ಏಷ್ಯಾಕಪ್‌ನಲ್ಲಿ ಇಂದು ಭಾರತ-ಪಾಕಿಸ್ತಾನ ಮುಖಾಮುಖಿ. ಸೂಪರ್ 4 ಹಂತಕ್ಕೇರುವ ನಿಟ್ಟಿನಲ್ಲಿ ಈ ಪಂದ್ಯ ಮಹತ್ವದ್ದಾಗಿದೆ. ಗೆಲುವು ಯಾರಿಗೆ?

ದುಬೈ: ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್‌ ಮ್ಯಾಚ್‌ಗೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ. 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಇದೇ ಮೊದಲ ಸಲ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಸೂಪರ್ 4 ಹಂತಕ್ಕೇರುವ ನಿಟ್ಟಿನಲ್ಲಿ ಉಭಯ ತಂಡಗಳ ಪಾಲಿಗೆ ಈ ಪಂದ್ಯ ಸಾಕಷ್ಟು ಮಹತ್ವದ್ದೆನಿಸಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ತುಂಬಾನೆ ಪೈಪೋಟಿ ನಡೆಸುವ ಸಾಧ್ಯತೆಯಿದೆ.

ಸೂಪರ್ 4 ಲೆಕ್ಕಾಚಾರ ಹೀಗಿದೆ ನೋಡಿ

2025ರ ಏಷ್ಯಾಕಪ್ ಟೂರ್ನಿಯಲ್ಲಿ ಸದ್ಯ ಭಾರತ ಹಾಗೂ ಪಾಕಿಸ್ತಾನ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಜಯಿಸಿವೆ. ಒಂದು ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಯುಎಇ ಎದುರು 9 ವಿಕೆಟ್ ಅಂತರದ ಸುಲಭ ಗೆಲುವು ಸಾಧಿಸಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡವು ಇದೇ ಮೊದಲ ಸಲ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಓಮಾನ್ ಎದುರು ಗೆದ್ದು ಬೀಗಿದೆ. ನೆಟ್‌ ರನ್‌ರೇಟ್ ಉತ್ತಮವಾಗಿರುವ ಹಿನ್ನೆಲೆಯಲ್ಲಿ 'ಎ' ಗುಂಪಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಪಾಕಿಸ್ತಾನ ತಂಡವು ಎರಡನೇ ಸ್ಥಾನದಲ್ಲಿದೆ. ಇದೀಗ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆಲುವು ಸಾಧಿಸುವ ತಂಡವು ಬಹುತೇಕ ಸೂಪರ್ 4 ಹಂತಕ್ಕೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿವೆ. ಇದಾದ ಬಳಿಕ ನಡೆಯುವ ಪಂದ್ಯಗಳಲ್ಲಿ ಪವಾಡ ಸದೃಶ ರೀತಿಯಲ್ಲಿ ಎರಡು ಮ್ಯಾಚ್ ಗೆದ್ದರಷ್ಟೇ ಸೂಪರ್ 4 ರೇಸ್‌ ಲೆಕ್ಕಾಚಾರ ಕೊಂಚ ಅದಲು ಬದಲಾಗಬಹುದು. ಇಲ್ಲದಿದ್ದರೇ ಇಂದು ಗೆಲ್ಲುವ ತಂಡವು 'ಎ' ಗುಂಪಿನಿಂದ ಸೂಪರ್ 4 ಹಂತಕ್ಕೆ ಅಧಿಕೃತವಾಗಿ ಲಗ್ಗೆಯಿಡಲಿವೆ.

Scroll to load tweet…

ಸದ್ಯ ಭಾರತ ಕ್ರಿಕೆಟ್ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿ ಯುಎಇ ಎದುರು 9 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಯುಎಇ ನೀಡಿದ್ದ 58 ರನ್‌ಗಳ ಗುರಿಯನ್ನು ಭಾರತ ಕೇವಲ 4.3 ಓವರ್‌ನಲ್ಲೇ ಗುರಿ ತಲುಪಿತ್ತು. ಹೀಗಾಗಿ ಭಾರತದ ನೆಟ್‌ ರನ್‌ರೇಟ್ 10.483 ಆಗಿದೆ. ಇದೀಗ ಒಂದು ವೇಳೆ ಇಂದು ಭಾರತ ಪಾಕಿಸ್ತಾನ ತಂಡವನ್ನು ಮಣಿಸಿದರೆ, ಭಾರತದ ಬಳಿ 4 ಅಂಕಗಳು ಇರಲಿದ್ದು, ನೆಟ್‌ ರನ್‌ರೇಟ್‌ ಮತ್ತಷ್ಟು ಉತ್ತಮವಾಗಲಿದೆ. ಹೀಗಾಗಿ ಭಾರತ ಸೂಪರ್ 4 ಹಂತಕ್ಕೇರೋದು ಆಲ್ಮೋಸ್ಟ್ ಕನ್ಫರ್ಮ್ ಆಗಲಿದೆ. ಇದಾದ ಬಳಿಕ ಭಾರತ ಹೊರತುಪಡಿಸಿ ಯಾವುದೇ ತಂಡವು 'ಎ' ಗುಂಪಿನಲ್ಲಿ ನಾಲ್ಕಕ್ಕಿಂತ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುವುದಿಲ್ಲ.

ಇನ್ನೊಂದು ಕಡೆ ಪಾಕಿಸ್ತಾನ ತಂಡವು ಈಗಾಗಲೇ ಓಮಾನ್ ಎದುರು ಗೆದ್ದು ಬೀಗಿದೆ. ಒಂದು ವೇಳೆ ಇಂದು ಭಾರತ ಎದುರು ಪಾಕಿಸ್ತಾನ ತಂಡವು ಸೋತರೂ, ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಯುಎಇ ತಂಡವು ಸೋಲಿಸುವ ಮೂಲಕ ಪಾಕಿಸ್ತಾನ ತಂಡವು ಸೂಪರ್ 4 ಹಂತಕ್ಕೇರುವ ಲೆಕ್ಕಾಚಾರದಲ್ಲಿದೆ.

ಭಾರತಕ್ಕೆ ಕೊನೆಯ ಪಂದ್ಯದಲ್ಲಿ ಓಮಾನ್ ಸವಾಲು

ಪಾಕಿಸ್ತಾನ ಎದುರಿನ ಪಂದ್ಯದ ಬಳಿಕ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ, ಕ್ರಿಕೆಟ್ ಶಿಶು ಓಮಾನ್ ತಂಡವನ್ನು ಎದುರಿಸಲಿದೆ. ಓಮಾನ್ ತಂಡವನ್ನು ಭಾರತ ಅನಾಯಾಸವಾಗಿ ಸೋಲಿಸಲಿದೆ. ಭಾರತಕ್ಕೆ ಹೋಲಿಸಿದರೆ, ಓಮಾನ್ ತಂಡವು ಎಲ್ಲಾ ರೀತಿಯಲ್ಲೂ ದುರ್ಬಲವಾಗಿದೆ. ಹೀಗಾಗಿ ಭಾರತ ತಂಡವು ಅಜೇಯವಾಗಿ ಸೂಪರ್ 4 ಹಂತಕ್ಕೇರಲು ಎದುರು ನೋಡುತ್ತಿದೆ. ಹೀಗಾದಲ್ಲಿ ಯುಎಇ ಹಾಗೂ ಓಮಾನ್ ತಂಡಗಳು ಗ್ರೂಪ್ ಹಂತದಲ್ಲೇ ಹೊರಬೀಳಲಿವೆ.