Asianet Suvarna News Asianet Suvarna News

ICC World Cup: ಹೆಣ್ಣು ಕೊಟ್ಟ ಮಾವ ಶಾಹಿದ್ ಅಫ್ರಿದಿ ಅಪರೂಪದ ದಾಖಲೆ ಸರಿಗಟ್ಟಿದ ಶಾಹೀನ್ ಅಫ್ರಿದಿ..!

ಪಾಕಿಸ್ತಾನದ ಮಾರಕ ವೇಗಿ ಶಾಹೀನ್ ಅಫ್ರಿದಿ, ಆಸ್ಟ್ರೇಲಿಯಾ ಎದುರು 10 ಓವರ್ ಬೌಲಿಂಗ್ ಮಾಡಿ 54 ರನ್ ನೀಡಿ 5 ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

Shaheen Afridi Equals Father In Law Shahid Afridi Unique Feat In ODI Cricket World Cup 2023 kvn
Author
First Published Oct 21, 2023, 4:28 PM IST

ಬೆಂಗಳೂರು(ಅ.21): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹೀಗಿದ್ದೂ, ಪಾಕಿಸ್ತಾನ ಮಾರಕ ವೇಗಿ ಶಾಹೀನ್ ಅಫ್ರಿದಿ, ತಮ್ಮ ಮಾವ ಶಾಹಿದ್ ಅಫ್ರಿದಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯೊಂದನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ಹೌದು, ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕ್‌ನ ಎಡಗೈ ವೇಗಿ 5 ವಿಕೆಟ್ ಕಬಳಿಸಿ ಗಮನ ಸೆಳೆದರು. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ಪರ ಎರಡು ಬಾರಿ 5+ ವಿಕೆಟ್‌ ಕಬಳಿಸಿದ ಎರಡನೇ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾದರು. ಈ ಮೊದಲು ಶಾಹೀನ್ ಅಫ್ರಿದಿ ಮಾವ ಶಾಹಿದ್ ಅಫ್ರಿದಿ ಕೂಡಾ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪರ ಎರಡು ಬಾರಿ 5+ ವಿಕೆಟ್ ಕಬಳಿಸಿದ್ದರು. ಇದೀಗ ಆ ದಾಖಲೆಯನ್ನು ಶಾಹೀನ್‌ ಅಫ್ರಿದಿ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಏಷ್ಯಾಕಪ್ ಬಳಿಕ ಎರಡನೇ ಸಲ ಮದುವೆಗೆ ಮುಂದಾದ ಶಾಹೀನ್ ಅಫ್ರಿದಿ..! ಯಾಕೆ ಹೀಗೆ?

ಪಾಕಿಸ್ತಾನದ ಮಾರಕ ವೇಗಿ ಶಾಹೀನ್ ಅಫ್ರಿದಿ, ಆಸ್ಟ್ರೇಲಿಯಾ ಎದುರು 10 ಓವರ್ ಬೌಲಿಂಗ್ ಮಾಡಿ 54 ರನ್ ನೀಡಿ 5 ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. 

ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪರ ಅತಿಹೆಚ್ಚು ಬಾರಿ 5+ ವಿಕೆಟ್ ಕಬಳಿಸಿದ ಬೌಲರ್‌ಗಳು:

ಶಾಹಿದ್ ಅಫ್ರಿದಿ: 2 ಬಾರಿ
ಶಾಹೀನ್ ಅಫ್ರಿದಿ: 2 ಬಾರಿ

ಶಾಹೀನ್ ಅಫ್ರಿದಿ ಮಾವ ಶಾಹಿದ್ ಅಫ್ರಿದಿ: ಪಾಕಿಸ್ತಾನ ಕ್ರಿಕೆಟ್‌ನ ದಿಗ್ಗಜ ಆಲ್ರೌಂಡರ್ ಶಾಹಿದ್ ಅಫ್ರಿದಿ ಪುತ್ರಿ ಅನ್ಷಾ ಅಫ್ರಿದಿಯನ್ನು ಪಾಕ್ ಯುವ ಎಡಗೈ ವೇಗಿ ಶಾಹೀನ್ ಅಫ್ರಿದಿ ಕಳೆದ ಫೆಬ್ರವರಿ 03ರಂದು ವಿವಾಹವಾಗಿದ್ದರು. ಇದೀಗ ತಮ್ಮ ಮಾವನ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಸರಿಗಟ್ಟುವಲ್ಲಿ ಶಾಹೀನ್ ಯಶಸ್ವಿಯಾಗಿದ್ದಾರೆ.

