ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಭಾರತದ ಮಾಜಿ ನಾಯಕ ಅಜಿಂಕ್ಯ ರಹಾನೆ ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅವರು ಸ್ಟೀವ್ ವಾ ಮತ್ತು ಅಭಿಷೇಕ್ ಬಚ್ಚನ್ ಸಹ-ಮಾಲೀಕತ್ವದ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡವನ್ನು ಸೇರಿಕೊಂಡಿದ್ದು, ತಮ್ಮ ಅನುಭವದಿಂದ ತಂಡಕ್ಕೆ ಬಲ ತುಂಬಲಿದ್ದಾರೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕೆಲವೇ ದಿನಗಳಲ್ಲಿ, ಭಾರತದ ಮಾಜಿ ನಾಯಕ ಅಜಿಂಕ್ಯ ರಹಾನೆ ವಿದೇಶಿ ಲೀಗ್‌ವೊಂದಕ್ಕೆ ಸಹಿ ಹಾಕುವ ಮೂಲಕ ಭರ್ಜರಿ ಸರ್‌ಪ್ರೈಸ್ ನೀಡಿದ್ದಾರೆ. ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನಲ್ಲಿ ಅವರು ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಈ ತಂಡಕ್ಕೆ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಸ್ಟೀವ್ ವಾ ಮತ್ತು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸಹ-ಮಾಲೀಕರಾಗಿದ್ದಾರೆ. ಇದು ನೆದರ್‌ಲ್ಯಾಂಡ್ಸ್ ಮೂಲದ ಫ್ರಾಂಚೈಸಿ ಆಗಿದೆ. 38 ವರ್ಷದ ರಹಾನೆ, ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಂದ ನಿವೃತ್ತಿ ಘೋಷಿಸಿದ್ದರು. ಭಾರತಕ್ಕಾಗಿ 190ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ರಹಾನೆ ಅವರ ಉಪಸ್ಥಿತಿಯಿಂದ ಯೂರೋಪ್‌ನಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಾಗಲಿದೆ ಎಂದು ತಂಡ ಭಾವಿಸಿದೆ.

ಹೊಸ ಟೂರ್ನಿ ಬಗ್ಗೆ ಖುಷಿ ವ್ಯಕ್ತಪಡಿಸಿದ ರಹಾನೆ

'ಕ್ರಿಕೆಟ್ ನನಗೆ ಬಹಳಷ್ಟು ಕೊಟ್ಟಿದೆ. ಆಟಕ್ಕೆ ಏನನ್ನಾದರೂ ಹಿಂದಿರುಗಿಸುವುದು ಆಟಗಾರನಾಗಿ ನನ್ನ ಜವಾಬ್ದಾರಿ. ಯೂರೋಪ್‌ನಲ್ಲಿ ಕ್ರಿಕೆಟ್ ಈಗಷ್ಟೇ ಬೆಳೆಯುತ್ತಿದೆ. ಮೈದಾನದ ಒಳಗೆ ಮತ್ತು ಹೊರಗೆ ಉತ್ತಮ ಪ್ರಭಾವ ಬೀರಲು ಬಯಸುವ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡದ ಭಾಗವಾಗಲು ನನಗೆ ಸಂತೋಷವಿದೆ' ಎಂದು ರಹಾನೆ ಹೇಳಿದ್ದಾರೆ.

ತಂಡದ ಸಹ-ಮಾಲೀಕ ಸ್ಟೀವ್ ವಾ ಮಾತನಾಡಿ, 'ಒಬ್ಬ ವೃತ್ತಿಪರ ಕ್ರಿಕೆಟಿಗನಲ್ಲಿ ತಂಡವು ಬಯಸುವ ಎಲ್ಲಾ ಗುಣಗಳು ರಹಾನೆಯಲ್ಲಿದೆ. ಒತ್ತಡದ ಸಂದರ್ಭಗಳಲ್ಲಿ ಶಾಂತವಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಅವರ ಸಾಮರ್ಥ್ಯ ಶ್ಲಾಘನೀಯ. ಅವರ ಅನುಭವ ಮತ್ತು ನಾಯಕತ್ವದ ಗುಣ ತಂಡಕ್ಕೆ ದೊಡ್ಡ ಶಕ್ತಿಯಾಗಲಿದೆ' ಎಂದು ತಿಳಿಸಿದರು. ಸಹ-ಮಾಲೀಕ ಅಭಿಷೇಕ್ ಬಚ್ಚನ್, 'ರಹಾನೆಯಂತಹ ವಿಶ್ವದರ್ಜೆಯ ಆಟಗಾರನ ಆಗಮನವು ಟೂರ್ನಿಯ ರೋಚಕತೆಯನ್ನು ಹೆಚ್ಚಿಸುವುದಲ್ಲದೆ, ಯೂರೋಪ್‌ನ ಮುಂದಿನ ಪೀಳಿಗೆಯ ಯುವ ಆಟಗಾರರಿಗೆ ದೊಡ್ಡ ಸ್ಫೂರ್ತಿಯಾಗಲಿದೆ' ಎಂದು ಹೇಳಿದರು.

2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ, ಪ್ರಮುಖ ಆಟಗಾರರು ಗಾಯಗೊಂಡಿದ್ದರೂ, ಅಜಿಂಕ್ಯ ರಹಾನೆ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ 2-1 ಅಂತರದ ಐತಿಹಾಸಿಕ ಸರಣಿ ಜಯ ತಂದುಕೊಟ್ಟಿದ್ದರು. ಯೂರೋಪ್ ನೆಲದಲ್ಲೂ ಅದೇ ಅನುಭವದೊಂದಿಗೆ ಅವರು ಮಿಂಚಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ ಆರಂಭ ಯಾವಾಗ?

ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ ಟೂರ್ನಿಯು ಇದೇ ಆಗಸ್ಟ್‌ 26ರಿಂದ ಆರಂಭವಾಗಲಿದೆ. ಇನ್ನು ಫೈನಲ್ ಪಂದ್ಯವು ಸೆಪ್ಟೆಂಬರ್ 20ರಂದು ನಡೆಯಲಿದೆ. ಚೊಚ್ಚಲ ಸೀಸನ್‌ನ ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ ಟೂರ್ನಿಯು ಒಟ್ಟು 26 ದಿನಗಳ ಕಾಲ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳುತ್ತಿವೆ. ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಾಟಗಳು ನಡೆಯಲಿದ್ದು, ಇದಾದ ಬಳಿಕ ಕ್ವಾಲಿಫೈಯರ್ ಹಾಗೂ ಫೈನಲ್ ಮ್ಯಾಚ್ ನಡೆಯಲಿದೆ.