ಅಜಿಂಕ್ಯ ರಹಾನೆ ನಾಯಕತ್ವ ತ್ಯಜಿಸಿದ ಬಳಿಕ ಮುಂಬೈ ಕ್ರಿಕೆಟ್ ತಂಡದ ನಾಯಕತ್ವವನ್ನು ಶಾರ್ದೂಲ್ ಠಾಕೂರ್ ವಹಿಸಿಕೊಂಡಿದ್ದಾರೆ. ರಣಜಿ ಟ್ರೋಫಿ, ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.

ಮುಂಬೈ: ಮುಂಬೈ ಕ್ರಿಕೆಟ್ ತಂಡವನ್ನು ಇನ್ನು ಆಲ್ರೌಂಡರ್ ಶಾರ್ದೂಲ್ ಠಾಕೂರ್ ಮುನ್ನಡೆಸಲಿದ್ದಾರೆ. ಅಜಿಂಕ್ಯ ರಹಾನೆ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 

ಮುಂಬರುವ ದೇಶೀ ಋತುವಿನಲ್ಲಿ ರಣಜಿ ಟ್ರೋಫಿ, ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಶಾರ್ದೂಲ್ ಠಾಕೂರ್ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡಲು ಮತ್ತು ಮುಂದಿನ ನಾಯಕನನ್ನು ಬೆಳೆಸಲು ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ ಎಂದು ರಹಾನೆ ಹೇಳಿದ್ದರೂ, 33 ವರ್ಷದ ಶಾರ್ದೂಲ್ ಅವರನ್ನು ಮುಂಬೈ ನಾಯಕರನ್ನಾಗಿ ಆಯ್ಕೆ ಮಾಡಿರುವುದು ಅನಿರೀಕ್ಷಿತವಾಗಿದೆ.

ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ಶ್ರೇಯಸ್ ಅಯ್ಯರ್ ಮುಂತಾದ ಯುವ ಆಟಗಾರರನ್ನು ನಾಯಕತ್ವಕ್ಕೆ ಪರಿಗಣಿಸಲಾಗುವುದು ಎಂದು ಭಾವಿಸಲಾಗಿತ್ತು. ಆದರೆ ಸರ್ಫರಾಜ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರೂ ಭಾರತೀಯ ಟೆಸ್ಟ್ ತಂಡಕ್ಕೆ ಪರಿಗಣಿಸಲ್ಪಡುವ ಸಾಧ್ಯತೆಯಿರುವುದರಿಂದ, ಇಡೀ ಋತುವಿನಲ್ಲಿ ಅವರ ಸೇವೆ ಲಭ್ಯವಾಗುತ್ತದೆಯೇ ಎಂಬ ಬಗ್ಗೆ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

Scroll to load tweet…

ಕಳೆದ ರಣಜಿ ಋತುವಿನಲ್ಲಿ ಮುಂಬೈ ಪರ ಒಂದು ಶತಕ ಸೇರಿದಂತೆ 505 ರನ್ ಗಳಿಸಿದ್ದ ಶಾರ್ದೂಲ್ 35 ವಿಕೆಟ್‌ಗಳೊಂದಿಗೆ ಬೌಲಿಂಗ್‌ನಲ್ಲೂ ಮಿಂಚಿದ್ದರು. ರಣಜಿಯಲ್ಲಿನ ಪ್ರದರ್ಶನದಿಂದಾಗಿ ಐಪಿಎಲ್‌ನಲ್ಲಿ ಲಖನೌ ತಂಡದಲ್ಲಿ ಪರ್ಯಾಯ ಆಟಗಾರನಾಗಿ ಸ್ಥಾನ ಪಡೆದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಪರ ಆಡಿದ ಶಾರ್ದೂಲ್ ಗೆ ಮಿಂಚಲು ಸಾಧ್ಯವಾಗಲಿಲ್ಲ. ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ದಲೀಪ್ ಟ್ರೋಫಿಗೆ ಪಶ್ಚಿಮ ವಲಯದ ನಾಯಕನಾಗಿಯೂ ಶಾರ್ದೂಲ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ.

