ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಲ್ಲಿ ಬದಲಾವಣೆಯಾಗಿದ್ದು, ಗಾಯಗೊಂಡ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಆಯ್ಕೆಯಾಗಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆದ ಸರ್ಫರಾಜ್ ಆಯ್ಕೆ, ತಂಡದ ಮೂರನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನದ ಬಗ್ಗೆ ಕೋಚ್ ಗೌತಮ್ ಗಂಭೀರ್‌ಗೆ ಗೊಂದಲ ಸೃಷ್ಟಿಸಿದೆ.
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳಾಗಿದೆ. ಯುವ ಆಟಗಾರ ಸಾಯಿ ಸುದರ್ಶನ್ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದು, ಈ ಸ್ಥಾನಕ್ಕೆ ಮಿಡಲ್ ಅರ್ಡರ್ ಬ್ಯಾಟರ್ ಸರ್ಫರಾಜ್ ಖಾನ್‌ನನ್ನು ಆಯ್ಕೆ ಮಾಡಿದ್ದಾರೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮಹತ್ವ ನಿರ್ಧಾರ ತೆಗೆದುಕೊಂಡಿದೆ. 2024ರಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಸರ್ಫರಾಜ್ ಖಾನ್, ಸಮೀತ ಅವಕಾಶಗಳನ್ನು ಪಡೆದುಕೊಂಡು ಸಿಕ್ಕ ಅವಕಾಶಗಳಲ್ಲಿಯೇ ಮಿಂಚಿದ್ದರು. ಆದರೆ ಅವರ ಸ್ಥಾನ ಟೀಂ ಇಂಡಿಯಾದಲ್ಲಿ ಖಾಯಂ ಆಗಿರಲಿಲ್ಲ. ಆದರೆ ಈಗ ಮತ್ತೊಂದು ಅವಕಾಶ ಸರ್ಫರಾಜ್ ಖಾನ್‌ಗೆ ಲಭ್ಯವಾಗಿದೆ. ಆದರೆ ಸರ್ಫರಾಜ್ ಖಾನ್ ಆಯ್ಕೆ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ಗೆ ಹೊಸ ತಲೆನೋವು ತಂದಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫಿಕ್ಸ್ ಆಯ್ತಾ ಪಡಿಕ್ಕಲ್ ಸ್ಥಾನ?
ಇದಕ್ಕೂ ಮುನ್ನ ಸುದರ್ಶನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲು ಗಂಭೀರ್ ಮುಂದಾಗಿದ್ದರು. ಆದರೆ ಈಗ ಆತನ ಸ್ಥಾನದಲ್ಲಿ ಬಂದಿರುವ ಸರ್ಫರಾಜ್ಗೆ ಈ ಸ್ಥಾನದಲ್ಲಿ ಆಡಿಸುವುದು ಅನುಮಾನ. ಏಕೆಂದರೆ ಸರ್ಫರಾಜ್ ಖಾನ್ ಹೆಚ್ಚು ಮಿಡಲ್ ಅರ್ಡರ್ ಅಂದರೆ ನಂ.05 ಅಥವಾ ನಂ.06ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಈಗ ಖಾಲಿ ಆಗಿರುವ ಮೂರನೇ ಕ್ರಮಾಂಕದಲ್ಲಿ ಶುಭ್‌ಮನ್ ಗಿಲ್ ಅವರನ್ನು ಆಡಿಸುವುದು ಅಥವಾ ಯುವ ಆಟಗಾರ ದೇವದತ್ ಪಡಿಕ್ಕಲ್ ಅವರಿಗೆ ಅವಕಾಶ ನೀಡುವ ಬಗ್ಗೆ ಗಂಭೀರ್ ಚಿಂತನೆ ಮಾಡಬಹುದು. ಏಕೆಂದರೆ ಅಭ್ಯಾಸ ಪಂದ್ಯದಲ್ಲಿ ಪಡಿಕ್ಕಲ್ ಶತಕ ಸಿಡಿಸಿ ಗಮನಸೆಳೆದಿದ್ದು, ಆತನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಮಿಡಲ್ ಅರ್ಡರ್‌ನಲ್ಲಿಯೇ ಸರ್ಫರಾಜ್‌ಗೆ ಚಾನ್ಸ್!
