KKR ಅಲ್ಲವೇ ಅಲ್ಲ, ಈ ಐಪಿಎಲ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್; ಪ್ರಕಟಣೆಯೊಂದೇ ಬಾಕಿ..?
ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದಿರುವ ರಾಹುಲ್ ದ್ರಾವಿಡ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ದಶಕದ ಬಳಿಕ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇತ್ತೀಚೆಗಷ್ಟೇ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರ ಟೀಂ ಇಂಡಿಯಾ ಕೋಚ್ ಅವಧಿ ಕೂಡಾ ಮುಕ್ತಾಯವಾಗಿತ್ತು.
ಭಾರತ ಪರ ಟ್ರೋಫಿ ಜಯಿಸಿದ ಬಳಿಕ ರಾಹುಲ್ ದ್ರಾವಿಡ್ ಇದೀಗ, ಇಂಡಿಯನ್ ಪ್ರೀಮಿಯರ್ ಲೀಗ್‌ನತ್ತ ಚಿತ್ತ ನೆಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಹಲವು ಐಪಿಎಲ್ ಫ್ರಾಂಚೈಸಿಗಳ ಜತೆ ಹೆಸರು ಥಳುಕು ಹಾಕಿಕೊಂಡಿತ್ತು. ಅದರಲ್ಲೂ ಗೌತಮ್ ಗಂಭೀರ್, ಕೆಕೆಆರ್ ತಂಡದ ಮೆಂಟರ್‌ಶಿಪ್ ತ್ಯಜಿಸಿ ಟೀಂ ಇಂಡಿಯಾ ಕೋಚ್ ಆದ ಬಳಿಕವಂತೂ ದ್ರಾವಿಡ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಲಿದ್ದಾರೆ ಎಂದೆಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಹೊಸ ಬೆಳವಣಿಗೆಯೊಂದರಲ್ಲಿ ರಾಹುಲ್ ದ್ರಾವಿಡ್, ರಾಜಸ್ಥಾನ ರಾಯಲ್ಸ್ ತಂಡದ ತೆಕ್ಕೆಗೆ ಜಾರಲಿದ್ದಾರೆ ಎಂದು ವರದಿಯಾಗಿದೆ.
ಕನ್ನಡಿಗ ಕೆ ಎಲ್ ರಾಹುಲ್ ಕನಸಿಗೆ ಎಳ್ಳು ನೀರು ಬಿಟ್ಟ ಬಿಸಿಸಿಐ..!
"ರಾಜಸ್ಥಾನ ರಾಯಲ್ಸ್ ಹಾಗೂ ರಾಹುಲ್ ದ್ರಾವಿಡ್ ನಡುವೆ ಈಗಾಗಲೇ ಮಾತುಕತೆ ನಡೆದಿದ್ದು, ಪ್ರಕಟಣೆ ಮಾಡುವುದೊಂದೇ ಬಾಕಿ ಉಳಿದಿದೆ" ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗುವ ಮುನ್ನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಇದಾದ ಬಳಿಕ 2021ರ ಐಸಿಸಿ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆ ಅಲಂಕರಿಸಿದ್ದರು. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಾಗೂ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿತ್ತು. ಆದರೆ ಕೋಚ್ ವೃತ್ತಿಜೀವನದ ಕೊನೆಯ ಸವಾಲು ಜಯಿಸುವಲ್ಲಿ ದ್ರಾವಿಡ್ ಯಶಸ್ವಿಯಾಗಿದ್ದರು.