ಸಂಜಯ್ ರಾವತ್ ಏಷ್ಯಾಕಪ್ ಟೂರ್ನಿಯ ಭಾರತ-ಪಾಕ್ ಪಂದ್ಯದಲ್ಲಿ 1.5 ಲಕ್ಷ ಕೋಟಿ ರೂ. ಬೆಟ್ಟಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. ಪಂದ್ಯಕ್ಕೂ ಮುನ್ನ 25,000 ಕೋಟಿ ರೂ. ಪಾಕಿಸ್ತಾನಕ್ಕೆ ತಲುಪಿದೆ ಎಂದು ಹೇಳಿದ್ದಾರೆ. 

ಮುಂಬೈ: ಶಿವಸೇನಾ ಸಂಸದ ಹಾಗೂ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಂಜಯ್ ರಾವತ್, ಇದೀಗ ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ 1.5 ಲಕ್ಷ ಕೋಟಿ ರುಪಾಯಿ ಗ್ಯಾಂಬ್ಲಿಂಗ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸೆಪ್ಟೆಂಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್ ಭರ್ಜರಿ ಜಯ ಸಾಧಿಸಿತ್ತು.

ಸಂಜಯ್ ರಾವತ್ ಗಂಭೀರ ಆರೋಪ

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೂ ಮೊದಲೇ 25,000 ಕೋಟಿ ರುಪಾಯಿ ಪಾಕಿಸ್ತಾನಕ್ಕೆ ತಲುಪಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ. ಪತ್ರಕರ್ತರ ಜತೆ ಮಾತನಾಡಿದ ರಾಜ್ಯಸಭಾ ಸಂಸದ, ಇಂಡೋ-ಪಾಕ್ ಮ್ಯಾಚ್‌ನಿಂದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ 1,000 ಕೋಟಿ ರುಪಾಯಿ, ಈ ಹಣವನ್ನು ಅವರು ನಮ್ಮ ವಿರುದ್ದವೇ ಬಳಸಿಕೊಳ್ಳಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

"ನಿನ್ನೆ ನಡೆದ ಮ್ಯಾಚ್‌ನಲ್ಲಿ ಸುಮಾರು 1.5 ಲಕ್ಷ ಕೋಟಿ ರುಪಾಯಿ ಗ್ಯಾಂಬ್ಲಿಂಗ್ ನಡೆದಿದೆ. ಇದರಲ್ಲಿ 25,000 ಕೋಟಿ ರುಪಾಯಿ ಪಾಕಿಸ್ತಾನ ತಲುಪಿದೆ. ಈ ಹಣವನ್ನು ಅವರು ನಮ್ಮ ವಿರುದ್ದವೇ ಬಳಸುತ್ತಾರೆ. ಇದು ಸರ್ಕಾರಕ್ಕಾಗಲಿ ಅಥವಾ ಬಿಸಿಸಿಐಗಾಗಲಿ ತಿಳಿದಿಲ್ಲವೇ? ಎಂದು ರಾವತ್ ಪ್ರಶ್ನಿಸಿದ್ದಾರೆ.

ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್

ದುಬೈ: ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಮತ್ತೆ ಪರಾಕ್ರಮ ಮೆರೆದಿದೆ. ಪಹಲ್ಗಾಂ ಉಗ್ರ ದಾಳಿಯಿಂದಾಗಿ ಭಾರೀ ವಿರೋಧ, ಬಹಿಷ್ಕಾರದ ಬಿಸಿ ಎದುರಿಸಿದ್ದಏಷ್ಯಾಕಪ್ ಟಿ20 ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಬಗ್ಗುಬಡಿದಿದ್ದು, ಅಭಿಮಾನಿಗಳ ಆಕ್ರೋಶ ತಣಿಯುವಂತೆ ಮಾಡಿದೆ.

