ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಕೊನೆಯ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದೆ. ಗುರುವಾರ ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳು ಸೆಣಸಲಿವೆ. ಡೆಲ್ಲಿ ಈ ಬಾರಿ ಆಡಿದ ಮೂರು ಪಂದ್ಯಗಳಲ್ಲಿ ಒಂದನ್ನೂ ಸೋತಿಲ್ಲ. ಕೆ.ಎಲ್.ರಾಹುಲ್ ಆಕರ್ಷಣೆಯಾಗಿದ್ದು, ಪಿಚ್ ಬ್ಯಾಟಿಂಗ್‌ಗೆ ಸಹಕಾರಿ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಸಂಭಾವ್ಯ ಆಟಗಾರರ ಪಟ್ಟಿಯನ್ನು ನೀಡಲಾಗಿದೆ. ಪಂದ್ಯವು ಸಂಜೆ 7.30ಕ್ಕೆ ನಡೆಯಲಿದೆ. 

ಬೆಂಗಳೂರು: ಆರ್‌ಸಿಬಿ ಈ ಸಲ ಕಪ್ ಗೆಲ್ಲುತ್ತಾ ಎಂಬ ಪ್ರಶ್ನೆಗಿಂತ ತನ್ನ ತವರು ಕ್ರೀಡಾಂಗಣದ ಪಂದ್ಯದಲ್ಲಿ ಗೆಲ್ಲಲಿದೆಯೇ ಎಂಬ ಕುತೂಹಲ ಈಗ ಹೆಚ್ಚಾಗಿದೆ. ಇದಕ್ಕೆ ಕಾರಣ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ ಕೊನೆ 7 ಪಂದ್ಯಗಳ ಪೈಕಿ ಆರ್‌ಸಿಬಿ 4ರಲ್ಲಿ ಸೋಲನುಭವಿಸಿದೆ. ಈ ಬಾರಿ ಕೋಲ್ಕತಾ, ಚೆನ್ನೈ ಹಾಗೂ ಮುಂಬೈ ಭದ್ರ ಕೋಟೆಗಳನ್ನು ಬೇಧಿಸಿದ್ದರೂ ಇತ್ತೀಚೆಗೆ ತವರಿನಲ್ಲೇ ಸೋಲಿನ ಆಘಾತಕ್ಕೆ ಒಳಗಾಗಿದ್ದ ಆರ್‌ಸಿಬಿ ಈಗ ಮತ್ತೆ ತವರಿಗೆ ಆಗಮಿಸಿದೆ.

ಗುರುವಾರ ಆರ್‌ಸಿಬಿ ಹಾಗೂ ಡೆಲ್ಲಿ ಪರಸ್ಪರ ಸೆಣಸಾಡಲಿದೆ. ಆರ್‌ಸಿಬಿ ಪಾಲಿಗೆ ಈ ಪಂದ್ಯ ಕಠಿಣ ಸವಾಲಾಗಿರುವುದಕ್ಕೆ 2 ಕಾರಣಗಳಿವೆ. ಒಂದು,
ಏ.2ರಂದು ಗುಜರಾತ್ ವಿರುದ್ಧ ಬೆಂಗಳೂರಿನಲ್ಲೇ ಆರ್‌ಸಿಬಿ ಸೋತಿತ್ತು. ಮತ್ತೊಂದು, ಈ ಸಲ ಡೆಲ್ಲಿ ಆಡಿರುವ 3 ಪಂದ್ಯಗಳ ಪೈಕಿ ಒಂದರಲ್ಲೂ ಸೋತಿಲ್ಲ. 

ಭಾರಿ ಪೈಪೋಟಿ: ಆರ್‌ಸಿಬಿ ತವರಿನ ಕ್ರೀಡಾಂಗಣದ ಲಾಭಪಡೆಯುವುದರಲ್ಲಿ ಸ್ವಲ್ಪ ಹಿಂದೆಬಿದ್ದಂತಿದೆ. ಆದರೆ ಈ ಬಾರಿ ಬಲಿಷ್ಠ ತಂಡ ಕಟ್ಟಿ ಟೂರ್ನಿಯಲ್ಲಿ ಆಡುತ್ತಿರುವ ಆರ್‌ಸಿಬಿ, 4ನೇ ಗೆಲುವಿನ ವಿಶ್ವಾಸ ಹೊಂದಿದೆ. ವಿರಾಟ್ ಕೊಹ್ಲಿಯ ಲಯ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಭೂತಪೂರ್ವ ಆಟ, ಸ್ಪಿನ್ನರ್‌ಗಳ ಕೈಚಳಕ, ಅನುಭವಿ ವೇಗಿಗಳ ಮೊನಚು ದಾಳಿ ತಂಡವನ್ನು ಅಂಕಪಟ್ಟಿಯಲ್ಲಿ ಮೇಲಕ್ಕೇರಿಸಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಡೆಲ್ಲಿ ವಿರುದ್ದ ಪಂದ್ಯಕ್ಕೂ ಮೊದಲೇ ಆರ್‌ಸಿಬಿ ಫ್ಯಾನ್ಸ್‌ಗೆ ವಿಐ ಭರ್ಜರಿ ಕೊಡುಗೆ

