ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಪ್ರಕಟವಾಗಿದೆ. ಹರ್ಮನ್‌ಪ್ರೀತ್ ಕೌರ್ ನಾಯಕಿ ಹಾಗೂ ಸ್ಮೃತಿ ಮಂಧನಾ ಉಪನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿಯ ವಿಶ್ವಕಪ್‌ನಿಂದ ಶಫಾಲಿ ವರ್ಮಾ ಹೊರಗುಳಿದಿದ್ದಾರೆ.

ಮುಂಬೈ: ಚೊಚ್ಚಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿರುವ ಭಾರತ ಇದೀಗ ಸಾಕಷ್ಟು ಅಳೆದುತೂಗಿ ಬಲಿಷ್ಠ ಆಟಗಾರ್ತಿಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ಭಾರತ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದು, ಸ್ಮೃತಿ ಮಂಧನಾ ಉಪನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕರ್ನಾಟಕದ ಶ್ರೇಯಾಂಕ ಪಾಟೀಲ್ ವಿಫಲವಾಗಿದ್ದಾರೆ. ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್‌ಗೆ ಕರ್ನಾಟಕದ ಯಾವೊಬ್ಬ ಆಟಗಾರ್ತಿಯೂ ಸ್ಥಾನ ಪಡೆದಿಲ್ಲ. ಸೆಪ್ಟೆಂಬರ್ 30ರಿಂದ ನವೆಂಬರ್‌ 02ರ ವರೆಗೆ ಭಾರತದ ನಾಲ್ಕು ಸ್ಟೇಡಿಯಂಗಳಲ್ಲಿ ಹಾಗೂ ಶ್ರೀಲಂಕಾದಲ್ಲಿ ಪಾಕಿಸ್ತಾನದ ಪಂದ್ಯಗಳು ನಡೆಯಲಿವೆ.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಘೋಷಿಸುವ ಮುನ್ನ ಆಯ್ಕೆ ಸಮಿತಿಯ ಡಯನಾ ಎಡುಲ್ಜಿ, ನೀತು ಡೇವಿಡ್, ಆರ್ತಿ ವೈದ್ಯಾ, ಹೆಡ್ ಕೋಚ್ ಅಮೊಲ್ ಮಜೂಂದಾರ್, ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನಾ ಸಮಾಲೋಚನೆ ನಡೆಸಿ ತಂಡವನ್ನು ಘೋಷಣೆ ಮಾಡಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ‘ಎ’ ಎದುರಿನ ಸರಣಿಯಿಂದ ಹೊರಬಿದ್ದಿದ್ದ ಶ್ರೇಯಾಂಕ ಪಾಟೀಲ್ ಇದೀಗ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ.

Scroll to load tweet…

36 ವರ್ಷದ ಹರ್ಮನ್‌ಪ್ರೀತ್ ಕೌರ್ ಪಾಲಿಗೆ ಇದು ಬಹುತೇಕ ಕೊನೆಯ ಏಕದಿನ ವಿಶ್ವಕಪ್‌ ಎನಿಸಲಿದೆ. ಯಾಕೆಂದರೆ ಮುಂದಿನ ಏಕದಿನ ವಿಶ್ವಕಪ್ 2029ಕ್ಕೆ ನಿಗದಿಯಾಗಿದ್ದು, ಆಗ ಕೌರ್‌ಗೆ 40 ವರ್ಷ ವಯಸ್ಸಾಗಿರಲಿದೆ. ಹೀಗಾಗಿ ತವರಿನಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಹರ್ಮನ್‌ಪ್ರೀತ್ ಕೌರ್‌ಗೆ ಸುವರ್ಣಾವಕಾಶವಾಗಲಿದೆ.

ಇನ್ನು ಅಚ್ಚರಿಯ ಸಂಗತಿಯೆಂದರೆ ಭಾರತ ಮಹಿಳಾ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಶಫಾಲಿ ವರ್ಮಾ, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್‌ ಆಗಿ ರಿಚಾ ಘೋಷ್ ಹಾಗೂ ಯಾಶ್ತಿಕಾ ಭಾಟಿಯಾ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅನುಭವಿ ಆಲ್ರೌಂಡರ್ ದೀಪ್ತಿ ಶರ್ಮಾ ಜತೆಗೆ ಜೆಮಿಯಾ ರೋಡ್ರಿಗ್ಸ್‌, ಹರ್ಲಿನ್ ಡಿಯೋಲ್, ಪ್ರತೀಕ್ ರಾವಲ್ ಹಾಗೂ ರಾಧಾ ಯಾದವ್ ಆಲ್ರೌಂಡರ್ ರೂಪದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್ ಠಾಕೂರ್, ಅರುಂದತಿ ರೆಡ್ಡಿ, ಕ್ರಾಂತಿ ಗೌಡ್, ಅಮನ್‌ಜೋತ್ ಕೌರ್, ಸ್ನೆಹ್ ರಾಣಾ ಹಾಗೂ ಶ್ರೀ ಚರಣಿ ಸ್ಥಾನ ಪಡೆದಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡವು 2005 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 98 ರನ್ ಅಂತರದ ಸೋಲು ಕಾಣುವ ಮೂಲಕ ನಿರಾಸೆ ಮೂಡಿಸಿತ್ತು. ಇದಾದ ಬಳಿಕ 2017ರಲ್ಲಿ ಮತ್ತೊಮ್ಮೆ ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತಾದರೂ, ಲಾರ್ಡ್ಸ್‌ನಲ್ಲಿ ಮತ್ತೆ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿತ್ತು.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಎದುರಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗೆ ಆಲ್ರೌಂಡರ್ ಅಮನ್‌ಜೋತ್ ಕೌರ್ ಆಯ್ಕೆಯಾಗಿಲ್ಲ, ಆದರೆ ಏಕದಿನ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಇದನ್ನು ಹೊರತುಪಡಿಸಿ ಆಸ್ಟ್ರೇಲಿಯಾ ಎದುರಿನ ಸರಣಿಗೆ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗೂ ಆಯ್ಕೆಯಾದ ತಂಡದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಹೀಗಿದೆ ನೋಡಿ:

ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ಪ್ರತೀಕ್ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಯಾ ರೋಡ್ರಿಗ್ಸ್, ರೇಣುಕಾ ಸಿಂಗ್ ಠಾಕೂರ್, ಅರುಂದತಿ ರೆಡ್ಡಿ, ರಿಚಾ ಘೋಷ್(ವಿಕೆಟ್ ಕೀಪರ್), ಕ್ರಾಂತಿ ಗೌಡ್, ಅಮನ್‌ಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಯಾಶ್ತಿಕಾ ಭಾಟಿಯಾ(ವಿಕೆಟ್ ಕೀಪರ್) ಹಾಗೂ ಸ್ನೆಹ್ ರಾಣಾ.