* ಮೂರು ಮಾದರಿ ಭಾರತ ಕ್ರಿಕೆಟ್‌ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿತ್ ಶರ್ಮಾ* ವರ್ಕ್‌ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಿಂದ ಟಿ20 ನಾಯಕತ್ವದಿಂದ ವಿಶ್ರಾಂತಿ ನೀಡಲು ಸಲಹೆ* 35 ವರ್ಷದ ಹಿಟ್‌ಮ್ಯಾನ್‌ಗೆ ಏಕದಿನ ಹಾಗೂ ಟೆಸ್ಟ್‌ನತ್ತ ಗಮನ ಹರಿಸಲು ಇದು ಅನುಕೂಲವಾಗಲಿದೆ

ನವದೆಹಲಿ(ಜೂ.27): ಮೂರು ಮಾದರಿಯ ಭಾರತ ಕ್ರಿಕೆಟ್ ತಂಡದ (Indian Cricket Team) ನಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ 35 ವರ್ಷದ ರೋಹಿತ್ ಶರ್ಮಾ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ವರ್ಕ್‌ಲೋಡ್‌ ಮ್ಯಾನೇಜ್‌ ಮಾಡುವ ದೃಷ್ಟಿಯಿಂದ ಆಯ್ಕೆ ಸಮಿತಿ ಇನ್ನೂ ಒಳ್ಳೆಯ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಈ ಕುರಿತಂತೆ ಸಲಹೆ ನೀಡಿರುವ ವಿರೇಂದ್ರ ಸೆಹ್ವಾಗ್ (Virender Sehwag), ರೋಹಿತ್ ಶರ್ಮಾ ಅವರನ್ನು ಟಿ20 ಕ್ರಿಕೆಟ್ ತಂಡದ ನಾಯಕತ್ವದಿಂದ ಬಿಡುಗಡೆಗೊಳಿಸಬೇಕು. ಹೀಗಾದಲ್ಲಿ ರೋಹಿತ್ ಶರ್ಮಾಗೆ ಸಾಕಷ್ಟು ವಿಶ್ರಾಂತಿ ಕೂಡಾ ಸಿಗಲಿದ್ದು, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಮತ್ತಷ್ಟು ಉತ್ಸಾಹದಿಂದ ಪಾಲ್ಗೊಳ್ಳಲು ಅವರಿಗೆ ಅನುಕೂಲವಾಗಲಿದೆ ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ (ICC T20 World Cup) ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ (Virat Kohli) ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕರಾಗಿ ನೇಮಕವಾಗಿದ್ದರು. ವಿರಾಟ್ ಕೊಹ್ಲಿ, ಯುಎಇನಲ್ಲಿ ಆಯೋಜನೆಗೊಂಡಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ, ತಾವು ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು.

ಕೊಹ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆಯೇ ಬಿಸಿಸಿಐ (BCCI) ಆಯ್ಕೆ ಸಮಿತಿಯು ಮರು ಯೋಚನೆ ಮಾಡದೇ ರೋಹಿತ್ ಶರ್ಮಾಗೆ (Rohit Sharma) ಭಾರತ ಟಿ20 ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆ ಮಾಡಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ತಂಡವನ್ನು ಆಯ್ಕೆ ಮಾಡುವಾಗ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಏಕದಿನ ತಂಡಕ್ಕೂ ರೋಹಿತ್ ಶರ್ಮಾ ಅವರಿಗೆ ಬಿಸಿಸಿಐ ನಾಯಕ ಪಟ್ಟ ಕಟ್ಟಿತು.

ಇಂಗ್ಲೆಂಡ್​​​ ಟೂರ್​​​ ರೋಹಿತ್​​​-ದ್ರಾವಿಡ್​​​ ಜೋಡಿಗೆ ಅಗ್ನಿಪರೀಕ್ಷೆ..!

ಭಾರತ ಕ್ರಿಕೆಟ್ ಟೀಂ ಮ್ಯಾನೇಜ್‌ಮೆಂಟ್ ಭವಿಷ್ಯದ ಟಿ20 ನಾಯಕರನ್ನು ನೇಮಕ ಮಾಡುವ ಬಗ್ಗೆ ಆಲೋಚನೆ ಮಾಡಿದ್ದರೇ, ರೋಹಿತ್ ಶರ್ಮಾ ಅವರಿಗೆ ಟಿ20 ನಾಯಕತ್ವದಿಂದ ಬಿಡುವು ಮಾಡುವುದು ಒಳಿತು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ. ಚುಟುಕು ಕ್ರಿಕೆಟ್‌ ತಂಡಕ್ಕೆ ಬೇರೆ ನಾಯಕನನ್ನು ಆಯ್ಕೆ ಮಾಡಿಕೊಂಡರೇ ಭಾರತ ಟೆಸ್ಟ್ ಹಾಗೂ ಏಕದಿನ ತಂಡವನ್ನು ಇನ್ನಷ್ಟು ಉತ್ಸಾಹದಿಂದ ಮುನ್ನಡೆಸಲು ಅವಕಾಶ ದೊರೆಯಲಿದೆ ಎಂದು ವೀರೂ ಹೇಳಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (Team India), ಪುನರ್‌ನಿಗದಿಯಾಗಿರುವ ಇಂಗ್ಲೆಂಡ್ ಎದುರಿನ ಐದನೇ ಟೆಸ್ಟ್ ಪಂದ್ಯವನ್ನಾಡಲು ಬರ್ಮಿಂಗ್‌ಹ್ಯಾಮ್‌ಗೆ ಬಂದಿಳಿದಿದೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಟೆಸ್ಟ್ ಪಂದ್ಯವು ಜುಲೈ 01ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ. ಸದ್ಯ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಲೀಸೆಸ್ಟರ್‌ನಲ್ಲಿನ ಹೋಟೆಲ್‌ನಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಜುಲೈ 01ಕ್ಕೂ ಮೊದಲು ಕೋವಿಡ್‌ನಿಂದ ಚೇತರಿಸಿಕೊಳ್ಳದಿದ್ದರೇ ಇಂಗ್ಲೆಂಡ್ ಎದುರಿನ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಿಂದ ಹಿಟ್‌ಮ್ಯಾನ್ ಹೊರಬೀಳುವ ಸಾಧ್ಯತೆಯಿದೆ.

ಶನಿವಾರ ನಡೆಸಿದ ಕೋವಿಡ್ ಟೆಸ್ಟ್ ವರದಿಯಲ್ಲಿ ರೋಹಿತ್ ಶರ್ಮಾಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ರೋಹಿತ್ ಶರ್ಮಾಗೆ ಬ್ಯಾಕ್‌ಅಪ್ ಓಪನ್ನರ್ ಆಗಿ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ಗೆ ಬುಲಾವ್ ಬಂದಿದೆ. ಸದ್ಯ ಇಂಗ್ಲೆಂಡ್‌ನಲ್ಲಿ ಯಾವುದೇ ಕ್ವಾರಂಟೈನ್ ರೂಲ್ಸ್‌ ಜಾರಿಯಿಲ್ಲ. ಹೀಗಾಗಿ ಮಯಾಂಕ್‌ ಅಗರ್‌ವಾಲ್‌, ಬರ್ಮಿಂಗ್‌ಹ್ಯಾಮ್‌ಗೆ ಬಂದಿಳಿಯುತ್ತಿದ್ದಂತೆಯೇ ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.