ಈ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್ಸ್‌ ಹಾಗೂ ಡೆಲ್ಲಿ ಸ್ಪಿನ್ನರ್ಸ್ ನಡುವೆ ರೋಚಕ ಪೈಪೋಟಿ ಕಂಡುಬರಬಹುದು. ಕೊಹ್ಲಿ ಮತ್ತೊಂದು ದೊಡ್ಡ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ. ನಾಯಕ ರಜತ್, ಟಿಮ್‌ ಡೇವಿಡ್, ಜಿತೇಶ್ ಶರ್ಮಾ ಈ ಮೂವರ ಸ್ಟ್ರೈಕ್‌ರೇಟ್ ಕೂಡಾ 150ಕ್ಕಿಂತ ಹೆಚ್ಚಿದೆ. ದೇವದತ್ ಪಡಿಕ್ಕಲ್, ಲಿವಿಂಗ್ ಸ್ಟೋನ್ ಕೂಡಾ ಅಬ್ಬರಿಸುತ್ತಿದ್ದಾರೆ. ಮತ್ತೊಂದೆಡೆ ಕುಲೀಪ್‌ ಯಾದವ್,ಅಕ್ಷರ್‌ ಪಟೇಲ್‌ ಹಾಗೂ ವಿಪ್ರಾಜ್ ನಿಗಮ್‌ ಸ್ಪಿನ್ ದಾಳಿ ಡೆಲ್ಲಿಯ ಪ್ರಮುಖ ಅಸ್ತ್ರ ಪ್ರಚಂಡ ವೇಗಿ ಮಿಚೆಲ್ ಸ್ಟಾರ್ಕ್‌ರ ದಾಳಿಯನ್ನು ಎದುರಿಸಲು ಆರ್‌ಸಿಬಿ ಆರಂಭಿಕರು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದರ ಮೇಲೆ ಪಂದ್ಯದ ಭವಿಷ್ಯ ಅಡಗಿದೆ. ಇನ್ನು, ಆರ್‌ಸಿಬಿಯ ಬೌಲಿಂಗ್ ಕೂಡಾ ಬಲಿಷ್ಠವಾಗಿದೆ. ವೇಗಿ ಭುವನೇಶ್ವರ್, ಹೇಜಲ್ ವುಡ್ ಜೊತೆಗೆ ಕೃನಾಲ್, ಸುಯಶ್ ಡೆಲ್ಲಿ ಬ್ಯಾಟರ್ ಗಳನ್ನು ಕಾಡಲು ಸಜ್ಜಾಗಿದ್ದಾರೆ.

ರಾಹುಲ್ ಆಕರ್ಷಣೆ: ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧವಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಮತ್ತೆ ತಮ್ಮ ತವರಿನಲ್ಲಿ ಆಡಲಿದ್ದು, ಪಂದ್ಯದ ಪ್ರಮುಖ ಆಕರ್ಷಣೆ. ಚೆನ್ನೈ ಪಂದ್ಯದಲ್ಲಿ ರಾಹುಲ್ ಆರಂಭಿಕನಾಗಿ ಆಡಿದ್ದರೂ, ಆರ್‌ಸಿಬಿ ವಿರುದ್ಧ ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕಾಗಬಹುದು.

ಇದನ್ನೂ ಓದಿ: ಆರ್‌ಸಿಬಿ-ಡೆಲ್ಲಿ ಬೆಂಗಳೂರು ಮ್ಯಾಚ್ ಟಿಕೆಟ್ ಆನ್‌ಲೈನ್‌ನಲ್ಲಿ ಸಿಗುತ್ತಾ? ಬೆಲೆ ಎಷ್ಟಿದೆ?

ಪಿಚ್ ರಿಪೋರ್ಟ್

ಇಲ್ಲಿನ ಪಿಚ್ ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ, ಚೇಸಿಂಗ್‌ ಸುಲಭ ವಾಗಲಿರುವ ಕಾರಣ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.

ಸಂಭಾವ್ಯ ಆಟಗಾರರ ಪಟ್ಟಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ/ರಸಿಕ್ ಧರ್.

ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೆಸರ್ ಮೆಕ್‌ಗರ್ಕ್, ಅಭಿಷೇಕ್ ಪೊರೆಲ್, ಕೆ ಎಲ್ ರಾಹುಲ್, ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್(ನಾಯಕ), ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಮೋಹಿತ್ ಶರ್ಮಾ/ಟಿ ನಟರಾಜನ್, ಅಶುತೋಷ್ ಶರ್ಮಾ

ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್