ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ಗಾಯದ ಸಮಸ್ಯೆಯಿಂದಾಗಿ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್‌ಗೆ ಅವಕಾಶ ಸಿಕ್ಕಿದೆ. ಸ್ಪಿನ್‌ಗೆ ಉತ್ತಮವಾಗಿ ಆಡುವ ಸರ್ಫರಾಜ್ ಖಾನ್ ಮೊದಲ ಟೆಸ್ಟ್‌ನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಇದರಿಂದಾಗಿ ಧ್ರುವ್ ಜುರೆಲ್ ಬೆಂಚ್ ಕಾಯಬೇಕಾಗಬಹುದು.

ಕೊಲಂಬೊ: ಶುಭ್‌ಮನ್ ಗಿಲ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಲಂಕಾ ಪ್ರವಾಸದಲ್ಲಿ ಭಾರತ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಹೀಗಿರುವಾಗಲೇ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸಾಯಿ ಸುದರ್ಶನ್ ಗಾಯದ ಸಮಸ್ಯೆಯಿಂದಾಗಿ ಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಬುಮ್ರಾ ಬದಲಿಗೆ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕೀಬ್ ನಬಿ ಸ್ಥಾನ ಪಡೆದಿದ್ದರೇ, ಸಾಯಿ ಸುದರ್ಶನ್ ಬದಲಿಗೆ ಮುಂಬೈ ಮೂಲದ ಸರ್ಫರಾಜ್ ಖಾನ್‌ಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ಇದೀಗ ಸರ್ಫರಾಜ್ ಖಾನ್ ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಹೀಗಾದಲ್ಲಿ ಓರ್ವ ಆಟಗಾರ ಬೆಂಚ್ ಕಾಯಿಸಬೇಕಾಗಿ ಬರಲಿದೆ.

ಸರ್ಫರಾಜ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ:

ಸದ್ಯ ಬಿಸಿಸಿಐ ಸಾಯಿ ಸುದರ್ಶನ್‌ಗೆ ಬದಲಿ ಆಟಗಾರನ ರೂಪದಲ್ಲಿ ಸರ್ಫರಾಜ್ ಖಾನ್‌ಗೆ ಮಣೆ ಹಾಕಿದೆ. ಈ ಮೊದಲು ಸರ್ಫರಾಜ್ ಖಾನ್ 2024ರಲ್ಲಿ ನ್ಯೂಜಿಲೆಂಡ್ ಎದುರು ಕೊನೆಯ ಭಾರತ ಟೆಸ್ಟ್‌ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇದಾದ ಬಳಿಕ ಆಸೀಸ್ ಪ್ರವಾಸದಲ್ಲಿ ಸರ್ಫರಾಜ್ ಸ್ಥಾನ ಪಡೆದಿದ್ದರಾದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇನ್ನು ಸಾಯಿ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ ಲಂಕಾ ಇಲೆವನ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಶತಕ ಸಿಡಿಸುವ ಮೂಲಕ ಮೂರನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಿದ್ದೂ ಕೆಲ ಮಾಧ್ಯಮ ವರದಿಗಳ ಪ್ರಕಾರ ಸರ್ಫರಾಜ್ ಖಾನ್, ಲಂಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಧ್ರುವ್ ಜುರೆಲ್ ಔಟ್, ಸರ್ಫರಾಜ್ ಖಾನ್ ಇನ್:

ಸರ್ಫರಾಜ್ ಖಾನ್ ಸ್ಪಿನ್ ಬೌಲರ್‌ಗಳನ್ನು ಅತ್ಯಂತ ದಿಟ್ಟವಾಗಿ ಎದುರಿಸುವ ಸಾಮಾರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಸರ್ಫರಾಜ್ ಖಾನ್ ಅವರನ್ನು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಹೀಗಾದಲ್ಲಿ ಧ್ರುವ್ ಜುರೆಲ್‌ ಅವರನ್ನು ಹೊರಗಿಟ್ಟು ಸರ್ಫರಾಜ್ ಖಾನ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಹೀಗಾದಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ. ಧ್ರುವ್ ಜುರೆಲ್, ಲಂಕಾ ಎದುರಿನ ಅಭ್ಯಾಸ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಸರ್ಫರಾಜ್ ಖಾನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ.

ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ:

ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಸಾರಾನ್ಶ್‌ ಜೈನ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಗುರ್ನೂರ್ ಬ್ರಾರ್.