ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ತಮ್ಮ ಪುತ್ರ ಇಜಾನ್‌ನ 8ನೇ ವರ್ಷದ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ. ವಿಚ್ಛೇದನದ ಬಳಿಕವೂ ಇಬ್ಬರೂ ಮಗನ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಅವರು ಮತ್ತೆ ಒಂದಾಗುತ್ತಾರೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ದುಬೈ: ಭಾರತದ ಮಾಜಿ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟ್‌ ನಾಯಕ ಶೋಯೆಬ್‌ ಮಲಿಕ್‌ ತಮ್ಮ ಪುತ್ರ ಇಜಾನ್‌ ಮಿರ್ಜಾ ಮಲಿಕ್‌ ಅವರ ಎಂಟನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಚ್ಛೇದನದ ಬಳಿಕ ಪ್ರತ್ಯೇಕವಾಗಿ ಜೀವನ ನಡೆಸುತ್ತಿರುವ ಇಬ್ಬರೂ, ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶುಭಾಶಯ ಸಂದೇಶಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಮತ್ತೆ ಇಬ್ಬರು ಒಂದಾಗ್ತಾರಾ ಎನ್ನುವಂತಹ ಚರ್ಚೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಸಾನಿಯಾ ಮಿರ್ಜಾ ಅವರು ಪುತ್ರ ಇಜಾನ್‌ ಜೊತೆಗಿನ ಹಲವು ಫೋಟೋಗಳನ್ನು ಹಂಚಿಕೊಂಡು ಭಾವನಾತ್ಮಕ ಸಂದೇಶದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಆರು ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಟೆನಿಸ್‌ ತಾರೆ, “ಅತಿ ದೊಡ್ಡ ಮತ್ತು ಅತ್ಯಂತ ಕರುಣಾಳು ಹೃದಯ ಹೊಂದಿರುವ ನನ್ನ ಮುದ್ದಿನ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀನು ನನ್ನ ಮಗನಾಗಿರುವುದಕ್ಕೆ ಧನ್ಯವಾದಗಳು. ಎಂಟು ವರ್ಷಗಳು ಕಳೆದಿವೆ” ಎಂದು ಬರೆದುಕೊಂಡಿದ್ದಾರೆ.

ಇತ್ತ ಶೋಯೆಬ್‌ ಮಲಿಕ್‌ ಕೂಡ ಎರಡು ದಿನಗಳ ಬಳಿಕ ಮಗನಿಗೆ ಶುಭಾಶಯ ತಿಳಿಸಿದ್ದಾರೆ. ತಮ್ಮ ರೀಲ್‌ ಜೊತೆ ಸಂಕ್ಷಿಪ್ತವಾದ ಪ್ರೀತಿಯ ಸಂದೇಶ ಹಂಚಿಕೊಂಡಿರುವ ಪಾಕಿಸ್ತಾನದ ಮಾಜಿ ಆಲ್‌ರೌಂಡರ್‌, “ಯೋ ಬ್ರೋ, ಹುಟ್ಟುಹಬ್ಬದ ಶುಭಾಶಯಗಳು! ಲವ್‌ ಯೂ” ಎಂದು ಬರೆದಿದ್ದಾರೆ.

ವಿಚ್ಛೇದನದ ಬಳಿಕ ಪ್ರತ್ಯೇಕ ಜೀವನ

ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ಅವರ ಈ ಸಂದೇಶಗಳು, ವಿಚ್ಛೇದನದ ಬಳಿಕವೂ ಮಗನ ಜೀವನದ ಪ್ರಮುಖ ಕ್ಷಣಗಳನ್ನು ಇಬ್ಬರೂ ಸಂಭ್ರಮಿಸುತ್ತಿರುವುದನ್ನು ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಾಜಿ ದಂಪತಿ 2010ರಲ್ಲಿ ವಿವಾಹವಾಗಿದ್ದರು. 2018ರ ಅಕ್ಟೋಬರ್‌ನಲ್ಲಿ ಅವರಿಗೆ ಇಜಾನ್‌ ಜನಿಸಿದ್ದ. 2024ರಲ್ಲಿ ಇಬ್ಬರೂ ಪ್ರತ್ಯೇಕವಾಗಿರುವುದನ್ನು ಘೋಷಿಸಿದ್ದರು. ಇದಾದ ಬಳಿಕ ಶೋಯೆಬ್‌ ಮಲಿಕ್‌ ಪಾಕಿಸ್ತಾನದ ನಟಿ ಸನಾ ಜಾವೇದ್‌ ಅವರನ್ನು ವಿವಾಹವಾದರು. 2024ರ ಜನವರಿಯಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದರು.

ಪ್ರತ್ಯೇಕ ಜೀವನ ನಡೆಸುತ್ತಿದ್ದರೂ ಸಾನಿಯಾ ಮತ್ತು ಶೋಯೆಬ್‌ ಇಬ್ಬರೂ ತಮ್ಮ ಮಗನೊಂದಿಗಿನ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಆತನ ಜೀವನದ ವಿಶೇಷ ಸಂದರ್ಭಗಳಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಇದು ಅಭಿಮಾನಿಗಳಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಮತ್ತೆ ಒಂದಾಗ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

View post on Instagram
 

ಟೆನಿಸ್‌ನಲ್ಲಿ ಸಾನಿಯಾ ಸಾಧನೆ

2023ರಲ್ಲಿ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ, ಭಾರತದ ಅತ್ಯಂತ ಯಶಸ್ವಿ ಟೆನಿಸ್‌ ಆಟಗಾರ್ತಿಯರಲ್ಲಿ ಒಬ್ಬರು. ಮಹಿಳಾ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಒಟ್ಟು ಆರು ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಅವರು, 2015ರಲ್ಲಿ ಮಹಿಳಾ ಡಬಲ್ಸ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು.

ಪಾಕಿಸ್ತಾನ ಪರ ಎರಡು ದಶಕಗಳ ಕ್ರಿಕೆಟ್‌

ಶೋಯೆಬ್‌ ಮಲಿಕ್‌ ಎರಡು ದಶಕಗಳಿಗೂ ಹೆಚ್ಚು ಕಾಲ ಪಾಕಿಸ್ತಾನ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದಾರೆ. ಅವರು ಪಾಕಿಸ್ತಾನ ಪರ 35 ಟೆಸ್ಟ್‌, 287 ಏಕದಿನ ಹಾಗೂ 124 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.