ವಿರಾಟ್ ಕೊಹ್ಲಿ ಶತಕಕ್ಕೆ ಮುನ್ನ ಅಂಪೈರ್ ವೈಡ್‌ ಕೊಡಲಿಲ್ಲವೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಬ್ಯಾಟರ್‌ಗಳ ಸ್ವರ್ಗ ಚಿನ್ನಸ್ವಾಮಿ ಕ್ರೀಡಾಂಗಣವು ಹತ್ತಿರತ್ತಿರ 700 ರನ್‌ಗಳಿಗೆ ಸಾಕ್ಷಿಯಾಯಿತು. ಟಾಸ್‌ ಗೆದ್ದು ಮೊದಲು ಫೀಲ್ಡ್‌ ಮಾಡುವ ಪಾಕಿಸ್ತಾನದ ನಿರ್ಧಾರ ಕೈಹಿಡಿಯಲಿಲ್ಲ. ವಾರ್ನರ್‌ ಹಾಗೂ ಮಾರ್ಷ್ ಸ್ಫೋಟಕ ಶತಕಗಳ ನೆರವಿನಿಂದ ಆಸೀಸ್‌ 50 ಓವರಲ್ಲಿ 9 ವಿಕೆಟ್‌ಗೆ 367 ರನ್‌ ಚಚ್ಚಿತು. ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ 45.3 ಓವರಲ್ಲಿ 305 ರನ್‌ಗೆ ಆಲೌಟ್‌ ಆಯಿತು.

ಇಮಾಮ್‌ ಉಲ್‌-ಹಕ್‌ ಹಾಗೂ ಅಬ್ದುಲ್ಲಾ ಶಫೀಕ್‌ ಮೊದಲ ವಿಕೆಟ್‌ಗೆ 134 ರನ್‌ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಮಾರ್ಕಸ್‌ ಸ್ಟೋಯ್ನಿಸ್‌ ಆರಂಭಿಕರನ್ನು ಪೆವಿಲಿಯನ್‌ಗಟ್ಟಿದರೆ, ಆ್ಯಡಂ ಜಂಪಾ ತಂಡದ ಬ್ಯಾಟಿಂಗ್‌ ಆಧಾರಸ್ತಂಭಗಳಾದ ಬಾಬರ್ ಆಜಂ, ಮೊಹಮದ್‌ ರಿಜ್ವಾನ್‌ರನ್ನು ಔಟ್‌ ಮಾಡುವುದರ ಜೊತೆ ಅಪಾಯಕಾರಿ ಇಫ್ತಿಕಾರ್‌ ಅಹ್ಮದ್‌ರನ್ನೂ ಔಟ್‌ ಮಾಡಿ ಆಸೀಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪಾಕಿಸ್ತಾನ ಪೂರ್ತಿ 50 ಓವರ್‌ ಬ್ಯಾಟ್‌ ಮಾಡದೆ ಸೋಲೊಪ್ಪಿಕೊಂಡಿತು. ಆ್ಯಡಂ ಜಂಪಾ 4 ವಿಕೆಟ್‌ ಕಬಳಿಸಿ ಮಿಂಚಿದರು.

ಸತತ 2 ಸೋಲುಗಳಿಂದ ವಿಶ್ವಕಪ್‌ ಅಭಿಯಾನ ಆರಂಭಿಸಿದ್ದ ಆಸೀಸ್‌, ಸತತ 2 ಜಯಗಳೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದರೆ, ಸತತ 2 ಜಯಗಳೊಂದಿಗೆ ಶುಭಾರಂಭ ಮಾಡಿದ್ದ ಪಾಕಿಸ್ತಾನ ಈಗ ಸತತ 2ನೇ ಸೋಲಿನೊಂದಿಗೆ ಪಟ್ಟಿಯಲ್ಲಿ ಕೆಳಗಿಳಿದಿದೆ.
 

Follow Us:
Download App:
  • android
  • ios