ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇವರ ಹೆಸರಿನಲ್ಲಿರುವ ಅತಿಹೆಚ್ಚು ಪಂದ್ಯ, ಬೌಂಡರಿ ಹಾಗೂ ರನ್ಗಳ ಮೂರು ದಾಖಲೆಗಳನ್ನು ಮುರಿಯುವುದು ಅಸಾಧ್ಯ. ಆಧುನಿಕ ಕ್ರಿಕೆಟ್ನ ತಾರೆಯರಾದ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರಿಂದಲೂ ಈ ದಾಖಲೆಗಳನ್ನು ಅಳಿಸಲು ಸಾಧ್ಯವಿಲ್ಲ.
ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಹಲವು ದಿಗ್ಗಜ ಆಟಗಾರರು ಮಿಂಚಿ ಮರೆಯಾಗಿದ್ದಾರೆ. ಆದರೆ ಅವರದ್ದೆಲ್ಲಾ ಒಂದು ತೂಕವಾದರೇ, ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರದ್ದು ಮತ್ತೊಂದು ತೂಕ. ಸುಮಾರು 24 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಾಖಲೆಗಳ ಪೈಕಿ ಹಲವು ದಾಖಲೆಗಳನ್ನು ಮುರಿಯುವುದು ಅಸಾಧ್ಯವೇ ಸರಿ.
ಇನ್ನು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಮೂರು ಅಪರೂಪದ ದಾಖಲೆಗಳನ್ನು ಆಧುನಿಕ ಕ್ರಿಕೆಟ್ನ ಸೂಪರ್ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ಜೋ ರೂಟ್ ಅವರಿಂದ ಕೂಡಾ ಮುರಿಯಲು ಸಾಧ್ಯವಿಲ್ಲ. ಅಷ್ಟಕ್ಕೂ ಆ ಮೂರು ದಾಖಲೆಗಳು ಯಾವುವು ಎನ್ನಿವುದನ್ನು ನೋಡೋಣ ಬನ್ನಿ.
1. ಅತಿಹೆಚ್ಚು ಅಂತಾರಾಷ್ಟ್ರೀಯ ಮ್ಯಾಚ್:
ಸಚಿನ್ ತೆಂಡೂಲ್ಕರ್ 24 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನಲ್ಲಿ ಭಾರತ ಪರ ಒಟ್ಟಾರೆ 664 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 200 ಟೆಸ್ಟ್, 463 ಏಕದಿನ ಹಾಗೂ ಒಂದು ಟಿ20 ಪಂದ್ಯವನ್ನಾಡಿದ್ದಾರೆ. 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಸಚಿನ್, 2013ರವರೆಗೂ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದರು. ಇನ್ನು ಹಾಲಿ ಆಟಗಾರರ ಪೈಕಿ ವಿರಾಟ್ ಕೊಹ್ಲಿ 565 ಪಂದ್ಯಗಳನ್ನಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ದಾಖಲೆ ಮರಿಯಲು ಕೊಹ್ಲಿ 99 ಪಂದ್ಯಗಳನ್ನಾಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಅನುಮಾನ. ಇನ್ನು ಜೋ ರೂಟ್ ಕೇವಲ 396 ಪಂದ್ಯಗಳನ್ನಾಡಿದ್ದು, ಅವರು ಕೂಡಾ ಸಚಿನ್ ಈ ದಾಖಲೆ ಮುರಿಯೋಕೆ ಸಾಧ್ಯವೇ ಇಲ್ಲ.
2. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ಬೌಂಡರಿ ದಾಖಲೆ:
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಸಚಿನ್ ಒಟ್ಟಾರೆ 4,340 ಬೌಂಡರಿ ಸಿಡಿಸಿ ಅಗ್ರಸ್ಥಾನ ಹೊಂದಿದ್ದಾರೆ. ಇದರಲ್ಲಿ 4076 ಬೌಂಡರಿ ಹಾಗೂ 264 ಸಿಕ್ಸರ್ಗಳು ಸೇರಿವೆ. ಇನ್ನು ವಿರಾಟ್ ಕೊಹ್ಲಿ 3,133 ಬೌಂಡರಿ ಬಾರಿಸಿದ್ದಾರೆ. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇನ್ನೂ ಒಂದು ಸಾವಿರಕ್ಕೂ ಹೆಚ್ಚು ಬೌಂಡರಿ ಬಾರಿಸುವುದು ಅನುಮಾನ. ಇಂಗ್ಲೆಂಡ್ ದಿಗ್ಗಜ ಕ್ರಿಕೆಟಿಗ ಜೋ ರೂಟ್ ಒಟ್ಟಾರೆ 2390 ಬೌಂಡರಿ ಬಾರಿಸಿದ್ದಾರೆ. ಹೀಗಾಗಿ ಈ ದಾಖಲೆ ಕೂಡಾ ಸಚಿನ್ ಹೆಸರಿನಲ್ಲಿ ಅಚ್ಚಳಿಯದೇ ಉಳಿಯಲಿದೆ.
3. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್:
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆಯೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿಯೇ ಇದೆ. ಸಚಿನ್ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಒಟ್ಟಾರೆ 34,357 ರನ್ ಸಿಡಿಸಿದ್ದಾರೆ. ಟೆಸ್ಟ್ನಲ್ಲಿ 15,921, ಏಕದಿನ ಕ್ರಿಕೆಟ್ನಲ್ಲಿ 18,426 ಹಾಗೂ ಟಿ20 ಕ್ರಿಕೆಟ್ನಲ್ಲಿ 10 ರನ್ ಸಿಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ 28,527 ರನ್ ಸಿಡಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದು, ಸಚಿನ್ ದಾಖಲೆ ಮುರಿಯೋದು ಅಸಾಧ್ಯ.