ಶ್ರೀಲಂಕಾ ಇಲೆವೆನ್ ತಂಡದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಪಡಿಕ್ಕಲ್ 3ನೇ ಕ್ರಮಾಂಕದಲ್ಲಿ ಆಡಿದ್ದು, ಎರಡನೇ ಇನ್ನಿಂಗ್ಸ್ ನಲ್ಲಿ ರಿಷಭ್ ಪಂತ್ ಅವರನ್ನು ಕಣಕ್ಕೆ ಇಳಿಸಿದ್ದರು. ಮತ್ತೊಂದು ಕಡೆ ಸರ್ಫರಾಜ್ ಖಾನ್ ತನ್ನ ವೃತ್ತಿಜೀವನದಲ್ಲಿ 6 ಅಂತರಾಷ್ಟ್ರೀಯ ಇನ್ನಿಂಗ್ಸ್ ಗಳನ್ನು ಆಡಿದ್ದು, ಇದರಲ್ಲಿ 5-6ನೇ ಕ್ರಮಾಂಕದಲ್ಲಿಯೇ ಆಡಿದ್ದರು. ಕೆಲವೊಮ್ಮೆ ಮಾತ್ರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. ನ್ಯೂಜಿಲೆಂಡ್ ವಿರುದ್ಧ ತಮ್ಮ ಏಕೈಕ ಟೆಸ್ಟ್ ಶತಕ ಸಿಡಿಸಿದ್ದ ವೇಳೆಯೂ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಈ ಹಿನ್ನೆಲೆಯಿಂದಲೇ ಅವರನ್ನು ಮತ್ತೆ ಮಿಡಲ್ ಅರ್ಡರ್‌ನಲ್ಲಿಯೇ ಆಡಿಸುವ ಅವಕಾಶ ಹೆಚ್ಚಿರುತ್ತದೆ.
ಪ್ಲೇಯಿಂಗ್ ಇಲೆವೆನ್ ಹೇಗೆ ಇರುತ್ತೆ?
ಮೊದಲ ಟೆಸ್ಟ್ ಪಂದ್ಯವೂ ಗಾಲೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ಅಂತಿಮ ಪ್ಲೇಯಿಂಗ್ ಇಲೆವೆನ್ ಹೇಗಿರುತ್ತದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆರಂಭಿಕರಾಗಿ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರೆ, ಪಡಿಕ್ಕಲ್ ಒನ್ ಡೌನ್, ನಾಯಕ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಅವಕಾಶವಿದೆ. ವಿಕೆಟ್ ಕೀಪರ್ ಜೊತೆಗೆ ಐದನೇ ಕ್ರಮಾಂಕದಲ್ಲಿ ಪಂತ್ ಅಥವಾ ಜುರೇಲ್, 6ನೇ ಕ್ರಮಾಂಕದಲ್ಲಿ ಜಡೇಜಾ, 7ನೇ ಸ್ಥಾನದಲ್ಲಿ ಆಲ್‌ರೌಂಡರ್ ಕೋಟಾದಲ್ಲಿ ಸರಾಂಶ್ ಜೈನ್ಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಜಡೇಜಾ, ಕುಲ್ಡೀಪ್ ಯಾದವ್ ಅವರು ಲೆಫ್ಟ್ ಆರ್ಮ್ ಸ್ಪಿನ್ನರ್ ಗಳು ಇರುವುದರಿಂದ ಆಫ್ ಸ್ಪಿನ್ನರ್ ಆಗಿರುವ ಜೈನ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್, ವೇಗದ ಬೌಲಿಂಗ್ನಲ್ಲಿ ಸಿರಾಜ್, ಪ್ರಸಿದ್ಧ್ ಕೃಷ್ಣ, ಬ್ರಾರ್ ಆಡೋದು ಖಚಿತವಾಗಿದೆ. ಇದರೊಂದಿಗೆ ನಬೀ ಪಾದಾರ್ಪಣೆಗೆ ಇನ್ನು ಕಾಯಬೇಕಾಗುತ್ತದೆ. ಸಿರಾಜ್ ತಂಡಕ್ಕೆ ವಾಪಸ್ ಆದರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲು ತೀವ್ರಪೈಪೋಟಿ ಎದುರಿಸಿದ್ದಾರೆ.