ರಹಾನೆ ನಾಯಕತ್ವ ತ್ಯಾಗ

ಮುಂಬೈ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಭಾರತೀಯ ಆಟಗಾರ ಅಜಿಂಕ್ಯ ರಹಾನೆ ಘೋಷಿಸಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ರಹಾನೆ ಹೇಳಿದ್ದಾರೆ. ನಾಯಕನಾಗಿ ಮುಂಬೈ ತಂಡಕ್ಕೆ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಕ್ಕೆ ಹೆಮ್ಮೆಯಿದೆ. ಮುಂಬರುವ ದೇಶೀಯ ಕ್ರಿಕೆಟ್ ಋತುವಿನ ಮುನ್ನ ನಾಯಕತ್ವ ತ್ಯಜಿಸಿ ಹೊಸ ನಾಯಕನಿಗೆ ದಾರಿ ಮಾಡಿಕೊಡುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಮುಂಬೈ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆದರೆ ಆಟಗಾರನಾಗಿ ಮುಂಬೈ ಪರ ಮುಂದುವರಿಯುತ್ತೇನೆ ಮತ್ತು ಟ್ರೋಫಿ ಗೆಲ್ಲಲು ಶ್ರಮಿಸುತ್ತೇನೆ ಎಂದು ರಹಾನೆ ತಮ್ಮ ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Scroll to load tweet…

ನಾಯಕತ್ವ ತ್ಯಜಿಸಿದರೂ 37 ವರ್ಷದ ರಹಾನೆ ಮುಂಬೈ ಪರ ಆಡುವುದನ್ನು ಮುಂದುವರಿಸಲಿದ್ದಾರೆ. ರಹಾನೆ ನಾಯಕತ್ವದಲ್ಲಿ ಕಳೆದ ಸೀಸನ್‌ನಲ್ಲಿ ಮುಂಬೈ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿತ್ತು. ರಹಾನೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಕಳೆದ ಸೀಸನ್‌ನಲ್ಲಿ ಮುಂಬೈ ತಂಡವನ್ನು ರಣಜಿ ಟ್ರೋಫಿ ಸೆಮಿಫೈನಲ್‌ಗೆ ಕರೆದೊಯ್ದಿದ್ದರು. ಸೆಮಿಫೈನಲ್‌ನಲ್ಲಿ ವಿದರ್ಭ ತಂಡದ ವಿರುದ್ಧ 90 ರನ್‌ಗಳಿಂದ ಸೋತು ಮುಂಬೈ ಹೊರಬಿದ್ದಿತ್ತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಹಾನೆ ಎರಡನೇ ಸ್ಥಾನದಲ್ಲಿದ್ದಾರೆ. 76 ಪಂದ್ಯಗಳಲ್ಲಿ 52 ಸರಾಸರಿಯಲ್ಲಿ 5,932 ರನ್ ಗಳಿಸಿದ್ದಾರೆ. 19 ಶತಕಗಳನ್ನು ಬಾರಿಸಿದ್ದಾರೆ. ವಾಸಿಂ ಜಾಫರ್ 29 ಶತಕಗಳೊಂದಿಗೆ ಮುಂಬೈ ಪರ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಕಳೆದ ಐಪಿಎಲ್ ಋತುವಿನಲ್ಲಿ ರಹಾನೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಮುಂಬೈ ನಾಯಕತ್ವ ತ್ಯಜಿಸಿರುವ ರಹಾನೆ ಕೋಲ್ಕತ್ತಾ ತಂಡದ ನಾಯಕತ್ವವನ್ನೂ ತ್ಯಜಿಸುತ್ತಾರಾ ಎಂದು ಅಭಿಮಾನಿಗಳು ಕಾದು ನೋಡುತ್ತಿದ್ದಾರೆ