2012ರಲ್ಲಿ ಶಾರುಖ್ ಖಾನ್ ವಾಂಖೆಡೆ ಸ್ಟೇಡಿಯಂನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದರು. ಈ ಘಟನೆಯಿಂದಾಗಿ 5 ವರ್ಷಗಳ ನಿಷೇಧ ವಿಧಿಸಲಾಗಿದ್ದರೂ, 3 ವರ್ಷಗಳಲ್ಲೇ ಅದನ್ನು ತೆರವುಗೊಳಿಸಲಾಯಿತು. ನಿಷೇಧದ ಹಿನ್ನೆಲೆ ಮತ್ತು ಶಾರುಖ್ ಪ್ರತಿಕ್ರಿಯೆ ಇಲ್ಲಿದೆ.

ಬೆಂಗಳೂರು(ನ.25): ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ (MCA) ನಡುವಿನ ವಾಂಖೆಡೆ ಸ್ಟೇಡಿಯಂ ವಿವಾದ ಭಾರತೀಯ ಕ್ರಿಕೆಟ್‌ನ ಅತ್ಯಂತ ಚರ್ಚೆಗೆ ಒಳಗಾದ ಘಟನೆಯಾಗಿದೆ. 2012ರಲ್ಲಿ ನಡೆದ ಈ ಘಟನೆಯ ಬಳಿಕ ಶಾರುಖ್ ಖಾನ್‌ಗೆ ಐದು ವರ್ಷಗಳ ಕಾಲ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿತ್ತು. ಆದರೆ, ಮೂರು ವರ್ಷಗಳ ಬಳಿಕವೇ ಈ ನಿಷೇಧವನ್ನು ತೆರವುಗೊಳಿಸಲಾಯಿತು. ಇದು ಕೂಡಾ ಚರ್ಚೆ

ಶಾರುಖ್ ಖಾನ್ ಮತ್ತು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದೇನು?

2012ರ ಮೇ 16ರಂದು ಐಪಿಎಲ್ ಪಂದ್ಯದಲ್ಲಿ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತಾ ನೈಟ್ ರೈಡರ್ಸ್ (KKR), ಮುಂಬೈ ಇಂಡಿಯನ್ಸ್‌ ವಿರುದ್ಧ ಗೆಲುವು ಸಾಧಿಸಿತ್ತು. ಪಂದ್ಯದ ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿ ಶಾರುಖ್ ಖಾನ್, ಭದ್ರತಾ ಸಿಬ್ಬಂದಿ ಮತ್ತು MCA ಅಧಿಕಾರಿಗಳ ನಡುವೆ ವಾಗ್ವಾದ ನಡೆದಿತ್ತು. MCA ಆರೋಪದ ಪ್ರಕಾರ, ಶಾರುಖ್ ಖಾನ್ ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಸರಿಯಾದ ಮಾನ್ಯತೆ ಅಥವಾ ಪ್ರವೇಶ ಅನುಮತಿ ಇಲ್ಲದೆ ಮೈದಾನಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಅಲ್ಲದೆ, ವಾಗ್ವಾದದ ವೇಳೆ ಅವರು ಮದ್ಯದ ಅಮಲಿನಲ್ಲಿದ್ದರು ಎಂದು MCA ಆರೋಪಿಸಿತ್ತು.

ಶಾರುಖ್ ಖಾನ್ ನೀಡಿದ್ದ ಸ್ಪಷ್ಟನೆ ಏನು?

MCA ಆರೋಪಗಳನ್ನು ಶಾರುಖ್ ಖಾನ್ ನಿರಾಕರಿಸಿದ್ದರು. ತಾನು ಮದ್ಯ ಸೇವಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದ ಅವರು, ತಮ್ಮ ಮಕ್ಕಳೊಂದಿಗೆ ಸ್ಟೇಡಿಯಂಗೆ ಬಂದಿದ್ದ ಸಂದರ್ಭದಲ್ಲಿ ಅವರೊಂದಿಗೆ ಭದ್ರತಾ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಲಾಗಿದೆ ಎಂಬ ಕಾರಣಕ್ಕೆ ತಾಳ್ಮೆ ಕಳೆದುಕೊಂಡಿದ್ದಾಗಿ ಹೇಳಿದ್ದರು. ಭದ್ರತಾ ಸಿಬ್ಬಂದಿಯೊಬ್ಬರು ಆಕ್ಷೇಪಾರ್ಹ ಪದ ಬಳಸಿದ್ದು, ಅದು ತಮ್ಮನ್ನು ಅವಮಾನಿಸುವ ರೀತಿಯಲ್ಲಿತ್ತು ಎಂದು ಶಾರುಖ್ ಖಾನ್ ಆರೋಪಿಸಿದ್ದರು. ಮಕ್ಕಳೊಂದಿಗೆ ಇದ್ದ ಕಾರಣ ಅವರ ವರ್ತನೆಗೆ ತಾನು ಪ್ರತಿಕ್ರಿಯಿಸಬೇಕಾಯಿತು ಎಂದು ಶಾರುಖ್ ಖಾನ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು.

