* ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜಸ್‌ಪ್ರೀತ್ ಬುಮ್ರಾ* ಒಂದೇ ಓವರ್‌ನಲ್ಲಿ 29 ರನ್ ಚಚ್ಚಿ ವಿಶ್ವದಾಖಲೆ ನಿರ್ಮಿಸಿದ ಬುಮ್ರಾ* 2007ರ ದಿನಗಳು ನೆನಪಾದವು ಎಂದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್

ಬರ್ಮಿಂಗ್‌ಹ್ಯಾಮ್‌(ಜು.03): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯದ ಎರಡನೇ ದಿನವೂ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಕ್ಕಿದೆ. ಮಳೆಯ ಅಡಚಣೆಯ ಹೊರತಾಗಿಯೂ ಉಭಯ ತಂಡಗಳ ನಡುವಿನ 5ನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಜಸ್ಪ್ರೀತ್ ಬುಮ್ರಾ ನೇನೃತ್ವದ ಭಾರತ ತಂಡವು ಬಿಗಿ ಹಿಡಿತ ಸಾಧಿಸಿದೆ. ಇದೆಲ್ಲದರ ನಡುವೆ ಜಸ್ಪ್ರೀತ್ ಬುಮ್ರಾ ಅವರ ವಿಶ್ವದಾಖಲೆಯ ಬ್ಯಾಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಹೌದು, ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳ ನಡುವೆ ಪುನರ್‌ನಿಗದಿಯಾಗಿರುವ ಟೆಸ್ಟ್ ಪಂದ್ಯದ ಮೊದಲ ದಿನದಾಟದಾರಂಭದಲ್ಲಿ ಟೀಂ ಇಂಡಿಯಾ (Team India) 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆರನೇ ವಿಕೆಟ್‌ಗೆ ರಿಷಭ್ ಪಂತ್ (Rishabh Pant) ಹಾಗೂ ರವೀಂದ್ರ ಜಡೇಜಾ 222 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರಿಷಭ್ ಪಂತ್ 146 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೇ, ರವೀಂದ್ರ ಜಡೇಜಾ (Ravindra Jadeja) 104 ರನ್ ಬಾರಿಸಿ ಟೆಸ್ಟ್ ವೃತ್ತಿಜೀವನದ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನು 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಟೀಂ ಇಂಡಿಯಾ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ (Jasprit Bumrah), ಟೆಸ್ಟ್‌ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ವಿಶ್ವದಾಖಲೆ ನಿರ್ಮಿಸಿದರು.

2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್‌ ಸಿಂಗ್‌ರಿಂದ ಓವರಲ್ಲಿ 6 ಸಿಕ್ಸರ್‌ ಚಚ್ಚಿಸಿಕೊಂಡಿದ್ದ ಸ್ಟುವರ್ಟ್‌ ಬ್ರಾಡ್‌, ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ 84ನೇ ಓವರಲ್ಲಿ 35 ರನ್‌ ಬಿಟ್ಟುಕೊಟ್ಟರು. ಜಸ್‌ಪ್ರೀತ್‌ ಬುಮ್ರಾ 4 ಬೌಂಡರಿ, 2 ಸಿಕ್ಸರ್‌ ಸಿಡಿಸಿದ್ದಲ್ಲದೇ 5 ವೈಡ್‌ ಮತ್ತು ಒಂದು ನೋಬಾಲ್‌ ಸಹ ಭಾರತದ ಖಾತೆಗೆ ಸೇರಿದವು.

ಈ ಮೊದಲು ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ (Brian Lara) 19 ವರ್ಷಗಳ ಹಿಂದೆ ಟೆಸ್ಟ್‌ ಪಂದ್ಯದ ಓವರ್‌ವೊಂದರಲ್ಲಿ 28 ರನ್ ಬಾರಿಸಿದ್ದರು. ಆದರೆ ಇದೀಗ ಬುಮ್ರಾ 29 ರನ್ ಬಾರಿಸುವ ಮೂಲಕ ಲಾರಾ ದಾಖಲೆಯನ್ನು ದೂಳೀಪಟ ಮಾಡುವಲ್ಲಿ ಯಶಸ್ವಿಯಾದರು. ಜಸ್‌ಪ್ರೀತ್ ಬುಮ್ರಾ ಅವರ ಬ್ಯಾಟಿಂಗ್ ಅನ್ನು 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಬಾರಿಸಿದ 6 ಸಿಕ್ಸರ್‌ಗಳನ್ನು ನೆನಪಿಸುವಂತೆ ಮಾಡಿತ್ತು. 2007ರಲ್ಲಿ ಡರ್ಬನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಎದುರು ಯುವರಾಜ್ ಸಿಂಗ್ (Yuvraj Singh) 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಇದೇ ವಿಚಾರವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಕೂಡಾ ಮೆಲುಕು ಹಾಕಿದ್ದಾರೆ.

ಹೀಗಿತ್ತು ನೋಡಿ ಬುಮ್ರಾ ಬಾರಿಸಿದ ವಿಶ್ವದಾಖಲೆಯ ರನ್‌ ಸುರಿಮಳೆ:

Scroll to load tweet…

ಏನಿದು, ಯುವಿನಾ ಅಥವಾ ಬುಮ್ರಾ ನಾ? 2007ರ ದಿನಗಳು ನೆನಪು ಮಾಡಿದವು ಎಂದು ಯುವರಾಜ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಟ್ಯಾಗ್‌ ಮಾಡಿದ್ದಾರೆ. ಇನ್ನು ಸಚಿನ್ ತೆಂಡುಲ್ಕರ್ ಮಾಡಿದ ಟ್ವೀಟ್‌ಗೆ ಯುವರಾಜ್ ಸಿಂಗ್ ಟ್ವೀಟ್ ಮೂಲಕ ಸ್ಮೈಲ್ ಎಮೋಜಿ ಹಾಕಿದ್ದಾರೆ.

Scroll to load tweet…
Scroll to load tweet…

ರಿಷಭ್ ಪಂತ್, ರವೀಂದ್ರ ಜಡೇಜಾ ಶತಕ ಹಾಗೂ ನಾಯಕ ಜಸ್ಪ್ರೀತ್ ಬುಮ್ರಾ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಎದುರು ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 416 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಭಾರತ ತಂಡವನ್ನು ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡುವಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಯಶಸ್ವಿಯಾಗಿದ್ದಾರೆ. ಎರಡನೇ ದಿನದಾಟದಂತ್ಯದ ವೇಳೆ ಇಂಗ್ಲೆಂಡ್ ತಂಡವು 84 ರನ್‌ಗಳಿಗೆ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.