ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಮಧ್ಯಪ್ರದೇಶದ ಎಡಗೈ ವೇಗಿ ಮಂಗೇಶ್ ಯಾದವ್ ಅವರನ್ನು 5.20 ಕೋಟಿ ರುಪಾಯಿ ನೀಡಿ ಖರೀದಿಸಿದೆ. 30 ಲಕ್ಷ ಮೂಲ ಬೆಲೆ ಹೊಂದಿದ್ದ ಇವರಿಗಾಗಿ ಸನ್‌ರೈಸರ್ಸ್ ಹೈದರಾಬಾದ್ ಜೊತೆ ತೀವ್ರ ಪೈಪೋಟಿ ನಡೆಸಿತ್ತು.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ ಬಳಿಕ ಮತ್ತೋರ್ವ ಮಧ್ಯಪ್ರದೇಶ ಮೂಲದ ವೇಗಿ ಮಂಗೇಶ್ ಯಾದವ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಕೇವಲ 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ ಅವರಿಗೆ ಆರ್‌ಸಿಬಿ ಫ್ರಾಂಚೈಸಿಯು ಬರೋಬ್ಬರಿ 5.20 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಎಡಗೈ ವೇಗಿಯಾಗಿರುವ ಮಂಗೇಶ್ ಯಾದವ್ ಅವರನ್ನು ಖರೀದಿಸಲು ಆರ್‌ಸಿಬಿ ಫ್ರಾಂಚೈಸಿಯು ಆರಂಭದಿಂದಲೇ ಬಿಡ್ ಮಾಡಲಾರಂಭಿಸಿತು. ಆರ್‌ಸಿಬಿಗೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕೊನೆಯವರೆಗೂ ಪೈಪೋಟಿ ನೀಡಿತು. ಈಗಾಗಲೇ ಆರ್‌ಸಿಬಿ ತಂಡವು ಯಶ್ ದಯಾಳ್ ಅವರಂತಹ ಎಡಗೈ ವೇಗಿಯನ್ನು ಹೊಂದಿದೆ. ಅವರಿಗೆ ಬ್ಯಾಕ್‌ಅಪ್ ಅಗಿ ಮಂಗೇಶ್ ಯಾದವ್ ಖರೀದಿಸಲು ಆರ್‌ಸಿಬಿ ಮುಂದಾಯಿತು. ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಈ ಮಧ್ಯಪ್ರದೇಶ ಮೂಲದ ವೇಗಿಗೆ 5 ಕೋಟಿ ರುಪಾಯಿವರೆಗೂ ಬಿಡ್ ಮಾಡಿತು.
ಅಷ್ಟಕ್ಕೂ ಯಾರು ಈ ಮಂಗೇಶ್ ಯಾದವ್?
24 ವರ್ಷದ ಮಂಗೇಶ್ ಯಾದವ್, ಕರಾರುವಕ್ಕಾದ ಯಾರ್ಕರ್ ಎಸೆಯಬಲ್ಲ ಎಡಗೈ ವೇಗಿಯಾಗಿದ್ದಾರೆ. ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿಮ ಗ್ವಾಲಿಯರ್ ಚೀಥಾಸ್ ಪರವಾಗಿ 21 ಓವರ್ ಬೌಲಿಂಗ್ ಮಾಡಿ 14 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು. 6 ಪಂದ್ಯಗಳ ಪೈಕಿ ಮೂರು ಬಾರಿ ಮಂಗೇಶ್ ಯಾದವ್ 4 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಒಂದು ಪಂದ್ಯದಲ್ಲಿ ಕೇವಲ 18 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ.
ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಬೆನ್ನಲ್ಲೇ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಂಗೇಶ್ ಯಾದವ್ ಮಧ್ಯಪ್ರದೇಶ ತಂಡಕ್ಕೆ ಪಾದಾರ್ಪಣೆ ಮಾಡಿದರು. ಮಧ್ಯಪ್ರದೇಶ ಪರ ಸೂಪರ್ ಲೀಗ್ ಹಂತದಲ್ಲಿ ಎರಡು ಪಂದ್ಯಗಳನ್ನಾಡಿ 3 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ ಕೇವಲ 12 ಪಂದ್ಯಗಳಲ್ಲಿ 28 ರನ್ ಸಿಡಿಸುವ ಮೂಲಕ ಬ್ಯಾಟಿಂಗ್‌ನಲ್ಲೂ ಆಸರೆಯಾಗಬಲ್ಲೇ ಎನ್ನುವ ಸಂದೇಶವನ್ನು ಮಂಗೇಶ್ ಯಾದವ್ ರವಾನಿಸಿದ್ದರು.
ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ವಿವರ ಹೀಗಿದೆ:
ವೆಂಕಟೇಶ್ ಅಯ್ಯರ್: 7 ಕೋಟಿ ರುಪಾಯಿ
ಜೇಕೊಬ್ ಡಫಿ: 2 ಕೋಟಿ ರುಪಾಯಿ
ಸಾತ್ವಿಕ್ ದೇಶ್ವಾಲ್: 30 ಲಕ್ಷ ರುಪಾಯಿ
ಮಂಗೇಶ್ ಯಾದವ್: 5.20 ಕೋಟಿ ರುಪಾಯಿ


