ನವದೆಹಲಿ(ಜೂ.02): ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಬುಧವಾರ(ಜೂ.2) ಮುಂಬೈನಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಲಿವೆ. ಉಭಯ ತಂಡಗಳ ಪಾಲಿಗೆ ಇದು ದೀರ್ಘಕಾಲಿಕ ಸರಣಿ ಎನಿಸಲಿದೆ. ವಿರಾಟ್ ಕೊಹ್ಲಿ ಪಡೆ ಸುಮಾರು 4 ತಿಂಗಳುಗಳ ಕಾಲ ಇಂಗ್ಲೆಂಡ್‌ನಲ್ಲಿರಲಿದೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಜೂನ್ 18ರಿಂದ ನ್ಯೂಜಿಲೆಂಡ್‌ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡಲಿದೆ. ಇದಾದ ಬಳಿಕ ಆಗಸ್ಟ್‌ 04ರಿಂದ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮಹಿಳಾ ತಂಡ ಇಂಗ್ಲೆಂಡ್‌ ವಿರುದ್ಧ 1 ಟೆಸ್ಟ್‌, 3 ಏಕದಿನ ಹಾಗೂ 3 ಟಿ20 ಸರಣಿಯನ್ನು ಆಡಲಿದೆ. ಕ್ರಿಕೆಟಿಗರ ಕುಟುಂಬ ಸದಸ್ಯರಿಗೂ ತಂಡದೊಂದಿಗೆ ಪ್ರಯಾಣಿಸಲು ಬಿಸಿಸಿಐ ಅನುಮತಿ ನೀಡಿದೆ. 

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನನಗೆ ವಿಶ್ವಕಪ್‌ ಫೈನಲ್‌ ಇದ್ದಂತೆ: ನೀಲ್ ವ್ಯಾಗ್ನರ್

ಇದೇ ವೇಳೆ ತಂಡದೊಂದಿಗೆ ತೆರಳದ ಸದಸ್ಯರಿಗೆ ಕಡ್ಡಾಯವಾಗಿ 10 ದಿನಗಳ ಕಠಿಣ ಕ್ವಾರಂಟೈನ್‌ ನಿಯಮವಿರುವ ಕಾರಣ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ವೀಕ್ಷಿಸಲು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ‍್ಯದರ್ಶಿ ಜಯ್‌ ಶಾ ಸೇರಿ ಯಾವುದೇ ಅಧಿಕಾರಿಗಳು ತೆರಳುವುದಿಲ್ಲ.

ಮುಂಬೈನಿಂದ ಲಂಡನ್‌ಗೆ ತೆರಳಲಿರುವ ತಂಡಗಳು, ನೇರವಾಗಿ ಸೌಥಾಂಪ್ಟನ್‌ಗೆ ಪ್ರಯಾಣಿಸಲಿವೆ. 3 ದಿನಗಳ ಕಠಿಣ ಕ್ವಾರಂಟೈನ್‌ ಬಳಿಕ ಜಿಮ್‌ ಹಾಗೂ ಇತರ ಫಿಟ್ನೆಸ್‌ ಅಭ್ಯಾಸಗಳನ್ನು ಆರಂಭಿಸಲಿವೆ. ಮಹಿಳಾ ತಂಡ ಕ್ವಾರಂಟೈನ್‌ ಬಳಿಕ ಬ್ರಿಸ್ಟಲ್‌ಗೆ ತೆರಳಲಿದೆ.