ಭಾನುವಾರ ದುಬೈ ಕ್ರೀಡಾಂಗಣದಲ್ಲಿ ನಡೆದ 'ಎ' ಗುಂಪಿನ ಅತಿ ಮಹತ್ವದ ಪಂದ್ಯದಲ್ಲಿ ಸೂರ್ಯಕುಮಾರ್ ನಾಯಕತ್ವದ ಭಾರತ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ತಂಡ ಸೂಪರ್-4 ಹಂತದಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತ ಪಡಿಸಿಕೊಂಡಿದೆ. ಅಲ್ಲದೆ, ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಪಾಕಿಸ್ತಾನ ಅಚ್ಚರಿ ಮೂಡಿಸಿತು. ಪಾಕ್‌ನನಿರ್ಧಾರ ತಪ್ಪಾಗಿತ್ತು ಎಂಬುದನ್ನು ಭಾರತದ ಬೌಲರ್‌ಗಳು ಆರಂಭ ದಲ್ಲೇ ಸಾಬೀತುಪಡಿಸಿದರು. ರನ್ ಗಳಿಸಲು ತಿಣುಕಾಡಿದ ಪಾಕ್, 9 ವಿಕೆಟ್ ನಷ್ಟದಲ್ಲಿ ಕೇವಲ 127 ರನ್ ಗಳಿಸಿತು. ಈ ಸಣ್ಣ ಮೊತ್ತದ ಗುರಿ ಭಾರತಕ್ಕೆ ಸವಾಲು ಎನಿಸಲಿಲ್ಲ. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಭಾರತ 15.5 ಓವರ್ ಗಳಲ್ಲೇ ಗೆಲುವಿನ ದಡ ಸೇರಿತು. ಆರಂಭಿಕ 2 ಎಸೆತಗಳಲ್ಲೇ ಬೌಂಡರಿ, ಸಿಕ್ಸರ್ ಮೂಲಕ 10 ರನ್ ದೋಚಿದ ಅಭಿಷೇಕ್ ಶರ್ಮಾ, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಶುಭ್ ಮನ್ ಗಿಲ್ (10 ರನ್) 2ನೇ ಓವರ್‌ನಲ್ಲಿ ಔಟಾದರೂ,

ತಂಡದ ರನ್ ವೇಗಕ್ಕೆ ಕಡಿವಾಣ ಬೀಳಲಿಲ್ಲ, ಅಭಿಷೇಕ್ 13 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ನೊಂದಿಗೆ 31 ರನ್ ಸಿಡಿಸಿದರು. ಅವರು 4ನೇ ಓವರ್‌ನ 4ನೇ ಎಸೆತದಲ್ಲಿ ಔಟಾದಾಗ ತಂಡದ ಸ್ಕೋರ್ 41. ಬಳಿಕ ಸೂರ್ಯಕುಮಾರ್ ಹಾಗೂ ತಿಲಕ್ ತಂಡವನ್ನು ಗೆಲುವಿನ ಹಾದಿ ಸುಗಮ ಮಾಡಿದರು. ಸೂರ್ಯಕುಮಾರ್ 37 ಎಸೆತಕ್ಕೆ ಔಟಾಗದೆ 47, ತಿಲಕ್ 31 ಎಸೆತಕ್ಕೆ 31 ರನ್ ಸಿಡಿಸಿದರು.

ಮಾರಕ ದಾಳಿ

 ಇದಕ್ಕೂ ಮುನ್ನ ಪಾಕ್ ಬ್ಯಾಟರ್‌ಗಳು ರನ್ ಗಳಿಸಲು ತೀವ್ರ ಕಸರತ್ತು ನಡೆಸಿದರು. ತಂಡದ 7 ಬ್ಯಾಟರ್ ಗಳು ತಾವು ಎದುರಿಸಿದ ಎಸೆತಕ್ಕಿಂತಲೂ ಕಡಿಮೆ ರನ್ ಬಾರಿಸಿದರು.ಜಮಾನ್ 17,ಹ್ಯಾರಿಸ್, ನಾಯಕ ಸಲ್ಮಾನ್ 3 ರನ್ ಗಳಿಸಿ ನಿರ್ಗಮಿಸಿದರು. ವಿಕೆಟ್ ಬೀಳದಂತೆ ನೋಡಿಕೊಂಡ ಆರಂಭಿಕ ಆಟಗಾರ ಫರ್ಹಾನ್ 44 ಎಸೆತಕ್ಕೆ 40 ರನ್‌ ರನ್‌ಸಿಡಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ಶಾಹೀನ್ ಅಫ್ರಿದಿ ಕೇವಲ 16 ಎಸೆತಗಳಲ್ಲೇ 33 ರನ್ ಸಿಡಿಸಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಕುಲ್ದೀಪ್‌ ಯಾದವ್ 3, ಅಕ್ಷ‌ರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಕಿತ್ತರು.