ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ಡೇರಲ್ ಮಿಚೆಲ್, ಡೆವೊನ್ ಕಾನ್‌ವೇ ಮತ್ತು ಹೆನ್ರಿ ನಿಕೋಲ್ಸ್ ಅವರ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 8 ವಿಕೆಟ್‌ಗೆ 300 ರನ್ ಗಳಿಸಿತು. ಭಾರತದ ಪರ ಹರ್ಷಿತ್ ರಾಣಾ, ಪ್ರಸಿದ್ದ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು.
ವಡೋದರಾ: ಡೇರಲ್ ಮಿಚೆಲ್, ಡೆವೊನ್ ಕಾನ್‌ವೇ ಹಾಗೂ ಹೆನ್ರಿ ನಿಕೋಲ್ಸ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 300 ರನ್ ಕಲೆಹಾಕಿದೆ. ಈ ಮೂಲಕ ಆತಿಥೇಯ ಭಾರತ ತಂಡಕ್ಕೆ ಸವಾಲಿನ ಗುರಿ ನೀಡಿದೆ.
ಇಲ್ಲಿನ ಕೊಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಶುಭ್‌ಮನ್ ಗಿಲ್ ಮರು ಆಲೋಚನೆಯಿಲ್ಲದೇ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಟೀಂ ಇಂಡಿಯಾ ಮೂವರು ವೇಗಿಗಳ ಸಹಿತ ಆರು ಬೌಲರ್‌ಗಳೊಂದಿಗೆ ಕಣಕ್ಕಿಳಿಯಿತು. ಹೀಗಿದ್ದೂ ನ್ಯೂಜಿಲೆಂಡ್ ತಂಡವು ಭರ್ಜರಿ ಆರಂಭ ಪಡೆಯಿವಲ್ಲಿ ಯಶಸ್ವಿಯಾಯಿತು. ಮೊದಲ ವಿಕೆಟ್‌ಗೆ ಹೆನ್ರಿ ನಿಕೋಲ್ಸ್ ಹಾಗೂ ಡೆವೊನ್ ಕಾನ್‌ವೇ 117 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ಯಶಸ್ವಿಯಾದರು.
ಕಿವೀಸ್ ಜತೆಯಾಟ ಮುರಿದ ಹರ್ಷಿತ್ ರಾಣಾ:
ಭಾರತದ ಬೌಲರ್‌ಗಳನ್ನು ಕಿವೀಸ್ ಆರಂಭಿಕರಾದ ನಿಕೋಲ್ಸ್ ಹಾಗೂ ಕಾನ್‌ವೇ ಮೊದಲ 20 ಓವರ್‌ಗಳಲ್ಲಿ ಯಶಸ್ವಿಯಾಗಿ ಎದುರಿಸಿದರು. ಇಬ್ಬರು ಆರಂಭಿಕರು ಆಕರ್ಷಕ ಅರ್ಧಶತಕ ಸಿಡಿಸಿ ಭಾರತದ ಪಾಲಿಗೆ ಅಪಾಯಕಾರಿಯಾಗು ಮುನ್ಸೂಚನೆ ನೀಡಿದ್ದರು. ಈ ವೇಳೆ ದಾಳಿಗಿಳಿದ ಹರ್ಷಿತ್ ರಾಣಾ, ಕಿವೀಸ್ ಆರಂಭಿರಿಬ್ಬರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಮೊದಲಿಗೆ 62 ರನ್ ಗಳಿಸಿದ್ದ ನಿಕೋಲ್ಸ್ ಅವರನ್ನು ಬಲಿಪಡೆದ ರಾಣಾ, ಇದಾದ ನಂತರ 56 ರನ್ ಗಳಿಸಿದ್ದ ಕಾನ್‌ವೇಯನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಹರ್ಷಿತ್ ರಾಣಾ ಯಶಸ್ವಿಯಾದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಲ್ ಯಂಗ್(12) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಮೊಹಮ್ಮದ್ ಸಿರಾಜ್ ಅವಕಾಶ ನೀಡಲಿಲ್ಲ. ಇನ್ನು ಗ್ಲೆನ್ ಫಿಲಿಫ್ಸ್ ಬ್ಯಾಟಿಂಗ್ ಕೂಡಾ ಕೇವಲ 12 ರನ್‌ಗಳಿಗೆ ಸೀಮಿತವಾಯಿತು. ಫಿಲಿಫ್ಸ್ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಕಿವೀಸ್‌ಗೆ ಆಸರೆಯಾದ ಡೇರಲ್ ಮಿಚೆಲ್:
ಮಧ್ಯಮ ಕ್ರಮಾಂಕದಲ್ಲಿ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಡೇರಲ್ ಮಿಚೆಲ್, ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ 198 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಮಿಚೆಲ್ ಆಸರೆಯಾದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ಮಿಚೆಲ್ 71 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 84 ರನ್ ಬಾರಿಸಿ ಪ್ರಸಿದ್ದ್ ಕೃಷ್ಣ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಭಾರತದ ಸಂಘಟಿತ ಬೌಲಿಂಗ್:
ಇನ್ನು ಟೀಂ ಇಂಡಿಯಾ ಪರ ಸಂಘಟಿತ ದಾಳಿ ನಡೆಸಿದ ಪ್ರಸಿದ್ದ್ ಕೃಷ್ಣ, ಹರ್ಷಿತ್ ರಾಣಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.