ಶಾರುಖ್ ಖಾನ್‌ಗೆ 5 ವರ್ಷಗಳ ನಿಷೇಧ

ಈ ಘಟನೆ ಬಳಿಕ 2012ರ ಮೇ ತಿಂಗಳಲ್ಲಿ MCA ಶಾರುಖ್ ಖಾನ್‌ಗೆ ವಾಂಖೆಡೆ ಸ್ಟೇಡಿಯಂ ಪ್ರವೇಶದ ಮೇಲೆ ಐದು ವರ್ಷಗಳ ನಿಷೇಧ ವಿಧಿಸಿತ್ತು. ಆಗ MCA ಅಧ್ಯಕ್ಷರಾಗಿದ್ದ ವಿಲಾಸರಾವ್ ದೇಶಮುಖ್ ಅವರ ನೇತೃತ್ವದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಐದು ವರ್ಷಗಳ ನಿಷೇಧವನ್ನು ಪೂರ್ಣಗೊಳಿಸುವ ಮುನ್ನವೇ 2015ರ ಆಗಸ್ಟ್‌ನಲ್ಲಿ MCA ನಿಷೇಧವನ್ನು ತೆರವುಗೊಳಿಸಿತು. ಹೀಗಾಗಿ, ನಿಷೇಧ ವಿಧಿಸಿದ ಸುಮಾರು ಮೂರು ವರ್ಷಗಳಲ್ಲೇ ಶಾರುಖ್ ಖಾನ್‌ಗೆ ಮತ್ತೆ ವಾಂಖೆಡೆ ಸ್ಟೇಡಿಯಂ ಪ್ರವೇಶಿಸಲು ಅವಕಾಶ ದೊರೆಯಿತು.

ಮೂರು ವರ್ಷಗಳಲ್ಲೇ ನಿಷೇಧ ತೆರವುಗೊಳಿಸಿದ್ದೇಕೆ?

ಐದು ವರ್ಷಗಳ ನಿಷೇಧದಲ್ಲಿ ಮೂರು ವರ್ಷಗಳ ಬಳಿಕ ವಿನಾಯಿತಿ ನೀಡುವ ಅವಕಾಶವಿತ್ತು. ಈ ನಿಯಮದ ಆಧಾರದಲ್ಲಿ ನಿಷೇಧ ತೆರವುಗೊಳಿಸಲಾಗಿದೆ ಎಂಬ ಮಾಹಿತಿ ಹೊರಬಂದಿತ್ತು. ಇದೇ ವೇಳೆ, ಶಾರುಖ್ ಖಾನ್ ನಿಷೇಧ ತೆರವುಗೊಳಿಸುವಂತೆ ಶರದ್ ಪವಾರ್ ಅವರನ್ನು ಸಂಪರ್ಕಿಸಿದ್ದರು ಎಂಬ ವರದಿಗಳೂ ಪ್ರಕಟವಾಗಿದ್ದವು. ನಿಷೇಧ ತೆರವುಗೊಂಡ ಬಳಿಕ ಶಾರುಖ್ ಖಾನ್ MCAಗೆ ಸಾರ್ವಜನಿಕವಾಗಿ ಧನ್ಯವಾದ ತಿಳಿಸಿದ್ದರು. ಸಂಸ್ಥೆಯ “ಉದಾರತೆ”ಗೆ ಕೃತಜ್ಞತೆ ಸಲ್ಲಿಸಿದ್ದರು. ಇದೀಗ ಐಪಿಎಲ್ ವೇಳೆ ಶಾರುಕ್ ಖಾನ್ ಮುಂಬೈನ ವಾಂಖೆಡೆ ಮೈದಾನದಲ್ಲಿ ತಮ್ಮ ಕೆಕೆಆರ್ ತಂಡವನ್ನು ಹುರಿದುಂಬಿಸಲು ಬರುವುದು ಸಾಮಾನ್ಯವಾಗಿದೆ.