಜ್ ಗಾಂವ್‌ಕರ್‌ಮುನ್ನಡೆಸಲಿದ್ದಾರೆ. ಇನ್ನು ಈ ಪಂದ್ಯದಲ್ಲಿ ಗೋವಾ ತಂಡದ ಪರ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕಣಕ್ಕಿಳಿಯುತ್ತಿರುವುದು ಪ್ರಮುಖ ಆಕರ್ಷಣೆ ಎನಿಸಿಕೊಂಡಿದೆ.
ಮಹಿಳಾ ಟಿ20: ಸೂಪರ್ ಲೀಗ್‌ನಲ್ಲಿ ಇಂದು ಕರ್ನಾಟಕ - ಡೆಲ್ಲಿ ಫೈಟ್
ಸೂರತ್: ರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಹಂತ ಶನಿವಾರ ಆರಂಭಗೊಳ್ಳಲಿದೆ. ಕರ್ನಾಟಕ ತಂಡ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೆಣಸಾಡಲಿದೆ.
ಗುಂಪು ಹಂತದಲ್ಲಿ ಎಲೈಟ್ 'ಸಿ' ಗುಂಪಿನಲ್ಲಿದ್ದ ರಾಜ್ಯ ತಂಡ, ಆಡಿದ 7 ಪಂದ್ಯಗಳ ಪೈಕಿ 6ರಲ್ಲಿ ಜಯಗಳಿಸಿತ್ತು. 24 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಸೂಪರ್‌ಲೀಗ್ ಪ್ರವೇಶಿಸಿತ್ತು. ಈ ಹಂತದಲ್ಲಿ ರಾಜ್ಯಕ್ಕೆ 3 ಪಂದ್ಯಗಳಿವೆ. ಅ.27ಕ್ಕೆ ವಿದರ್ಭ, ಅ.29ರಂದು ಮಧ್ಯಪ್ರದೇಶ ವಿರುದ್ಧ ಸೆಣಸಾಡಲಿದೆ. ಸೂಪರ್ ಲೀಗ್‌ನಲ್ಲಿ ಒಟ್ಟು 8 ತಂಡಗಳಿದ್ದು, ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅಗ್ರಸ್ಥಾನ ಪಡೆದ ತಂಡಗಳು ಅ.31ರಂದು ಫೈನಲ್‌ನಲ್ಲಿ ಸೆಣಸಾಡಲಿವೆ.
